ಅಪಾರ್ಟ್‌ಮೆಂಟ್ ಬಾಲ್ಕನಿ ಸ್ವಚ್ಛಗೊಳಿಸುವಾಗ ಐದನೇ ಮಹಡಿಯಿಂದ ಆಯ ತಪ್ಪಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಡಿ.11) : ಅಪಾರ್ಟ್‌ಮೆಂಟ್ ಬಾಲ್ಕನಿ ಸ್ವಚ್ಛಗೊಳಿಸುವಾಗ ಐದನೇ ಮಹಡಿಯಿಂದ ಆಯ ತಪ್ಪಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್ ನಿವಾಸಿ ಖುಷ್ಬೂ ಆಶೀಶ್ ತ್ರಿವೇದಿ(32) ಮೃತ ದುರ್ದೈವಿ. ಡಿ.7ರಂದು ಸಂಜೆ 4.30ರ ವೇಳೆಗೆ ಮನೆಯ ಬಾಲ್ಕಾನಿ ಸ್ಪಚ್ಛಗೊಳಿಸುತ್ತಿದ್ದರು. ಈ ವೇಳೆ ಆಯ ತಪ್ಪಿ ಐದನೇ ಮಹಡಿಯಿಂದ ಕೆಳಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡು ರಕ್ತ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಖುಷ್ಬೂ ಅವರನ್ನು ಸ್ಥಳೀಯ ನಿವಾಸಿಗಳು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಆಕೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಗುಜರಾತ್ ಮೂಲದ ಖುಷ್ಬೂ ಅವರು 2017ನೇ ಸಾಲಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಶೀಶ್ ತ್ರಿವೇದಿ ಎಂಬುವವರನ್ನು ಮದುವೆಯಾಗಿದ್ದರು. ದಂಪತಿ ಕಾಡುಗೋಡಿ ಸಮೀಪದ ಬಿಡಿಎ ವಿಧ್ಯಂಗಿರಿ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಈ ದುರ್ಘಟನೆ ವೇಳೆ ಪತಿ ಆಶೀಶ್ ತ್ರಿವೇದಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಚುತ್ತಿದ್ದಾಗಲೇ ಮನೆಗೆ ಬಂದು ಕಳ್ಳರನ್ನು ಕೂಡಿ ಹಾಕಿದ ಮಾಲೀಕ!