ಲೇಡಿ ಡಾನ್ ಒಬ್ಬಳು ಹಣಕ್ಕಾಗಿ ಪ್ರೀತಿಯ ಸೋಗು ಹಾಕಿ ಯುವಕನೊಬ್ಬನ್ನು ಕೊಂದು ಹಾಕಿದ ಭಯಾನಕ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಸಾಯಿಸಿದ ಘಟನೆಯನ ಸ್ವತಃ ಹಂತಕರೇ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ನಗರದಲ್ಲಿ ಸಂಚಲನ ಸೃಷ್ಟಿಸಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಜು.07): ಲೇಡಿ ಡಾನ್ ಒಬ್ಬಳು ಹಣಕ್ಕಾಗಿ ಪ್ರೀತಿಯ ಸೋಗು ಹಾಕಿ ಯುವಕನೊಬ್ಬನ್ನು ಕೊಂದು ಹಾಕಿದ ಭಯಾನಕ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಸಾಯಿಸಿದ ಘಟನೆಯನ ಸ್ವತಃ ಹಂತಕರೇ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ನಗರದಲ್ಲಿ ಸಂಚಲನ ಸೃಷ್ಟಿಸಿದೆ.
ಕೊಲೆ ವೃತ್ತಾಂತ ಈ ರೀತಿ ಇದೆ: ಕಲ್ಬುರ್ಗಿ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಕಳೆದ ಮೇ 24ರಂದು ಯುವಕನೊಬ್ಬನ ಬರ್ಬರ ಹತ್ಯೆಯಾಗಿರುತ್ತದೆ. ಕೊಲೆಯಾದ ಯುವಕ ಯಾರು ಎನ್ನುವುದು ಪೊಲೀಸರು ಪತ್ತೆಯಾಚಿದಾಗ ಆತ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ನಿವಾಸಿ ಎನ್ನುವುದು ಬಯಲಾಗುತ್ತದೆ.
ದುಬೈ ಉದ್ಯೋಗಿ: ಶುಕ್ರವಾಡಿ ಗ್ರಾಮದ ದಯಾನಂದ್ ಕೊಲೆಯಾದ ದುರ್ದೈವಿಯಾಗಿರುತ್ತಾನೆ. ಈತ ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದು ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಭಾರತಕ್ಕೆ ವಾಪಸ್ ಬಂದಿದ್ದ. ಮರಳಿ ದುಬೈಗೆ ತೆರಳಲು ಪಾಸ್ ಪೋರ್ಟ್ ರೆಡಿ ಮಾಡಿಕೊಳ್ಳಲು ಕಲ್ಬುರ್ಗಿಗೆ ಬಂದಿದ್ದಾಗ ಕೊಲೆಯಾಗಿರುತ್ತಾನೆ.
Mandya: ಚಿರತೆ ದಾಳಿಗೆ ಬಲಿಯಾದ ಕರು ಪತ್ತೆ ಹಚ್ಚಿದ ತಾಯಿ ಹಸು!
ಮನೆ ಮುಂದಿನ ಜಾಗಕ್ಕಾಗಿ ಕೊಲೆ ಎನ್ನಲಾಗಿತ್ತು: ಕಲ್ಬುರ್ಗಿಯ ವಿಶ್ವವಿದ್ಯಾಲಯ ಪೊಲೀಸರು ದಯಾನಂದ್ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡುತ್ತಾರೆ. ತನಿಖೆಯಲ್ಲಿ ಅದೇ ಶುಕ್ರವಾಡಿ ಗ್ರಾಮದ ಅನಿಲ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಪೊಲೀಸರು ಅನೀಲ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಥೆ ಬೇರೆಯದ್ದೆ ಎನ್ನುವುದು ಬಯಲಾಗುತ್ತದೆ.
ಸುಪಾರಿ ಪಡೆದಿದ್ದು ಲೇಡಿ ಡಾನ್: ಶುಕ್ರವಾಡಿ ಗ್ರಾಮದ ಅನಿಲ್ ಹಾಗೂ ಭಾರತೀಯ ಸೇನೆಯಲ್ಲಿರುವ ಆತನ ಸಹೋದರ ಸುನಿಲ್ ಇಬ್ಬರು ಸುಫಾರಿ ನೀಡಿ ಈ ದಯಾನಂದ ನನ್ನ ಕೊಲೆ ಮಾಡಿಸಿದ್ದಾರೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗುತ್ತದೆ. ಅಷ್ಟಕ್ಕೂ ಈ ಸಹೋದರರಿಂದ ದಯಾನಂದ ಕೆಳಗೆ ಸುಫಾರಿ ಪಡೆದದ್ದು ಯಾರು ಗೊತ್ತಾ ? ಕಲ್ಬುರ್ಗಿಯ ಒಬ್ಬ ಲೇಡಿ ಡಾನ್. ಈಕೆಯ ಹೆಸರು ಅಂಬಿಕಾ. ಕಲಬುರ್ಗಿಯ ಬಸವೇಶ್ವರ ಕಾಲೋನಿ ನಿವಾಸಿ. ಮೇಲಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉದ್ಯೋಗಿ. ಅನಿಲ್ ಮತ್ತು ಸುನಿಲ್ ಸಹೋದರರಿಂದ ದಯಾನಂದ ಕೊಲೆಗೆ 3 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದೆ ಈ ಅಂಬಿಕಾ.
ಮಿಸ್ಡ್ ಕಾಲ್ ಪ್ರೇಯಸಿ: ಅಂಬಿಕಾ ಕೊಲೆಗೆ ಸುಫಾರಿ ಪಡೆದಿದ್ದೇ ತಡ ಕೊಲೆಗೆ ವ್ಯವಸ್ಥಿತ ಸಂಚು ರೂಪಿಸುತ್ತಾಳೆ. ಹೇಗಾದ್ರೂ ಮಾಡಿ ದಯಾನಂದನನ್ನ ಶುಕ್ರವಾಡಿಯಿಂದ ಕಲ್ಬುರ್ಗಿಗೆ ಕರೆಸಿಕೊಳ್ಳಬೇಕು ನಂತರವೇ ಕೊಲೆ ಮಾಡಬೇಕು ಎನ್ನುವುದು ಆಕೆ ಸಂಚಿನ ಭಾಗವಾಗಿತ್ತು. ಅದಕ್ಕಾಗಿ ಆಕೆ ಇನ್ನೊಂದು ಖತರ್ನಾಕ್ ಪ್ಲಾನ್ ಮಾಡುತ್ತಾಳೆ. ತಾನು ಹೆಣ್ಣು ಎಂಬುದನ್ನು ಬಂಡವಾಳ ಮಾಡಿಕೊಂಡು, ದಯಾನಂದನ ನಂಬರ್ಗೆ ಪದೇಪದೇ ಮಿಸ್ ಕಾಲ್ ಮಾಡುತ್ತಾಳೆ. ಬೆಳದಿಂಗಳ ಬಾಲೆ ರೀತಿ ಪದೇ ಪದೇ ಕಾಲ್ ಮಾಡಿದ ಹೆಣ್ಣಿನ ಧ್ವನಿಗೆ ದಯಾನಂದ ಮರುಳಾಗಿ ಹೋಗ್ತಾನೆ. ಕಲಬುರಗಿಗೆ ಬನ್ನಿ ಮೀಟ್ ಆಗಿ ಜಾಲಿ ಮಾಡೋಣ ಅನ್ನೋ ಆಕೆಯ ಆಫರ್ ಹಿಂದೂ ಮುಂದು ನೋಡದೆ ಒಪ್ಪಿಕೊಳ್ಳುತ್ತಾನೆ ಅಮಾಯಕ ದಯಾನಂದ.
ಮೇ 24 ರಂದು ನಡೆದಿದ್ದೇನು?: ಮೇ 24ರಂದು ದಯಾನಂದ್, ತನ್ನ ಮನೆಯವರಿಗೆ ಪಾಸ್ಪೋರ್ಟ್ ರೆಡಿ ಮಾಡಿಕೊಳ್ಳಲು ಕಲ್ಬುರ್ಗಿಗೆ ತೆರಳುತ್ತಿರುವುದಾಗಿ ಹೇಳಿ ಶುಕ್ರವಾಡಿಯಿಂದ ಕಲ್ಬುರ್ಗಿಗೆ ಆಗಮಿಸುತ್ತಾನೆ. ಕಲ್ಬುರ್ಗಿಗೆ ಬಂದವನೇ ನೇರವಾಗಿ ಅಂಬಿಕಾ ಹೇಳಿದ ಜಾಗಕ್ಕೆ ತೆರಳುತ್ತಾನೆ. ಅಲ್ಲಿಂದ ಮುಂದೆ ನಡೆದಿದ್ದೆಲ್ಲಾ ಅಂಬಿಕಾ ಅಣತಿಯಂತೆ. ಅಂಬಿಕಾ ಸಿಕ್ಕಿದ್ದೆ ಸ್ವರ್ಗ ಅಂತ ದಯಾನಂದ ಆಕೆಯೊಂದಿಗೆ ಆಟೋ ಹತ್ತುತ್ತಾನೆ. ಆಕೆ ಆತನನ್ನು ನೇರವಾಗಿ ಕಲ್ಬುರ್ಗಿ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ಕರೆದುಕೊಂಡು ಹೋಗುತ್ತಾಳೆ.
ಅದು ಉದ್ದೇಶಿತ ಲೇಔಟ್‌ನ ನಿರ್ಜನ ಜಾಗ. ಅಂಬಿಕಾ ಜೊತೆ ಮೋಸ ಮಾಡಲು ತಿಳಿದವನಿಗೆ ಕೆಲವೇ ನಿಮಿಷಗಳಲ್ಲಿ ಶಾಕ್ ಕಾದಿತ್ತು. ಅಂಬಿಕಾ ಪ್ಲಾನ್‌ನಂತೆ ಇವರ ಆಟೋವನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಅಂಬಿಕಾಳ ಸಹಚರರು, ನಿರ್ಜನ ಪ್ರದೇಶದಲ್ಲಿ ಅಂಬಿಕಾಳ ಜೊತೆ ಕುಳಿತಿದ್ದ ದಯಾನಂದನ ಜೊತೆ ಜಗಳಕ್ಕೆ ಇಳಿಯುತ್ತಾರೆ. ನನ್ನ ಹುಡುಗಿಯೊಂದಿಗೆ ನೀ ಏಕೆ ಬಂದಿರುವೆ ಎನ್ನುವುದು ಜಗಳ ಆರಂಭಕ್ಕೆ ನೆಪವಾಗಿತ್ತು. ಕೆಲವೇ ನಿಮಿಷಗಳಲ್ಲಿ ಆತನ ಮೇಲೆ ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಕೊಲೆ ಮಾಡುತ್ತಾರೆ ಈ ನಾಲ್ವರು ಅಂಬಿಕಾಳ ಸಹಚರರು.
ತಾನೇ ವಿಡಿಯೋ ಮಾಡಿಕೊಂಡ ಅಂಬಿಕಾ: ಪ್ರೇಯಸಿಯ ಸೋಗಿನಲ್ಲಿ ದಯಾನಂದನನ್ನು ಕರೆಸಿದ ಅಂಬಿಕ, ಆತ ಕೊಲೆಯಾಗುವುದನ್ನ, ಆತನ ಕೂಗಾಟ ನರಳಾಟವನ್ನು ಸ್ವತ ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಅದನ್ನ ಸುಪಾರಿ ಕೊಟ್ಟ ಸುನಿಲ್ ಮತ್ತು ಅನಿಲ್ ಸಹೋದರರಿಗೆ ವಾಟ್ಸಪ ಮೂಲಕ ಕಳಿಹಿಸಿ ಸುಫಾರಿಯ ಹಣ ಮೂರು ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾಳೆ.
ಕೊಲೆಗೆ ಕಾರಣವೇನು?: ಈ ಅನಿಲ್ ಮತ್ತು ಸುನಿಲ್ ಸಹೋದರರ ಪೈಕಿ ಅನಿಲ್ ಶುಕ್ರವಾಡಿ ಗ್ರಾಮದಲ್ಲಿ ವಾಸವಿದ್ದರೆ ಸುನಿಲ್ ಭಾರತೀಯ ಸೇನೆಯಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದಾನೆ. ದಯಾನಂದ ನನ್ನ ಹೆಂಡತಿಯ ಜೊತೆ ಸಂಬಂಧ ಹೊಂದಿದ್ದಾನೆ. ಅಲ್ಲದೇ ಈ ಬಗ್ಗೆ ಊರಲ್ಲಿ ಹೇಳಿಕೊಳ್ಳುತ್ತಾ ಮರ್ಯಾದೆ ಹಾಳು ಮಾಡುತ್ತಿದ್ದಾನೆ. ಹಾಗಾಗಿ ಆತನನ್ನು ಕೊಲೆ ಮಾಡುವಂತೆ ತನ್ನ ಪರಿಚಯದ ಲೇಡಿ ಅಂಬಿಕಾಗೆ ಹೇಳಿದ್ದ. ಯಾರು ಯಾಕೆ ಬೇಕು ? ಈ ಕೆಲಸ ನಾನೇ ಮಾಡಿಸುವೆ ಐದು ಲಕ್ಷ ಕೊಡು ಅಂತ ಬೇಡಿಕೆ ಇಟ್ಟಿದ್ದಳು ಅಂಬಿಕಾ. ಕೊನೆಗೆ ಚೌಕಾಸಿ ಮಾಡಿ ಮೂರು ಲಕ್ಷಕ್ಕೆ ಡೀಲ್ ಫಿಕ್ಸ ಆಗಿತ್ತು. ಒಪ್ಪಂದದಂತೆ ಅಂಬಿಕಾ ದಯಾನಂದ ನನ್ನ ಕೊಲೆ ಮಾಡಿ 3 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಅದರಲ್ಲಿ ಒಂದಿಷ್ಟು ಮೊತ್ತ ತನ್ನ ನಾಲ್ವರು ಸ್ನೇಹಿತರಿಗೆ ನೀಡಿದ್ದಳು ಎನ್ನಲಾಗಿದೆ.
Bidar: ಹಳಿ ಮೇಲೆ ನಿಂತ ಲಾರಿಗೆ ರೈಲು ಡಿಕ್ಕಿ: ತಪ್ಪಿದ ಭಾರಿ ಅನಾಹುತ
ಈಗ ಎಲ್ಲರೂ ಅಂದರ್: ದಯಾನಂದನನ್ನ ಮಾರಕಸ್ತ್ರಗಳಿಂದ ಕೊಲೆಗೈದ ನಾಲ್ವರು ಯುವಕರು, ಸುಪಾರಿ ಪಡೆದ ಅಂಬಿಕಾ, ಸುಪಾರಿ ಕೊಟ್ಟ ಅನೀಲ್ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸುನೀಲ್ ಇನ್ನೂ ಬಂಧಿಸಬೇಕಿದೆ: ಈ ಪೈಕಿ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಸುನಿಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆ ಪೊಲೀಸರು ಸೇನೆಗೆ ಮಾಹಿತಿಯನ್ನು ರವಾನಿಸಿದ್ದಾರೆ. ಸದ್ಯದಲ್ಲಿಯೇ ಆತನನ್ನು ಬಂಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮರಳಿ ದುಬೈಗೆ ತೆರಳಲು ಸಜ್ಜಾಗುತ್ತಿದ್ದವನನ್ನು ಪ್ರೀತಿಯ ಹೆಸರಿನಲ್ಲಿ ಬಲೆಗೆ ಹಾಕಿಕೊಂಡು ಮಹಿಳೆಯೇ ಸುಫಾರಿ ಪಡೆದು ಕೊಲೆ ಮಾಡಿಸಿರುವುದು ಕಲಬುರಗಿ ಜಿಲ್ಲೆಯೇ ಬೆಚ್ಚಿ ಬೀಳುವಂತಾಗಿದೆ.