ಬೆಂಗಳೂರು: ಸರ ಕದಿಯುತ್ತಿದ್ದ ಚಾಲಾಕಿ ಭಾವ-ಮೈದುನ ಬಂಧನ, ಗಂಡನ ಕೃತ್ಯಕ್ಕೆ ಪತ್ನಿಯರ ನೆರವು..!

By Kannadaprabha NewsFirst Published Jun 29, 2023, 6:46 AM IST
Highlights

ಮೈಸೂರು ನಗರದ ಉತ್ತನಹಳ್ಳಿಯ ಕಬ್ಬಾಳ ಅಲಿಯಾಸ್‌ ಚಂದು ಹಾಗೂ ಆತನ ಭಾಮೈದ ರಘು ಬಂಧಿತರಾಗಿದ್ದು, ಆರೋಪಿಗಳಿಂದ 33.5 ಲಕ್ಷ ಮೌಲ್ಯದ 452 ಗ್ರಾಂ ಚಿನ್ನಾಭರಣ ಜಪ್ತಿ. 

ಬೆಂಗಳೂರು(ಜೂ.29): ನಗರದಲ್ಲಿ ಸರಗಳ್ಳತನದಲ್ಲಿ ತೊಡಗಿದ್ದ ಭಾವ-ಭಾಮೈದ ಜೋಡಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಗರದ ಉತ್ತನಹಳ್ಳಿಯ ಕಬ್ಬಾಳ ಅಲಿಯಾಸ್‌ ಚಂದು ಹಾಗೂ ಆತನ ಭಾಮೈದ ರಘು ಬಂಧಿತರಾಗಿದ್ದು, ಆರೋಪಿಗಳಿಂದ 33.5 ಲಕ್ಷ ಮೌಲ್ಯದ 452 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಈ ಜೋಡಿಯಿಂದ ಕಳವು ಮಾಲು ಸ್ವೀಕರಿಸಿದ ಆರೋಪದ ಮೇರೆಗೆ ಆಂಧ್ರಪ್ರದೇಶದ ವೆಂಕಟೇಶ್ವರಲು ಕೂಡಾ ಬಂಧಿತನಾಗಿದ್ದಾನೆ. ಕೆಲ ದಿನಗಳ ಹಿಂದೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ಸರಳ್ಳತನ ಕೃತ್ಯಗಳು ನಡೆದಿದ್ದವು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಸುಂದರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಕೆ.ಎಲ್‌.ಪ್ರಭು ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಈ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

ಬೆಂಗಳೂರು: ಗೂಗಲ್‌ನಲ್ಲಿ ಗೋಡೌನ್‌ ಗುರುತಿಸಿ ಕದಿಯುತ್ತಿದ್ದ ಖದೀಮರ ಬಂಧನ

ಭಾವ-ಭಾಮೈದ ಹಾವಳಿ

ಚಂದು ಹಾಗೂ ರಘು ವೃತ್ತಿಪರ ಸರಗಳ್ಳರಾಗಿದ್ದು, ಈ ಜೋಡಿ ವಿರುದ್ಧ ಬೆಂಗಳೂರು ನಗರ, ಮೈಸೂರು, ರಾಮನಗರ, ತುಮಕೂರು, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಘು ಸೋದರಿಯನ್ನು ಪ್ರೀತಿಸಿ ಚಂದು ವಿವಾಹವಾಗಿದ್ದ. ಮದುವೆ ಬಳಿಕ ಭಾವ-ಭಾಮೈದ ಜೋಡಿಯಾಗಿ ಸರಗಳ್ಳತನದಲ್ಲಿ ತೊಡಗಿದ್ದರು. ಏಕಾಂಗಿಯಾಗಿ ಓಡಾಡುವ ಜನರನ್ನು ಗುರುತಿಸಿ ಸರ ಕಳವು ಮಾಡಿ ಆರೋಪಿಗಳು ಪರಾರಿಯಾಗುತ್ತಿದ್ದರು.
ಕಳವು ಮಾಡಿದ ಆಭರಣಗಳನ್ನು ಆಂಧ್ರಪ್ರದೇಶದ ವೆಂಕಟೇಶ್ವರಲು ಮೂಲಕ ಆರೋಪಿಗಳು ವಿಲೇವಾರಿ ಮಾಡುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಜೋಡಿ ಹಾವಳಿ ಶುರು ಮಾಡಿತ್ತು. ಮೊದಲು ಬೈಕ್‌ ಕಳವು ಮಾಡಿದ ಆರೋಪಿಗಳು, ಬಳಿಕ ನಗರದಲ್ಲಿ ಸರಗಳ್ಳತನದಲ್ಲಿ ತೊಡಗಿದ್ದರು. ಹಲವು ಬಾರಿ ಬಂಧಿತರಾಗಿ ಜೈಲು ಸೇರಿದ್ದರೂ ಸಹ ಭಾವ-ಭಾಮೈದ ಚಾಳಿ ಬಿಟ್ಟಿರಲಿಲ್ಲ. ಸುಲಭವಾಗಿ ಹಣ ಸಂಪಾದನೆ ಸಲುವಾಗಿ ಸರಗಳ್ಳತನದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗಂಡನ ಕೃತ್ಯಕ್ಕೆ ಪತ್ನಿಯರ ನೆರವು

ಚಂದು ಎರಡು ವಿವಾಹವಾಗಿದ್ದು, ಪತಿಯ ಅಪರಾಧ ಕೃತ್ಯಗಳಿಗೆ ಆತನ ಇಬ್ಬರು ಪತ್ನಿಯರು ನೆರವು ನೀಡುತ್ತಿದ್ದರು. ಕೆಲ ತಿಂಗಳ ಹಿಂದೆ ಸರಗಳ್ಳತನ ಪ್ರಕರಣದಲ್ಲಿ ಚಂದು ಹಾಗೂ ಆತನ ಪತ್ನಿಯರನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

click me!