ಸುದ್ದಿ ನಿರೂಪಕಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಚಿನ್ನಾಭರಣಗಳನ್ನು ಪಡೆದಿದ್ದ ಪತ್ರಕರ್ತನೊಬ್ಬ ನಂತರ ಆಕೆಗೆ ವಂಚಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗೋಣಿಕೊಪ್ಪಲುವಿನಲ್ಲಿ ನಡೆದಿದೆ.
ಮಡಿಕೇರಿ (ಫೆ.3): ಸುದ್ದಿ ನಿರೂಪಕಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಚಿನ್ನಾಭರಣಗಳನ್ನು ಪಡೆದಿದ್ದ ಪತ್ರಕರ್ತನೊಬ್ಬ ನಂತರ ಆಕೆಗೆ ವಂಚಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗೋಣಿಕೊಪ್ಪಲುವಿನಲ್ಲಿ ನಡೆದಿದೆ.
ಆರೋಪಿಯನ್ನು ಕೊಡಗಿನ ಸ್ಥಳೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ನಾಗೇಶ್ ಡಿ ಎಂದು ಗುರ್ತಿಸಲಾಗಿದೆ.
ಮಹಿಳೆ ಗೋಣಿಕೊಪ್ಪಲು ಸಮುದಾಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ರೂ.10,000 ವೇತನ ನೀಡುವ ಸುದ್ದಿ ನಿರೂಪಕಿ ಕೆಲಸ ಕೊಡಿಸುವುದಾಗಿ ಆರೋಪಿ ಮಹಿಳೆಯನ್ನು ನಂಬಿಸಿದ್ದಾನೆ. ಬಳಿಕ ಉದ್ಯೋಗ ಭದ್ರ ಪಡಿಸಿಕೊಳ್ಳಲು ಹೂಡಿಕೆ ಮಾಡಲು ಹಣ ಬೇಕು ಎಂದು ಹೇಳಿ, ಆಕೆಯ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾನೆ ಆರೋಪಿ.
ಆಯುರ್ವೇದ ಪಂಡಿತರೆಂದು ನಂಬಿಸಿ 30 ಸಾವಿರ ವಂಚನೆ
ಹಲವು ದಿನಗಳು ಕಳೆದರೂ ಕೆಲಸ ಕೊಡಿಸದಿದ್ದಾಗ ಮಹಿಳೆ ತನ್ನ ಚಿನ್ನಾಭರಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡಿರುವ ಆತ ಮಧ್ಯರಾತ್ರಿ ಆಸ್ಪತ್ರೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆಕೆಯ ರಕ್ಷಣೆಗೆ ತೆರಳಿದ್ದ ಆಸ್ಪತ್ರೆ ಇತರ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಘಟನೆ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ನಂತರ ಡಿಹೆಚ್ಒ ಸತೀಶ್ ಕುಮಾರ್ ಅವರ ಸೂಚನೆ ಮೇರೆಗೆ ದೂರು ದಾಖಲಿಸಿಕೊಂಡಿದ್ದಾರೆ.
ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ ₹25 ಲಕ್ಷ ಉಂಡೇನಾಮ ಹಾಕಿದ ಕುಟುಂಬ!
ಆರೋಪಿ 8 ಸಿಮ್ ಕಾರ್ಡ್ ಗಳನ್ನು ಹೊಂದಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಸ್ಪತ್ರೆಯ ನರ್ಸ್ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಪತ್ರಕರ್ತನ ಪತ್ತೆಗೆ ಗೋಣಿಕೊಪ್ಪಲು ಪೊಲೀಸರು ಬಲೆ ಬೀಸಿದ್ದಾರೆ. ಬುಧವಾರ ತಡರಾತ್ರಿ ಗೋಣಿಕೊಪ್ಪಲು ಸಮುದಾಯ ಆಸ್ಪತ್ರೆಯಲ್ಲಿ ಹಲ್ಲೆ ಪ್ರಕರಣ ವರದಿಯಾಗಿದೆ. ಇನ್ನು ಘಟನೆಗೆ ಜಿಲ್ಲೆಯ ಪತ್ರಕರ್ತರ ಸಂಘಗಳು ಖಂಡನೆ ವ್ಯಕ್ತಪಡಿಸಿದ್ದು, ಸಂಘದಿಂದ ಆರೋಪಿಯನ್ನು ಅಮಾನತುಗೊಳಿಸುವುದಾಗಿ ತಿಳಿಸಿದೆ.