
ಬೆಂಗಳೂರು (ಮಾ.25): ಮದ್ಯದ ಅಮಲಿನಲ್ಲಿ ಕೈ ನೋಡಿ ಕೆಟ್ಟದಾಗಿ ಭವಿಷ್ಯ ಹೇಳಿದ ಎಂಬ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೋವಿಂದರಾಜನಗರದ ನಿವಾಸಿ ನರೇಶ್ (36) ಕೊಲೆಯಾದವ. ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ನಾಗರಬಾವಿ ಮುಖ್ಯ ರಸ್ತೆಯ ಕಾಮಧೇನು ಆಸ್ಪತ್ರೆ ಬಳಿ ಈ ಕೊಲೆ ನಡೆದಿದೆ.
ಆರೋಪಿ ಮುತ್ತುರಾಜ್ ಹಾಗೂ ಆತನ ಸಹಚರರು ಘಟನೆ ಬಳಿಕ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ನರೇಶ್ ಗಾರೆ ಕೆಲಸ ಮಾಡಿದರೆ, ಆರೋಪಿ ಮುತ್ತುರಾಜ್ ದಿನಗೂಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ಶುಕ್ರವಾರ ಬೆಳಗ್ಗೆ ತಮ್ಮ ಸ್ನೇಹಿತರ ಜತೆಗೆ ಮದ್ಯ ಸೇವಿಸಲು ಬಾರ್‌ಗೆ ತೆರಳಿದ್ದಾರೆ. ಈ ವೇಳೆ ಮದ್ಯದ ಮತ್ತಿನಲ್ಲಿ ಮುತ್ತುರಾಜ್, ನರೇಶ್‌ನ ಕೈ ನೋಡಿ ಭವಿಷ್ಯ ಹೇಳುವುದಾಗಿ ತಮಾಷೆ ಮಾಡಿದ್ದಾನೆ. ಬಳಿಕ ಕೆಟ್ಟದಾಗಿ ಭವಿಷ್ಯ ಹೇಳಿದ್ದಾನೆ. ಬಳಿಕ ಎಲ್ಲರೂ ಬಾರ್‌ನಿಂದ ಹೊರಗೆ ಬಂದಿದ್ದಾರೆ.
ಆರ್‌ಬಿಐ ಹೆಸರಿನಲ್ಲಿ ವಂಚಿಸುತ್ತಿದ್ದ 11 ಮಂದಿಯ ಖತರ್ನಾಕ್ ಗ್ಯಾಂಗ್ ಬಂಧನ
ಆಗ ನರೇಶ್, ಕೆಟ್ಟದಾಗಿ ಭವಿಷ್ಯ ಹೇಳಿದ್ದ ಮುತ್ತುರಾಜ್ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದೇ ಸಮಯಕ್ಕೆ ರಸ್ತೆ ಬದಿ ಬಿದ್ದಿದ್ದ ಕಲ್ಲು ತೆಗೆದುಕೊಂಡ ಮುತ್ತುರಾಜ್, ನರೇಶ್ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡು ಕುಸಿದು ನೆಲಕ್ಕೆ ಬಿದ್ದ ನರೇಶ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಆರೋಪಿ ಮುತ್ತುರಾಜ್ ಹಾಗೂ ಸಹಚರರು ಪರಾರಿಯಾಗಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಕುವಿನಿಂದ ಸ್ನೇಹಿತನ ಹತ್ಯೆ: ಸ್ನೇಹಿತನನ್ನು ಚಾಕುವಿನಿಂದ ಹತ್ಯೆ ಮಾಡಿ, ತಾನೂ ವಿಷ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಲಕ್ಷ್ಮೇ ಚಿತ್ರಮಂದಿರ ಎದುರಿನ ಖಾಸಗಿ ಲಾಡ್ಜ್‌ನಲ್ಲಿ ಶುಕ್ರವಾರ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಾಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ (25) ಕೊಲೆಯಾಗಿದ್ದು, ಈತನನ್ನು ಕೊಲೆ ಮಾಡಿದ ಇನ್ನೊಬ್ಬ (ಹೆಸರು ತಿಳಿದು ಬಂದಿಲ್ಲ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಲಾಡ್ಜ್ ರೂಮ್ ನಂಬರ್ 114ರಲ್ಲಿ ಎರಡು ಶವಗಳು ಅಕ್ಕಪಕ್ಕದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಇಂದ್ರಕುಮಾರ ಎಂಬವನು ಮಾ.22ರಂದು ಲಾಡ್ಜ್‌ಗೆ ಬಂದು ಆಧಾರ್ ಕಾರ್ಡ್ ತೋರಿಸಿ ರೂಮ್ ನಂ.114 ಪಡೆದುಕೊಂಡಿದ್ದ. ಬಳಿಕ ಈತನ ರೂಮ್‌ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ. ಶುಕ್ರವಾರ ಬೆಳಗ್ಗೆ ರೂಮ್‌ನಿಂದ ಕೆಟ್ಟವಾಸನೆ ಬರಲು ಆರಂಭಿಸಿದಾಗ ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರಿಂದಲೇ ಆರೋಪಿ ಕಿಡ್ನಾಪ್: ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ ತಗಲಾಕಿಕೊಂಡ ಪೊಲೀಸರು!
ಇಂದ್ರಕುಮಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಮೇಲೆ ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಶವ ಪಕ್ಕದಲ್ಲೇ ಬಿದ್ದಿರುವುದು ಪತ್ತೆಯಾಗಿದೆ. ಇದರ ಜತೆ ರೂಮ್‌ನಲ್ಲಿ ಒಂದು ಬೈಕ್ ಕೀ ಪತ್ತೆಯಾಗಿದ್ದು, ಆ ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಿಜಿಸ್ಟರ್ ಹೊಂದಿದೆ. ಆ ವ್ಯಕ್ತಿಗೂ ಈ ಇಬ್ಬರ ಸಾವಿಗೆ ಸಂಬಂಧ ಇರಬಹುದಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ