ಕೊಡಗಿನ ದೇವಸ್ಥಾನಗಳಲ್ಲಿ ಮಾಯವಾಗುತ್ತಿವೆ ಗಂಟೆಗಳು

By Kannadaprabha News  |  First Published Oct 31, 2022, 1:30 AM IST

ಕೊಡಗು ಜಿಲ್ಲೆಯ ದೇವಸ್ಥಾನಗಳಲ್ಲಿ ಇದೀಗ ಗಂಟೆಗಳ ಸದ್ದು ಪೊಲೀಸರ ನಿದ್ದೆ ಕೆಡಿಸಿದ್ದು, ಎರಡಲ್ಲ ಮೂರಲ್ಲ ಕೇವಲ ಒಂದು ವಾರದೊಳಗೆ ಒಂದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳನ್ನು ಕಳವು ಮಾಡಲಾಗಿದೆ.


ಮಡಿಕೇರಿ (ಅ.31): ಕೊಡಗು ಜಿಲ್ಲೆಯ ದೇವಸ್ಥಾನಗಳಲ್ಲಿ ಇದೀಗ ಗಂಟೆಗಳ ಸದ್ದು ಪೊಲೀಸರ ನಿದ್ದೆ ಕೆಡಿಸಿದ್ದು, ಎರಡಲ್ಲ ಮೂರಲ್ಲ ಕೇವಲ ಒಂದು ವಾರದೊಳಗೆ ಒಂದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳನ್ನು ಕಳವು ಮಾಡಲಾಗಿದೆ. ಮಾತ್ರವಲ್ಲ ತಿಂಗಳೊಳಗೆ ಇದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಐದು ದೇವಸ್ಥಾನಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಹುಂಡಿಗಳನ್ನು ಬಿಟ್ಟು ಕೇವಲ ಗಂಟೆಗಳನ್ನು ಮಾತ್ರ ಕಳ್ಳತನ ಮಾಡಿರುವ ಬಗ್ಗೆ ಅಖಿಲ ಕೊಡವ ಸಮಾಜ ಯೂತ್‌ ವಿಂಗ್‌ ಅಧ್ಯಕ್ಷ ಚಮ್ಮಟೀರ ಪ್ರವೀಣ್‌ ಉತ್ತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲೆಯ ಹಲವೆಡೆ ದೇವಸ್ಥಾನಗಳಲ್ಲಿ ಗಂಟೆ ಕಳವಾಗುತ್ತಿದ್ದು, ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸರಹದ್ದುವಿನಲ್ಲಿಯೇ ವಾರದೊಳಗೆ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳು ಕಳವಾಗಿದೆ. ಒಂದು ತಿಂಗಳ ಹಿಂದೆ ಇದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನ ಸೇರಿದಂತೆ ಒಟ್ಟು ಐದು ದೇವಸ್ಥಾನಗಳಲ್ಲಿಯೂ ಕೂಡ ಕೇವಲ ಗಂಟೆಗಳನ್ನು ಮಾತ್ರ ಕಳ್ಳತನ ಮಾಡಿದ್ದಾರೆ, ಇದರೆ ಉದ್ದೇಶ ಏನೂ ಎಂದು ಅರ್ಥ ಆಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Latest Videos

undefined

ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಸರ್ಕಾರ: ಶಾಸಕ ಯತೀಂದ್ರ ಸಿದ್ದರಾಮಯ್ಯ

ಫೆಬ್ರವರಿ ತಿಂಗಳಿನಲ್ಲಿ ಗೋಣಿಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಯಮುಡಿ ಶ್ರೀ ಕಮಟೆ ಮಹಾದೇವರ ದೇವಸ್ಥಾದಲ್ಲಿ ಅಳವಡಿಸಲಾದ 105 ಕೆ.ಜಿ.ಯ ಬೃಹತ್‌ ಗಾತ್ರದ ಗಂಟೆ ಕಳವಾಗಿತ್ತು. ಕಳ್ಳರು ದೇವಸ್ಥಾನದಲ್ಲಿ ಅಳವಡಿಸಲಾದ ಸಿ.ಸಿ ಕ್ಯಾಮೆರಾವನ್ನು ತಿರುಗಿಸಿ ಕಳ್ಳತನ ಮಾಡಿ ಗಂಟೆಯನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ, ಸುದೀರ್ಘ ಆರು ತಿಂಗಳ ಬಳಿಕ ಕಳೆದ ತಿಂಗಳು ನಾಪೋಕ್ಲಿನ ಮಕ್ಕಿ ಶಾಸ್ತಾವು ದೇವರ ಸನ್ನಿಧಿಯಲ್ಲಿ ಬೃಹತ್‌ ಗಾತ್ರದ ಗಂಟೆಗಳನ್ನು ಕಳ್ಳತನ ಮಾಡುವ ಮೂಲಕ ಆರಂಭವಾದ ದೇವಸ್ಥಾನ ಗಂಟೆಗಳ ಕಳ್ಳತನ ಇದೀಗ ದಕ್ಷಿಣ ಕೊಡಗಿನಲ್ಲಿ ಬಹಳ ಸದ್ದು ಮಾಡುತ್ತಿದೆ.

ಎಲ್ಲೆಲ್ಲಿ ಎಷ್ಟು ಗಂಟೆಗಳ ಕಳವು: ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೂರು ಕಲ್ಲುಗುಡಿ ಈಶ್ವರ ದೇವಸ್ಥಾನದಲ್ಲಿ 5 ಕಂಚಿನ ಗಂಟೆಗಳು ಹಾಗೂ ಬೆಸಗೂರು ಗ್ರಾಮದ ಮಹಾದೇವರ ದೇವಸ್ಥಾನ ಮತ್ತು ದುರ್ಗಿ ದೇವಸ್ಥಾನ ಎರಡು ಸೇರಿ 21 ಕಂಚಿನ ಗಂಟೆಗಳು ಕಳವಾಗಿವೆ. ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವಾಗಲೇ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನಲ್ಲಿ ಸುಮಾರು 900 ವರ್ಷಕ್ಕೂ ಹಿಂದಿನ ಇತಿಹಾಸವಿರುವ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಗುರುವಾರ ಮಧ್ಯರಾತ್ರಿ 2.15ರ ಸಮಯದಲ್ಲಿ (ಶುಕ್ರವಾರ ಮುಂಜಾನೆ) ಕಳ್ಳರು ನುಗ್ಗಿದ್ದು 10 ಗಂಟೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯ ಒಂದಷ್ಟುತುಣುಕುಗಳು ದೇವಸ್ಥಾನದಲ್ಲಿ ಅಳವಡಿಸಲಾದ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಬಳಿಕ ಒಬ್ಬ ಮುಸುಕುಧಾರಿ ಎರಡು ಸಿ.ಸಿ ಕ್ಯಾಮೆರಾದ ವಯರ್‌ ತುಂಡರಿಸಿದ್ದಾನೆ. 

ದೇವಸ್ಥಾನದಲ್ಲಿ ಒಟ್ಟು ನಾಲ್ಕು ಕ್ಯಾಮೆರಾಗಳಿದ್ದು ಉಳಿದ ಎರಡು ಕ್ಯಾಮೆರಾಗಳನ್ನು ಬೆರೆಡೆಗೆ ತಿರುಗಿಸಿ, ದೇವಸ್ಥಾನದ ಮುಂಭಾಗ ಅಳವಡಿಸಲಾದ 13 ಕಂಚಿನ ಗಟೆಗಳ ಪೈಕಿ 10 ದೊಡ್ಡ ದೊಡ್ಡ ಗಂಟೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಮೂರು ಸಣ್ಣ ಗಂಟೆಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿ ದೂರಿನ ಮೇರೆ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳು ಹಾಗೂ ಗೋಣಿಕೊಪ್ಪ ವೃತ್ತನಿರೀಕ್ಷಕರನ್ನೊಳಗೊಂಡ ತಂಡ ಸೇರಿದಂತೆ ಜಿಲ್ಲಾ ಅಪರಾಧ ದಳದ ತಂಡ ಸೇರಿದಂತೆ ವಿರಾಜಪೇಟೆ ಡಿವೈಎಸ್ಪಿ ಹಾಗೂ ಜಿಲ್ಲೆಯ ವಿವಿಧ ಪೊಲೀಸ್‌ ಅಧಿಕಾರಿಗಳ ತಂಡವೇ ಶೋಧ ಕಾರ್ಯದಲ್ಲಿ ತೊಡಗಿದೆ.

ಇನ್‌ಸ್ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ

ಜಿಲ್ಲೆಯಲ್ಲಿ ಕಳುವಾದ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿಯೂ ಒಂದೇ ರೀತಿಯ ಕೃತ್ಯ ನಡೆದಿದ್ದು, ರಾತ್ರಿ ಕಳೆದು ಬೆಳಕು ಹರಿಯುವ ಮೊದಲೇ ಗಂಟೆಗಳು ಮಾಯವಾಗುತ್ತಿರುವ ಉದ್ದೇಶ ಏನೂ ಎಂಬುದೇ ಯಕ್ಷಪ್ರಶ್ನೆಯಾಗಿದೆ. ದೇವಸ್ಥಾನದಲ್ಲಿ ಬೇರೆ ಯಾವುದೇ ವಸ್ತು ಅಥವಾ ದೇವಸ್ಥಾನದ ಹುಂಡಿಗಳನ್ನು ಕಳವು ಮಾಡದೆ ಗಂಟೆಗಳನ್ನು ಮಾತ್ರ ಕದ್ದೊಯ್ಯುತ್ತಿರುವುದು ಅಚ್ಚರಿ ಮೂಡಿಸಿದೆ. ದೇವಸ್ಥಾನದಲ್ಲಿನ ಗಂಟೆಗಳ ಕಳವವಿನ ಹಿಂದೆ ಬೃಹತ್‌ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಅಖಿಲ ಕೊಡವ ಸಮಾಜ ಯೂತ್‌ ವಿಂಗ್‌ ಅಧ್ಯಕ್ಷ ಚಮ್ಮಟೀರ ಪ್ರವೀಣ್‌ ಉತ್ತಪ್ಪ ತಿಳಿಸಿದ್ದಾರೆ.

click me!