Bengaluru: ಶಿಕ್ಷಕಿ ಬೈದಿದ್ದಕ್ಕೆ ಡೆತ್‌ನೋಟ್‌ ಬರೆದಿಟ್ಟು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

By Govindaraj SFirst Published Nov 15, 2022, 2:05 PM IST
Highlights

ಕಿರುಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕಾಗಿ ಕ್ಲಾಸ್‌ ಟೀಚರ್‌ ಸಹಪಾಠಿಗಳ ಎದುರು ನಿಂದಿಸಿದರು ಎಂದು ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ನ.15): ಕಿರುಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕಾಗಿ ಕ್ಲಾಸ್‌ ಟೀಚರ್‌ ಸಹಪಾಠಿಗಳ ಎದುರು ನಿಂದಿಸಿದರು ಎಂದು ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಎಂಬಿಆರ್‌ ಲೇಔಟ್‌ ದೊಡ್ಡ ಬಾಣಸವಾಡಿ ಮರಿಯಂ ನಿಲಯ ಶಾಲೆಯ ಅಮೃತಾ (15) ಮೃತ ವಿದ್ಯಾರ್ಥಿನಿ. ಭಾನುವಾರ ಸಂಜೆ 5.15ರ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತಕುಮಾರ್‌ ಹಾಗೂ ಆಶಾ ದಂಪತಿಯ ಮಗಳು ಅಮೃತಾ, ಮರಿಯಂ ನಿಲಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನ.8ರಂದು ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಕಿರುಪರೀಕ್ಷೆ ನಡೆದಿದ್ದು, ಅಮೃತಾ ಕುಳಿತಿದ್ದ ಜಾಗದ ಸಮೀಪದಲ್ಲಿ ನಕಲು ಚೀಟಿ ಪತ್ತೆಯಾಗಿತ್ತು. ಈ ವಿಚಾರವಾಗಿ ಅಮೃತಾಳನ್ನು ಕ್ಲಾಸ್‌ ಟೀಚರ್‌ ಶಾಲಿನಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗೆ ಮಾಹಿತಿ ನೀಡಿ, ಅಮೃತಾಳಿಂದ ತಪ್ಪೊಪ್ಪಿಗೆ ಬರೆಸಿಕೊಂಡಿದ್ದರು.

ಬ್ಯಾಂಕ್‌ ಸಾಲ ನೋಟಿಸ್‌: ಬಾವಿಗೆ ಹಾರಿ ರೈತ ಆತ್ಮಹತ್ಯೆ

ಬಳಿಕ ತರಗತಿಯಲ್ಲಿ ಹಾಗೂ ಶಾಲೆಯಲ್ಲಿ ಪರೀಕ್ಷೆ ನಕಲು ವಿಚಾರ ಚರ್ಚೆಯಾಗಿದೆ. ಇದರಿಂದ ಮನನೊಂದು ಅಮೃತಾ ಭಾನುವಾರ ಸಂಜೆ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೂಮ್‌ನಿಂದ ಮಗಳು ಹೊರಗೆ ಬಾರದಿದ್ದರಿಂದ ಅನುಮಾನಗೊಂಡು ತಾಯಿ ಆಶಾ ಅವರು ರೂಮ್‌ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ. ವಿಷಯ ತಿಳಿದು ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅಮೃತಾಳ ಪೋಷಕರು ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಸಾರಿ ಅಮ್ಮ: ‘ಅಮ್ಮ ನನ್ನನ್ನು ಕ್ಷಮಿಸು. ಶಾಲೆಯಲ್ಲಿ ನಡೆದ ಘಟನೆಯನ್ನು ನಾನು ಮರೆಯಲು ಸಾಧ್ಯವಾಗುತ್ತಿಲ್ಲ. ಐ ಲವ್‌ ಯೂ ಅಮ್ಮ, ಅಪ್ಪ, ಅಜ್ಜಿ-ತಾತ, ಮಾಮ’ ಎಂದು ಆತ್ಮಹತ್ಯೆಗೂ ಮುನ್ನ ಅಮೃತಾ ಮರಣ ಪತ್ರ ಬರೆದಿದ್ದಾಳೆ.

ಕ್ಲಾಸ್‌ ಟೀಚರ್‌ ನಿಂದಿಸಿದ್ದಕ್ಕೆ ಮಗಳು ಆತ್ಮಹತ್ಯೆ: ಪುತ್ರಿ ಅಮೃತಾಳ ಆತ್ಮಹತ್ಯೆಗೆ ಕ್ಲಾಸ್‌ ಟೀಚರ್‌ ಶಾಲಿನಿಯೇ ಕಾರಣ. ಕಿರುಪರೀಕ್ಷೆಯಲ್ಲಿ ನನ್ನ ಮಗಳು ನಕಲು ಮಾಡಿಲ್ಲ ಎಂದರೂ ತರಗತಿಯ ಎಲ್ಲ ವಿದ್ಯಾರ್ಥಿಗಳ ಎದುರು ಅಮೃತಾಳನ್ನು ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಅಮೃತಾಳ ತಾಯಿ ಆಶಾ ಆರೋಪಿಸಿದ್ದಾರೆ.

ಶಾಲೆ ಬಳಿ ಶವ ಇರಿಸಿ ಧರಣಿ: ಅಮೃತಾಳ ಮೃತದೇಹವನ್ನು ಶಾಲೆಯ ಆವರಣದಲ್ಲಿ ಇರಿಸಿ ಪೋಷಕರು ಹಾಗೂ ಸಂಬಂಧಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಅಮೃತಾಳ ಸಾವಿಗೆ ಕ್ಲಾಸ್‌ ಟೀಚರ್‌ ಶಾಲಿನಿಯೇ ಕಾರಣ. ಆಕೆ ಇಲ್ಲಿಗೆ ಬರುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನೆ ಸುದ್ದಿ ತಿಳಿದು ರಾಮಮೂರ್ತಿನಗರ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ರಕಾಶ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಮೃತಾ ಪೋಷಕರು ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಸಿದರು.

ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ಕಾರನ್ನು ಕದ್ದೊಯ್ದಿದ್ದವನ ಬಂಧನ

ಇತ್ತೀಚೆಗೆ ಬಾಲಕ ಆತ್ಮಹತ್ಯೆ: ಕಿರುಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದು, ಶಿಕ್ಷಕರು ತರಗತಿಯ ಹೊರಗೆ ನಿಲ್ಲಿಸಿದರು ಎಂದು ಮನನೊಂದು 10ನೇ ತರಗತಿ ವಿದ್ಯಾರ್ಥಿ ಹೆಗಡೆ ನಗರದ ಮೋಹಿನ್‌ ಖಾನ್‌ (15) ನ.8ರಂದು ನಾಗಾವಾರದ ಆರ್‌.ಆರ್‌.ಸಿಗ್ನೇಚರ್‌ ಅಪಾರ್ಚ್‌ಮೆಂಟ್‌ನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

click me!