
ಉಳ್ಳಾಲ (ಫೆ.24): ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ದಂಪತಿಯ ಏಕೈಕ ಪುತ್ರಿ ವಿದಿಶಾ, ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
2019ರಲ್ಲಿ ದುಬೈಗೆ ತೆರಳಿ ಎಕ್ಸ್ಯೂಜೆಟ್‌ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರತಿ ದಿನ ಕಂಪನಿಯ ಕ್ಯಾಬ್‌ನಲ್ಲಿ ಸಂಚರಿಸುತ್ತಿದ್ದ ವಿದಿಶಾ, ಗುರುವಾರ ತಡವಾಯಿತು ಎಂದು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದೆಸೆಯಲ್ಲೇ ರೋಟರಾಕ್ಟ್ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಕಾರು ಅಪಘಾತದಲ್ಲಿ ಬಿಆರ್‌ಎಸ್ ಯುವ ಶಾಸಕಿ ಲಾಸ್ಯ ನಂದಿತಾ ಸಾವು
ದುಬೈನಲ್ಲಿ ವಾಹನ ಚಾಲನಾ ಲೈಸನ್ಸ್ ಪಡೆದ ಬಳಿಕ ಕಳೆದ ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದ ವಿದಿಶಾ ತಂದೆ, ತಾಯಿಯನ್ನು ದುಬೈಗೆ ಕರೆಸಿ ಕಾರಿನಲ್ಲಿ ಸುತ್ತಾಡಿಸಿದ್ದರು. ಊರಿನಲ್ಲಿ ತಂದೆ ತಾಯಿ ಮಗಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ