Bengaluru crime: ಪೇದೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದ ರೌಡಿಗೆ ಗುಂಡು

By Kannadaprabha NewsFirst Published Dec 26, 2022, 9:23 AM IST
Highlights
  • ಪೇದೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದ ರೌಡಿಗೆ ಗುಂಡು
  • ಹಿಡಿಯಲು ಬಂದ ಪೊಲೀಸ್‌ ಪೇದೆಗೆ ಹಿಗ್ಗಾಮುಗ್ಗ ಥಳಿಸಿದ್ದ ವರುಣ್‌
  • ಕಲ್ಲುಬಾಳು ಮನೆಯಲ್ಲಿದ್ದವನ ಹೆಡೆಮುರಿ ಕಟ್ಟಿದ ಆನೇಕಲ್‌ ಪೊಲೀಸರು

ಆನೇಕಲ್‌ (ಡಿ.26) : ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಕ್ರಿಮಿನಲ್‌ಗಳ ಮೇಲೆ ಆನೇಕಲ್‌ ಮತ್ತು ಜಿಗಣಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗೂ ಗಾಯವಾಗಿದೆ.

ಶುಕ್ರವಾರ ಆನೇಕಲ್‌ನಲ್ಲಿ ಪೊಲೀಸ್‌ ಪೇದೆ ರಂಗನಾಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದ ವರುಣ್‌ ಅಲಿಯಾಸ್‌ ಕೆಂಚ, ಸರಣಿ ಅಪಹರಣ, ಡಕಾಯಿತಿ ನಡೆಸಿ ಸಾರ್ವಜನಿಕರಿಗೆ ತಲೆನೋವಾಗಿದ್ದ ಅಜಲ್‌ ಉರುಫ್‌ ಮೆಂಟಲ್‌ನನ್ನು ಬಂಧಿಸಲಾಗಿದೆ. ಈ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Bengaluru crime: ಕಲರ್ ಜೆರಾಕ್ಸ್ ನೋಟು ಕೊಟ್ಟು ವಂಚನೆ; ಮೂವರು ಕಿಲಾಡಿ ಕಳ್ಳರು ಪೊಲೀಸರ ಬಲೆಗೆ

ವರುಣ್‌ಗೆ ಗುಂಡು:

ವರುಣ್‌ ಜಿಗಣಿ ಸಮೀಪದ ಕಲ್ಲುಬಾಳುನ ಮನೆಯೊಂದರಲ್ಲಿ ಆಶ್ರಯ ಪಡೆದಿರುವ ಬಗ್ಗೆ ಖಚಿತಪಡಿಸಿಕೊಂಡ ಆನೇಕಲ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಹಾಗೂ ಸಿಬ್ಬಂದಿ ಮನೆಯನ್ನು ಸುತ್ತುವರಿದು ಶರಣಾಗಲು ತಿಳಿಸಿದರು. ಆಗ ಮನೆಯಿಂದ ಹೊರಬಂದ ಕೆಂಚ ಏಕಾಏಕಿ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆಗೆ ಮುಂದಾದ. ಆಗ ಅಡ್ಡ ಬಂದ ಪೇದೆ ಶಂಕರ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇನ್‌ಸ್ಪೆಕ್ಟರ್‌ ಸಿಬ್ಬಂದಿಯ ರಕ್ಷಣೆಗಾಗಿ ವರುಣ್‌ ಎಡ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಆನೇಕಲ್‌ನ ದಿನ್ನೂರಿನಲ್ಲಿ ರಸ್ತೆ ಮಧ್ಯದಲ್ಲೇ ಬೈಕ್‌ ನಿಲ್ಲಿಸಿಕೊಂಡು ಟ್ರಾಫಿಕ್‌ ಬ್ಲಾಕ್‌ ಮಾಡಿದ್ದ ರೌಡಿ ವರುಣ್‌ ಮತ್ತು ಡ್ಯಾನಿ ಅಲಿಯಾಸ್‌ ಕಿಶೋರ್‌ಗೆ ಪೇದೆ ರಂಗನಾಥ್‌ ಬುದ್ಧಿ ಹೇಳಿದ್ದರು. ಸಂಚಾರ ಸುಗಮ ಆಗುತ್ತಿದ್ದಂತೆ ವರುಣ್‌ ಮತ್ತು ಡ್ಯಾನಿಯನ್ನು ರಂಗನಾಥ್‌ ಹಿಂಬಾಲಿಸಿದ್ದಾರೆ. ಗಾಂಜಾ ಮತ್ತಿನಲ್ಲಿದ್ದ ರೌಡಿಗಳು ರಂಗನಾಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಪೇದೆ ಪ್ರಜ್ಞಾಹೀನರಾಗಿದ್ದರು. ಘಟನೆ ನಡೆದ ದಿನವೇ ಡ್ಯಾನಿಯನ್ನು ಬಂಧಿಸಲಾಗಿತ್ತು.

ಸುಲಿಗೆಕೋರ ಮೆಂಟಲ್‌ಗೆ ಗುಂಡೇಟು

ಸರಣಿ ಅಪಹರಣ, ಡಕಾಯಿತಿ ಮಾಡಿ ಸಾರ್ವಜನಿಕರು ಹಾಗೂ ಪೊಲೀಸರಿಗೆ ತಲೆ ನೋವಾಗಿದ್ದ ಅಜಯ್‌ ಉರೂಫ್‌ ಮೆಂಟಲ್‌ನ ಬಲಗಾಲಿಗೆ ಗುಂಡು ಹೊಡೆದು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಅಜಯ್‌ ನಾಯನಹಳ್ಳಿ ತೋಪಿನಲ್ಲಿ ಅಡಗಿರುವ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಸುದರ್ಶನ್‌ ಮತ್ತು ತಂಡ ತೋಪನ್ನು ಸುತ್ತುವರಿದಿದ್ದಾರೆ. ಶರಣಾಗಲು ಒಪ್ಪದೆ ತೋಪಿನಿಂದ ಹೊರಬಂದ ಮೆಂಟಲ್‌ ತನ್ನಲ್ಲಿದ್ದ ಆಯುಧದಿಂದ ಕ್ರೈಂ ಸಿಬ್ಬಂದಿ ಮಹೇಶ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇನ್‌ಸ್ಪೆಕ್ಟರ್‌ ಸುದರ್ಶನ್‌ ಮೆಂಟಲ್‌ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಕಳ್ಳ ಕೃಷ್ಣನ ಜೊತೆ ಮೆಂಟಲ್‌ ತಂಡ ಕಟ್ಟಿಕೊಂಡು ಗಾಂಜಾ ಮಾರಾಟ, ಒಂಟಿಯಾಗಿ ಬರುವ ಜನರ ಮೊಬೈಲ್‌ ಹಾಗೂ ಹಣ ಸುಲಿಗೆ ಮಾಡುತ್ತಿದ್ದ. ಇತ್ತೀಚೆಗೆ ಟ್ರಾಕ್ಟರ್‌ ಚಾಲಕ, ಆಟೋ ಚಾಲಕ, ಕ್ಯಾಂಟರ್‌ ಚಾಲಕ ಸೇರಿದಂತೆ ಜಿಗಣಿ, ಬನ್ನೇರುಘಟ್ಟಠಾಣಾ ವ್ಯಾಪ್ತಿಯ ಜನರಲ್ಲಿ ಭೀತಿ ಹುಟ್ಟಿಸಿದ್ದರು. ಇವರ ಉಪಟಳ ತಾಳಲಾರದೇ ಜನ ಪೊಲೀಸರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಬಂಧಿಸಲು ಹೋದ ಪೊಲೀಸರಿಂದ ಹೇಗೋ ತಪ್ಪಿಸಿಕೊಂಡು ಹೋಗುತ್ತಿದ್ದ ಗ್ಯಾಂಗ್‌ನ ಮೊದಲ ಬೇಟೆ ಅಜಯ್‌ ಬಂಧನವಾಗಿದೆ. ಇನ್ನು ಈ ತಂಡದ ಎಲ್ಲರನ್ನು ಹೆಡೆಮುರಿ ಕಟ್ಟಿತರುವುದಾಗಿ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

Railway Job Scam: ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ 28 ನಿರುದ್ಯೋಗಿ ಯುವಕರಿಗೆ ವಂಚನೆ, 2.5 ಕೋಟಿ ರೂ ಪಂಗನಾಮ!

ಪಾತಕ ಲೋಕದ ಪುಡಿ ರೌಡಿಗಳು ಹಾಗೂ ಹವಾ ಸೃಷ್ಟಿಸಿ ಮೆರೆಯುತ್ತಿರುವ ಲೋಕಲ್‌ ರೌಡಿಗಳಿಗೆ ಈ ಗುಂಡಿನ ಮೊರೆತ ಸಂದೇಶವಾಗಿದೆ. ಜನರ ರಕ್ಷಣೆಗೆ ಪೊಲೀಸರು ಯೋಧರಂತೆ ಪ್ರಾಣದ ಹಂಗು ತೊರೆದು ರೌಡಿಗಳ ಹೆಡೆಮುರಿ ಕಟ್ಟಲು ಬದ್ಧ.

-ಲಕ್ಷ್ಮೇನಾರಾಯಣ, ಡಿವೈಎಸ್ಪಿ.

click me!