ಬೆಂಗಳೂರು (ಡಿ.14): ಕೋಟ್ಯಂತರ ರುಪಾಯಿ ನಷ್ಟಅನುಭವಿಸಿದ ವ್ಯಾಪಾರಿಗಳು ಸುಪಾರಿ ಕೊಟ್ಟು ಚಿನ್ನಾಭರಣ ಮಳಿಗೆಗಳನ್ನು ದರೋಡೆ ಮಾಡಿಸುವ ದಂಧೆಗೆ ಇಳಿದು ಪೊಲೀಸರ (Police) ಅತಿಥಿಗಳಾದ ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದ ರಾಜಸ್ಥಾನ (Rajasthan) ಮೂಲದ ವ್ಯಾಪಾರಿಗಳಾದ ದೇವರಾಮ್ ಹಾಗೂ ಡವರ್ ಲಾಲ್ ಎಂಬುವರು ಈ ದಂಧೆಗೆ ಪ್ರಯತ್ನಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇವರಲ್ಲದೆ, ಇವರಿಗೆ ಸಾಥ್ ನೀಡಿದ ಮೊಂಬತ್ತಿ ತಯಾರಿಕಾ ಘಟಕದ ಮಾಲೀಕ ಸುನೀಲ್, ದರೋಡೆ ತಂಡದ ಧೀರಜ್, ದಿನೇಶ್, ರಾಜೇಂದ್ರ, ಅಶೋಕ್ ಕುಮಾರ್, ಗೋವರ್ಧನ್ ಸಿಂಗ್ ಹಾಗೂ ಶ್ರೀರಾಮ್ ಪೊಲೀಸರ ಬಂಧನಕ್ಕೆ (Arrest) ಸಿಲುಕಿದ್ದಾರೆ. ಈ ಆರೋಪಿಗಳಿಂದ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ದರೋಡೆ ತಂಡದ ಪ್ರಮುಖ ಆರೋಪಿಗಳಾದ ಸುಗುಣ, ರವೀಂದ್ರ ಪಾಲ್ ಹಾಗೂ ವಿನೋದ್ ಪತ್ತೆಗೆ ತನಿಖೆ ನಡೆದಿದೆ.
ಕೆಲ ದಿನಗಳ ಹಿಂದೆ ಮಕ್ಕಳ ಸ್ಟ್ರೀಟ್‌ನಲ್ಲಿರುವ ಗಣೇಶ್ ಪವಾರ್ ಎಂಬುವರಿಗೆ ಸೇರಿದ ‘ಗಣೇಶ್ ಕಾರ್ಪ್’ ಹೆಸರಿನ ಚಿನ್ನಾಭರಣ ಮಳಿಗೆಗೆ ( Jewellery Shop) ರಾತ್ರಿ ವೇಳೆ ಆರೋಪಿಗಳು ಕನ್ನ ಹಾಕಿದ್ದರು. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಸಿ.ವಿ.ದೀಪಕ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಎಂ.ಸಿ.ಮಲ್ಲಿಕಾರ್ಜುನ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ.
ಮೂರು ತಿಂಗಳ ಸಂಚು: ರಾಜಸ್ಥಾನ (Rajasthan) ಮೂಲದ ದೇವರಾಮ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿನ್ನಾಭರಣ ಅಂಗಡಿ ಇಟ್ಟಿದ್ದರೆ, ಜಿಗಣಿ ಸಮೀಪದ ಯರೇಂಬಡಹಳ್ಳಿಯಲ್ಲಿ ಡವರ್‌ಲಾಲ್ ಸ್ಟೀಲ್ ಅಂಗಡಿ ನಡೆಸುತ್ತಿದ್ದ. ಆದರೆ ಈ ವ್ಯಾಪಾರ ವಹಿವಾಟಿನಲ್ಲಿ ಕೈ ಸುಟ್ಟುಕೊಂಡ ಇವರು, ಕೋಟ್ಯಂತರ ರು. ನಷ್ಟದ ಸುಳಿಗೆ ಸಿಲುಕಿದ್ದರು. ಇದರಿಂದ ಹೊರಬರಲು ಚಿನ್ನಾಭರಣ ಮಾರಾಟ ಮಳಿಗೆಗಳ ದರೋಡೆ ನಡೆಸಲು ನಿರ್ಧರಿಸಿದ್ದರು.
ಇದಕ್ಕೆ ಜಾಲಹಳ್ಳಿಯಲ್ಲಿ ಮೂಂಬತ್ತಿ ತಯಾರಿಕಾ ಘಟಕದ ಮಾಲೀಕ ಸುನೀಲ್ ಹಾಗೂ ನರ್ಗತಪೇಟೆ ಮತ್ತೊಬ್ಬ ವ್ಯಾಪಾರಿ ಧೀರಜ್ ನೆರವು ನೀಡಿದ್ದರು. ಇದಾದ ಬಳಿಕ ಸುನೀಲ್ ಮೂಲಕ ವೃತ್ತಿಪರ ಕ್ರಿಮಿನಲ್‌ಗಳಾದ ಸುಗುಣ ಮತ್ತು ರವೀಂದ್ರಪಾಲ್ ಸಂಪರ್ಕವಾಗಿದೆ. ಬಳಿಕ ಸೆಪ್ಟಂಬರ್‌ನಲ್ಲೇ ರಾಜಸ್ಥಾನದಿಂದ ನಗರಕ್ಕೆ ಬಂದ ಸುಪಾರಿ ದರೋಡೆಕೋರರಿಗೆ ದೇವರಾಮ್ ಹಾಗೂ ಸುನೀಲ್ ಆಶ್ರಯ ಕಲ್ಪಿಸಿದ್ದರು. ತರುವಾಯ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಸುತ್ತಾಡಿ ಭದ್ರತೆ ಇಲ್ಲದ ಚಿನ್ನಾಭರಣ ಮಳಿಗೆಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಇಳಿದರು.
ಅಂತಿಮವಾಗಿ ಬೊಮ್ಮನಹಳ್ಳಿ, ಚಂದಾಪುರ ಹಾಗೂ ನಗರ್ತಪೇಟೆಯಲ್ಲಿ ಮೂರು ಚಿನ್ನಾಭರಣ ಮಾರಾಟ ಮಳಿಗೆಗಳು ಹಾಗೂ ಬೊಮ್ಮನಹಳ್ಳಿಯಲ್ಲಿ ಬಟ್ಟೆ ಮಾರಾಟ ಅಂಗಡಿಯನ್ನು ದರೋಡೆ ನಡೆಸಲು ಯೋಜಿಸಿದರು. ಅದರಲ್ಲೊಂದು ಮಹಾರಾಷ್ಟ್ರ (Maharshtra) ಮೂಲದ ಸಗಟು ಬಂಗಾರ ವ್ಯಾಪಾರಿ ಗಣೇಶ್ ಪವಾರ್ ಅವರಿಗೆ ಮಕ್ಕಳ ಸ್ಟ್ರೀಟ್‌ನಲ್ಲಿದ್ದ ಅಂಗಡಿ ಆಗಿತ್ತು. ಪೂರ್ವ ನಿಯೋಜಿತ ಸಂಚಿನಂತೆ ಅ.10ರಂದು ರಾತ್ರಿ ಗಣೇಶ್ ಅವರ ಅಂಗಡಿಯ ಶೆಟರನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿದು ಕನ್ನ ಹಾಕಿದ ಸುಗುಣ ತಂಡವು, ಆ ಮಳಿಗೆಯಲ್ಲಿ 750 ಗ್ರಾಂ ಚಿನ್ನದ ಗಟ್ಟಿ, .7.5 ಲಕ್ಷ ನಗದು ಹಾಗೂ 1 ಕೇಜಿ ಬೆಳ್ಳಿ ಕದ್ದು ಪರಾರಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಾರಿನ ನಂ. ನೀಡಿದ ಸುಳಿವು : ಗಣೇಶ್ ಕಾಪ್‌ರ್ ಮಳಿಗೆಗೆ ಕನ್ನ ಹಾಕಿದ ಬಳಿಕ ಸುಗುಣ ತಂಡವನ್ನು ಸಿಟಿ ಮಾರ್ಕೆಟ್ ಸಮೀಪದಿಂದ ತನ್ನ ಕಾರಿನಲ್ಲಿ ಸುನೀಲ್ ಕರೆದೊಯ್ದಿದ್ದ. ಬಳಿಕ ಅಲ್ಲಿಂದ ರಾಜಸ್ಥಾನಕ್ಕೆ ತಲುಪಿದ ಆರೋಪಿಗಳು, ಅಲ್ಲಿ ಚಿನ್ನಾಭರಣ ಹಂಚಿಕೊಂಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅ.10ರಂದು ರಾತ್ರಿ ನಗರ್ತಪೇಟೆ, ಹಲಸೂರು ಗೇಟ್ ಹಾಗೂ ಸಿ.ಟಿ.ಮಾರ್ಕೆಟ್ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅಲ್ಲದೆ ಕೃತ್ಯದ ನಡೆದ ವೇಳೆ ಆ ಪ್ರದೇಶದಲ್ಲಿ ಸಂಪರ್ಕದಲ್ಲಿ ಮೊಬೈಲ್ ಕರೆಗಳನ್ನು ತಪಾಸಣೆ ನಡೆಸಿದಾಗ ಸುನೀಲ್, ದೇವರಾಮ್ ಹಾಗೂ ಡವರ್‌ಲಾಲ್ ಮೊಬೈಲ್ ಕರೆಗಳ ಸಂಪರ್ಕದಲ್ಲಿದ್ದು, ಸಂಗತಿ ಗೊತ್ತಾಗಿದೆ. ಅಲ್ಲದೆ, ಸಿಟಿ ಮಾರ್ಕೆಟ್ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲಿ ಸುನೀಲ್‌ನ ಕಾರಿನ ನೋಂದಣಿ ಸಂಖ್ಯೆ ಪತ್ತೆಯಾಗಿತ್ತು. ಈ ಸುಳಿವು ಆಧರಿಸಿ ಬೆನ್ನುಹತ್ತಿದ್ದ ಪೊಲೀಸರಿಗೆ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
10 ದಿನ ಬಳಿಕ ಮತ್ತೆ ದರೋಡೆಗೆ ಯತ್ನ: ತಾವು ಅಂದುಕೊಂಡಂತೆ ಮಕ್ಕಳ ಸ್ಟ್ರೀಟ್‌ನ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ಯಶಸ್ಸು ಕಂಡ ಬಳಿಕ ಆರೋಪಿಗಳು, ಚಂದಾಪುರದ ಆಭರಣ ಮಳಿಗೆಗೆ ದೋಚಲು ಸಿದ್ಧತೆ ನಡೆಸಿದ್ದರು. ಗಣೇಶ ಕಾಪ್‌ರ್ ಅಂಗಡಿ ದರೋಡೆ ಬಳಿಕ ಸುಗುಣ, ವಿನೋದ್ ಹಾಗೂ ರವೀಂದ್ರಪಾಲ್ ರಾಜಸ್ಥಾನಕ್ಕೆ ಸೇರಿದ್ದರೆ, ಇನ್ನುಳಿದವರು ನಗರದಲ್ಲೇ ಇದ್ದರು. ಅಷ್ಟರಲ್ಲಿ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು (Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ (CCB) ಮಾಹಿತಿದಾರನ ಸೋಗು: ದರೋಡೆಕೋರರ ತಂಡದ ಧೀರಜ್ ಜೈನ್, ತಾನು ಸಿಸಿಬಿ ಪೊಲೀಸರ ಮಾಹಿತಿದಾರ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಇದರಿಂದ ಆತನ ಬಗ್ಗೆ ಪೊಲೀಸರಿಗೆ ಮೊದಲು ಅನುಮಾನ ಬಂದಿರಲಿಲ್ಲ.