
ಬೆಂಗಳೂರು(ಜೂ.29): ಇತ್ತೀಚೆಗೆ ನಾಗರಬಾವಿ ಹೊರವರ್ತುಲ ರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಬಳಿ ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿಯನ್ನು ಅನ್ನಪೂರ್ಣೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಹಸಗೌಡ ಅಲಿಯಾಸ್ ಸತ್ಯ, ಎಚ್.ಬಿ.ಜೀವನ್, ಅಭಿಷೇಕ್, ಎ.ರವಿಕುಮಾರ್, ಪಿ.ಎಸ್.ಚಂದನ್, ಗೌತಮ್‌ಗೌಡ ಹಾಗೂ ಎ.ಎಸ್.ಸೂರ್ಯ ಬಂಧಿತರಾಗಿದ್ದು, ವೈಯಕ್ತಿಕ ಕಾರಣ ಹಿನ್ನಲೆಯಲ್ಲಿ ಜೂ.5 ರಂದು ಬಿಡಿಎ ಕಾಂಪ್ಲೆಕ್ಸ್ ಸಮೀಪ ವಿದ್ಯಾರ್ಥಿ ಎಸ್.ದರ್ಶನ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ.
ಬೆಂಗಳೂರು: ಗೂಗಲ್‌ನಲ್ಲಿ ಗೋಡೌನ್ ಗುರುತಿಸಿ ಕದಿಯುತ್ತಿದ್ದ ಖದೀಮರ ಬಂಧನ
ವಿದ್ಯಾರ್ಥಿಗಳ ಪುಂಡಾಟ:
ನಾಗರಬಾವಿ ಸಮೀಪದ ವಿನಾಯಕ ಲೇಔಟ್ ನಿವಾಸಿ ಎಸ್.ದರ್ಶನ್, ಬಿಡಿಎ ಕಾಂಪ್ಲೆಕ್ಸ್ ಸಮೀಪದ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಆರೋಪಿಗಳಾದ ಸಾಹಸಗೌಡ, ಚಂದನ್ ಹಾಗೂ ಜೀವನ್ ಓದುತ್ತಿದ್ದು, ಕಾಲೇಜಿನಲ್ಲಿ ಸೀನಿಯರ್‌ಗಳಾಗಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ಹವಾ ಸೃಷ್ಟಿಸುವ ವಿಚಾರವಾಗಿ ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಸಾಹಸಗೌಡ, ಜೀವನ್ ಮತ್ತು ಚಂದನ್ ಮಧ್ಯೆ ಜಗಳವಾಗಿತ್ತು. ಆಗ ‘ಗಾಂಚಾಲಿ ಜಾಸ್ತಿಯಾಗಿದೆ. ಸಾಹಸಗೌಡನಿಗೆ ಸರಿಯಾದ ಪಾಠ ಕಲಿಸುತ್ತೇನೆ’ ಎಂದು ತನ್ನ ಗೆಳೆಯರ ಬಳಿ ದರ್ಶನ್ ಹೇಳಿಕೊಂಡಿದ್ದ. ಈ ವಿಷಯ ತಿಳಿದ ಸಾಹಸಗೌಡ, ತನ್ನ ಮೇಲೆ ಎದುರಾಳಿ ಹಲ್ಲೆ ನಡೆಸುವ ಮುನ್ನವೇ ಆತನಿಗೆ ತಾನೇ ಎಚ್ಚರಿಕೆ ಕೊಡುತ್ತೇನೆ ಎಂದು ಹೇಳಿ ಹಲ್ಲೆಗೆ ಸಂಚು ರೂಪಿಸಿದ್ದ.
ಬೆಂಗಳೂರು: ಹಲ್ಲೆ ನಡೆಸಿ ನೇಪಾಳಕ್ಕೆ ಪರಾರಿ ಆಗಿದ್ದ ಉದ್ಯಮಿ ಪುತ್ರನ ಸೆರೆ
ಆಗ ಆತನಿಗೆ ಸಹಪಾಠಿಗಳಾದ ಚಂದನ್ ಹಾಗೂ ಜೀವನ್ ಮಾತ್ರವಲ್ಲದೆ ಹೊರಗಿನವರಾದ ರವಿ, ಅಭಿಷೇಕ್ ಹಾಗೂ ಗೌತಮ್ ಸಾಥ್ ಕೊಟ್ಟಿದ್ದಾರೆ. ಪೂರ್ವನಿಯೋಜಿತ ಸಂಚಿನಂತೆ ಜೂ.5ರಂದು ಬೆಳಗ್ಗೆ ಉಪಾಹಾರ ಸೇವಿಸಲು ಕಾಲೇಜಿನಿಂದ ದರ್ಶನ್ ಹೊರಬಂದಾಗ ಆರೋಪಿಗಳು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ದರ್ಶನ್‌ಗೆ ಸಣ್ಣಪುಟ್ಟಗಾಯಗಳಾಗಿದ್ದವು.
ಈ ಕೃತ್ಯದ ವಿಡಿಯೋವನ್ನು ಸ್ಥಳೀಯ ನಿವಾಸಿಗಳು ಮೊಬೈಲ್ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಂತ್ರಸ್ತ ವಿದ್ಯಾರ್ಥಿ ಅಸಹಕಾರ ತೋರಿದರೂ ಬಿಡದೆ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ