ಮೈಸೂರು ಜಿಲ್ಲೆ ಕೆ.ಆರ್.ನಗರದ ಮಾಜಿ ರೌಡಿ ಕೇಶವಮೂರ್ತಿ, ಆತನ ಸಹಚರರಾದ ಮದನ್, ಸೂರ್ಯ, ಪ್ರೇಮ್ ಬಾಬು, ಮೊಹಮ್ಮದ್ ತೌಸೀಫ್, ಅರ್ಬಾಜ್ ಪಾಷ, ಮೊಹಮ್ಮದ್ ಅದನ್ ಬಿಲಾಲ್ ಬಂಧಿತ ಆರೋಪಿಗಳು.
ಬೆಂಗಳೂರು(ಜೂ.29): ಕೆಲವು ದಿನಗಳ ಹಿಂದೆ ಹಣಕ್ಕಾಗಿ ಪುರ್ವನಸತಿ ಕೇಂದ್ರದ ವ್ಯವಸ್ಥಾಪಕನನ್ನು ಅಪಹರಿಸಿದ್ದ ಮಾಜಿ ರೌಡಿ ಹಾಗೂ ಆತನ ಸಹಚರರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಮಾಜಿ ರೌಡಿ ಕೇಶವಮೂರ್ತಿ, ಆತನ ಸಹಚರರಾದ ಮದನ್, ಸೂರ್ಯ, ಪ್ರೇಮ್ ಬಾಬು, ಮೊಹಮ್ಮದ್ ತೌಸೀಫ್, ಅರ್ಬಾಜ್ ಪಾಷ, ಮೊಹಮ್ಮದ್ ಅದನ್ ಬಿಲಾಲ್ ಬಂಧಿತರಾಗಿದ್ದಾರೆ.
ಜೂ.19ರಂದು ಕೆಂಚಪುರ ಕ್ರಾಸ್‌ನಲ್ಲಿರುವ ಸಂತೋಷ್ ಸೋಶಿಯಲ್ ಸವೀರ್‍ಸ್ ಸೊಸೈಟಿಯ (ರಿಹ್ಯಾಬಿಲಿಟೇಷನ್ ಸೆಂಟರ್) ವ್ಯವಸ್ಥಾಪಕ ಸಂತೋಷ್‌ನನ್ನು ಕೇಶವ ತಂಡ ಅಪಹರಿಸಿತ್ತು. ಈ ಕೃತ್ಯದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ ವಿಚಾರ ತಿಳಿದು ಭಯಗೊಂಡ ಆರೋಪಿಗಳು, ಮೈಸೂರು ಜಿಲ್ಲೆ ನಂಜನಗೂಡು ನಗರದ ಬಸ್ ನಿಲ್ದಾಣದ ಬಳಿ ಅಪಹೃತನನ್ನು ಬಿಟ್ಟು ಪರಾರಿಯಾಗಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಅಪಹರಣಕಾರರನ್ನು ಇನ್‌ಸ್ಪೆಕ್ಟರ್ ಸುಬ್ರಮಣಿ ನೇತೃತ್ವದ ತಂಡ ಸೆರೆ ಹಿಡಿದಿದೆ.
ಬೆಂಗಳೂರು: ಗೂಗಲ್‌ನಲ್ಲಿ ಗೋಡೌನ್ ಗುರುತಿಸಿ ಕದಿಯುತ್ತಿದ್ದ ಖದೀಮರ ಬಂಧನ
ಮಾಲಿಕನ ಬದಲು ವ್ಯವಸ್ಥಾಪಕನ ಅಪಹರಣ:
ಕೆಂಚನಪುರ ಕ್ರಾಸ್‌ನಲ್ಲಿ ‘ಸಂತೋಷ್ ಸೋಶಿಯಲ್ ಸವೀರ್‍ಸ್ ಸೊಸೈಟಿ’ ಹೆಸರಿನಲ್ಲಿ ಪುನರ್ವಸತಿ (ರಿಯಾಬಿಲಿಟೇಷನ್) ಕೇಂದ್ರವನ್ನು ಶಶಿಧರ್ ನಡೆಸುತ್ತಿದ್ದಾರೆ. ಇವರಿಗೆ ಮಾಜಿ ರೌಡಿ ಕೇಶವ ಹಳೆಯ ಪರಿಚಯಸ್ಥನಾಗಿದ್ದು, ಇತ್ತೀಚೆಗೆ .10 ಲಕ್ಷ ಹಫ್ತಾ ನೀಡುವಂತೆ ಶಶಿಧರ್‌ಗೆ ಆತ ಧಮ್ಕಿ ಹಾಕಿದ್ದ. ಈ ಬೆದರಿಕೆಗೆ ಬಗ್ಗದೆ ಹಣ ನೀಡಲು ಅವರು ನಿರಾಕರಿಸಿದ್ದರು. ಹಲವು ಬಾರಿ ಕರೆ ಮಾಡಿದರೂ ಹಣ ನೀಡಲು ಶಶಿಧರ್ ಒಪ್ಪದೆ ಹೋದಾಗ ಕೆರಳಿದ ಕೇಶವ, ತನ್ನ ಸಹಚರರ ಜತೆ ಪುನರ್ವಸತಿ ಕೇಂದ್ರಕ್ಕೆ ಜೂ.17ರಂದು ಬಂದಿದ್ದ. ಆ ವೇಳೆ ಶಶಿಧರ್ ಇರಲಿಲ್ಲ. ಆಗ ಕೇಂದ್ರದ ವ್ಯವಸ್ಥಾಪಕ ಸಂತೋಷ್ ಬಳಿ ಮಾಲೀಕ ಶಶಿಧರ್ ಬಗ್ಗೆ ಆರೋಪಿಗಳು ವಿಚಾರಿಸಿದ್ದಾರೆ. ಕೊನೆಗೆ ಹಣಕ್ಕಾಗಿ ಸಂತೋಷ್‌ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ.
ನಡೆದು ಬರುತ್ತಿದ್ದ ಜೋಡಿಯನ್ನು ಅಡ್ಡಹಾಕಿದ ದರೋಡೆಕೋರರು, ಬಳಿಕ ನಡೆದಿದ್ದೇ ಅಚ್ಚರಿ!
ಕೆಲ ಹೊತ್ತಿನ ಬಳಿಕ ಶಶಿಧರ್‌ಗೆ ಕರೆ ಮಾಡಿ .10 ಲಕ್ಷ ಕೊಡದೆ ಹೋದರೆ ವ್ಯವಸ್ಥಾಪಕನ ಜೀವ ತೆಗೆಯುತ್ತೇನೆ ಎಂದು ಕೇಶವ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅಪಹರಣದ ಸಂಗತಿ ತಿಳಿದು ಆತಂಕಗೊಂಡ ಶಶಿಧರ್, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅದೇ ದಿನ ನಾಪತ್ತೆಯಾಗಿದ್ದ. ಇತ್ತ ದಿಢೀರನೇ ಮಾಲಿಕ ಹಾಗೂ ವ್ಯವಸ್ಥಾಪಕ ಕಾಣದೆ ಹೋದಾಗ ಪುನರ್ವಸತಿ ಕೇಂದ್ರದ ಸಿಬ್ಬಂದಿ, ಶಶಿಧರ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರಿಗೆ ಸಂತ್ರಸ್ತರ ಕುಟುಂಬ ಸದಸ್ಯರು ಮಾಹಿತಿ ನೀಡಿದರು. ಈ ಅಪಹರಣದ ವಿಷಯ ತಿಳಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು, ಇನ್‌ಸ್ಪೆಕ್ಟರ್ ಸುಬ್ರಹ್ಮಣಿ ನೇತೃತ್ವದ ಆರೋಪಿಗಳ ಪತ್ತೆಗೆ ತಂಡ ರಚಿಸಿದರು.
ಅಷ್ಟರಲ್ಲಿ ಪೊಲೀಸರು ತಮ್ಮ ಬೆನ್ನಹತ್ತಿರುವ ಸಂಗತಿ ತಿಳಿದು ಭೀತಿಗೊಂಡ ಆರೋಪಿಗಳು, ನಂಜನಗೂಡಿನ ಬಸ್ ನಿಲ್ದಾಣದಲ್ಲಿ ಅಪಹೃತನನ್ನು ಬಂಧಮುಕ್ತಗೊಳಿಸಿ ಕಾಲ್ಕಿತ್ತಿದ್ದರು. ಇದಾದ ಬಳಿಕ ಶಶಿಧರ್ ಸಹ ಪತ್ತೆಯಾಗಿದ್ದ. ಮರು ದಿನ ನಗರಕ್ಕೆ ಮರಳಿದ ಸಂತೋಷ್, ತನ್ನ ಅಪಹರಣದ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅಂತಿಮವಾಗಿ ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಅಪಹರಣಕಾರರನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.