ಮನೆಗೆ ಸಿಂಪಡಿಸಿದ್ದ ತಿಗಣೆ ನಾಶಕ ವಾಸನೆಗೆ ಬಾಲಕಿ ಸಾವು, ಪೋಷಕರ ಜೀವನ್ಮರಣ ಹೋರಾಟ!

By Kannadaprabha News  |  First Published Aug 3, 2022, 8:02 AM IST

ಮನೆಗೆ ಸಿಂಪಡಿಸಿದ್ದ ತಿಗಣೆ ನಾಶಕ ವಾಸನೆಗೆ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಊರಿನಿಂದ ಬಂದು ಮನೆಯಲ್ಲಿ ಸ್ವಚ್ಛತೆ ಆರಂಭಿಸಿದ್ದ ಕುಟುಂಬ ಮನೆಗೆ ತಿಗಣೆ ನಾಶಕ ಸಿಂಪಡಿಸಿತ್ತು. ಈ ವೇಳೆ ಉಸಿರಾಟದ ತೊಂದರೆಯಾಗಿ ಬಾಲಕಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ.


 ಬೆಂಗಳೂರು (ಆ.3): ಮನೆಗೆ ಸಿಂಪಡಿಸಿದ್ದ ತಿಗಣೆ ಕ್ರಿಮಿನಾಶಕದ ವಾಸನೆಯಿಂದ ಉಸಿರಾಟದಲ್ಲಿ ತೊಂದರೆ ಉಂಟಾಗಿ ಬಾಲಕಿಯೊಬ್ಬಳು ಮೃತಪಟ್ಟು, ಆಕೆಯ ತಂದೆ-ತಾಯಿ ತೀವ್ರ ಅಸ್ವಸ್ಥರಾಗಿರುವ ಘಟನೆ ನಗರದಲ್ಲಿ ನಡೆದಿದೆ. ವಸಂತ ನಗರ 8ನೇ ‘ಬಿ’ ಕ್ರಾಸ್‌ ನಿವಾಸಿ ಅಹನಾ (8) ಮೃತ ದುರ್ದೈವಿ. ಖಾಸಗಿ ಆಸ್ಪತ್ರೆಯಲ್ಲಿ ಮೃತಳ ತಂದೆ ವಿನೋದ್‌ ಕುಮಾರ್‌ ಹಾಗೂ ನಿಷಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಊರಿಗೆ ಹೋಗಿದ್ದ ವಿನೋದ್‌ ಮನೆಗೆ ಮನೆ ಮಾಲಿಕರು ತಿಗಣೆ ಕ್ರಿಮಿನಾಶ ಸಿಂಪಡಣೆ ಮಾಡಿದ್ದರು. ಸೋಮವಾರ ಮುಂಜಾನೆ ಊರಿನಿಂದ ಮರಳಿದ ವಿನೋದ್‌ ಕುಟುಂಬವು, ಮನೆ ಸ್ವಚ್ಛಗೊಳಿಸುವಾಗ ಕ್ರಿಮಿನಾಶಕ ವಾಸನೆಗೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ನೆರೆಹೊರೆಯವರು ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ವಿನೋದ್‌ ಮಗಳು ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೇರಳ ಮೂಲದ ವಿನೋದ್‌, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಖಾಸಗಿ ಶಾಲೆಯಲ್ಲಿ ಅಹನಾ ಮೂರನೇ ತರಗತಿ ಓದುತ್ತಿದ್ದಳು. ಎಂಟು ವರ್ಷಗಳಿಂದ ವಸಂತನಗರದ ಬಿ ಕ್ರಾಸ್‌ನಲ್ಲಿ ಎಸ್‌.ಶಿವಪ್ರಸಾದ್‌ ಅವರ ಮನೆಯಲ್ಲಿ ವಿನೋದ್‌ ಕುಟುಂಬ ವಾಸವಾಗಿದ್ದರು. ಇದೇ ಕಟ್ಟಡದ ನೆಲಮಹಡಿಯಲ್ಲಿ ಮನೆ ಮಾಲಿಕರು ನೆಲೆಸಿದ್ದಾರೆ.

‘ಗೇ’ ಡೇಟಿಂಗ್‌ ಆ್ಯಪಲ್ಲಿ ವಿಹಾರಕ್ಕೆ ಕರೆದು ಟೆಕ್ಕಿಯ ಸುಲಿದವರ ಸೆರೆ

Tap to resize

Latest Videos

ಇತ್ತೀಚೆಗೆ ಮನೆಯಲ್ಲಿ ತಿಗಣೆ ಕಾಟದಿಂದ ಬೇಸತ್ತ ಮನೆ ಮಾಲಿಕರು, ಮನೆ ಕಟ್ಟಡಕ್ಕೆ ತಿಗಣೆ ಕ್ರಿಮಿನಾಶ ಸಿಂಪಡಣೆ ನಿರ್ಧಿಸಿದ್ದರು. ಇದಕ್ಕಾಗಿ ವಿನೋದ್‌ ಸೇರಿದಂತೆ ತಮ್ಮ ನಾಲ್ವರು ಬಾಡಿಗೆದಾರರಿಗೆ ಒಂದು ವಾರದ ಮಟ್ಟಿಗೆ ಮನೆ ಖಾಲಿ ಮಾಡುವಂತೆ ಅವರು ಸೂಚಿಸಿದ್ದರು. ಅಂತೆಯೇ ನಾಲ್ಕು ದಿನಗಳ ಹಿಂದೆ ತಮ್ಮೂರಿಗೆ ತೆರಳಿದ್ದ ವಿನೋದ್‌, ಸೋಮವಾರ ಮುಂಜಾನೆ ನಗರಕ್ಕೆ ಮರಳಿದ್ದರು. ಮನೆ ಮಾಲಿಕರಿಗೆ ಮಾಹಿತಿ ನೀಡದೆ ತಮ್ಮಲ್ಲಿದ್ದ ಇನ್ನೊಂದು ಕೀ ಬಳಸಿ ಮನೆ ಬೀಗ ತೆರೆದು ಅವರು ಒಳ ಹೋಗಿದ್ದರು. ಮುಂಜಾನೆ ಬಸ್ಸಿನಲ್ಲಿ ಬಂದು ಆಯಾಸಗೊಂಡಿದ್ದ ವಿನೋದ್‌ ಕುಟುಂಬ, ಮನೆಯಲ್ಲಿ ಟೀ ಕುಡಿದು ವಿಶ್ರಾಂತಿ ಮಾಡಿದ್ದರು.

ಕಬ್ಬಿಣ ಕಳ್ಳತನ ಆರೋಪ ಹೊರಿಸಿ ಕಾರ್ಮಿಕನನ್ನು ಹೊಡೆದು ಕೊಂದ ಎಂಜಿನಿಯರ್!

ಕೆಲ ಹೊತ್ತಿನ ಬಳಿಕ ಎದ್ದು ಮನೆ ಸ್ವಚ್ಛತೆಯಲ್ಲಿ ತೊಡಗಿದ್ದರು. ಆಗ ಕ್ರಿಮಿನಾಶಕ ದುರ್ವಾಸನೆಗೆ ಅವರು ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ. ಈ ವೇಳೆ ಅಹನಾ ನಿತ್ರಾಣಳಾಗಿ ಅರೆಪ್ರಜ್ಞೆಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಮಹಾವೀರ್‌ ಜೈನ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಅಸುನೀಗಿದ್ದಾಳೆ. ಆಕೆಯ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ನಿರ್ಲಕ್ಷ್ಯತನ ಆರೋಪದಡಿ ಕಟ್ಟಡದ ಮಾಲಿಕ ಶಿವಪ್ರಸಾದ್‌ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!