Bengaluru Crime: ಜ್ಯುವೆಲ​ರ್ಸ್‌ ಸ್ಟೋರ್‌ಗೆ ಕನ್ನ: 5 ಕೇಜಿ ಚಿನ್ನ ಲೂಟಿ

By Girish GoudarFirst Published Apr 21, 2022, 4:53 AM IST
Highlights

*  ಚಿನ್ನದ ಮಳಿಗೆಯ ಪಕ್ಕದ ಕಟ್ಟಡದಿಂದ ಗೋಡೆ ಕೊರೆದು ಕೃತ್ಯ
*  ಪಕ್ಕದ ಕಟ್ಟಡದಲ್ಲಿ ನೆಲೆಸಿದ್ದ ಇಬ್ಬರ ಮೇಲೆ ಶಂಕೆ
*  ಒಂದೂವರೆ ತಿಂಗಳ ಹಿಂದೆಯಷ್ಟೇ ಜ್ಯುವೆಲರ್ಸ್‌ ಮಳಿಗೆ ಪಕ್ಕಕ್ಕೆ ಬಾಡಿಗೆ ಬಂದಿದ್ದ ಇಬ್ಬರು
 

ಬೆಂಗಳೂರು(ಏ.21): ಚಿನ್ನಾಭರಣ ಮಳಿಗೆಯೊಂದಕ್ಕೆ(Jewelry Shop) ಪಕ್ಕದ ಕಟ್ಟಡದಿಂದ ಗೋಡೆ ಕೊರೆದು ಕನ್ನ ಹಾಕಿ 5 ಕೆ.ಜಿ. ಚಿನ್ನ(Gold)  ದೋಚಿ, ಕಿಲಾಡಿ ಖದೀಮರು ಪರಾರಿಯಾಗಿರುವ ಘಟನೆ ಜೆ.ಪಿ.ನಗರ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ನಗರದ 1ನೇ ಹಂತದ ‘ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ' ಕನ್ನ ಹಾಕಿದ್ದು, ಪಕ್ಕದ ಕಟ್ಟಡದಲ್ಲಿ ನೆಲೆಸಿದ್ದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯನ್ನು ಜೆ.ಪಿ.ನಗರ ಪೊಲೀಸರು(Police) ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಜ್ಯುವೆಲರ್ಸ್‌ ಮಳಿಗೆಗೆ ದುಷ್ಕರ್ಮಿಗಳು ಗೋಡೆ ಕೊರೆದು ಚಿನ್ನಾಭರಣ ದೋಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದೂವರೆ ತಿಂಗಳಿಂದ ಸಂಚು?

Latest Videos

ಜೆ.ಪಿ.ನಗರದ ನಿವಾಸಿ ಕೆ.ರಾಜು ದೇವಾಡಿಗ, 10 ವರ್ಷಗಳಿಂದ ಜೆ.ಪಿ.ನಗರದ 1ನೇ ಹಂತದ 14ನೇ ಕ್ರಾಸ್‌ನಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ‘ಪ್ರಿಯದರ್ಶಿನಿ’ ಹೆಸರಿನ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದಾರೆ. ಈ ಜ್ಯುವೆಲ​ರ್‍ಸ್ ಅಂಗಡಿಗೆ ಹೊಂದಿಕೊಂಡೇ ಮತ್ತೊಂದು ಎರಡು ಅಂತಸ್ತಿನ ಕಟ್ಟಡವಿದ್ದು, ಇದರ ಎರಡನೇ ಮಹಡಿಯಿಂದಲೇ ಕಳ್ಳರು ಕನ್ನ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿ: ಸಾಲ ತೀರಿಸಲು ಹಣ ದರೋಡೆ ನಾಟಕವಾಡಿದ್ದ ಲಾರಿ ಚಾಲಕ ಅಂದರ್

ಉತ್ತರ ಭಾರತದ(North India) ಇಬ್ಬರು, ಒಂದೂವರೆ ತಿಂಗಳ ಹಿಂದೆ ಪ್ರಿಯದರ್ಶಿನಿ ಜ್ಯುವೆಲ​ರ್ಸ್‌ ಪಕ್ಕದ ಕಟ್ಟಡದಲ್ಲಿ ರೂಮ್‌ ಬಾಡಿಗೆ ಪಡೆದು ನೆಲೆಸಿದ್ದರು. ಅಂದಿನಿಂದ ಆಭರಣ ಮಳಿಗೆಯಲ್ಲಿ ಚಿನ್ನ ದೋಚಲು ಯೋಜಿಸಿದ್ದ ಅವರು, ಇದಕ್ಕಾಗಿ ಪಕ್ಕಾ ಸಂಚು ರೂಪಿಸಿದ್ದರು. ಅಂತೆಯೇ ಏ.17ರ ಶನಿವಾರ ರಾತ್ರಿ ಆರೋಪಿಗಳು, ಡ್ರಿಲ್ಲಿಂಗ್‌ ಯಂತ್ರ ಬಳಸಿ ಎರಡನೇ ಮಹಡಿಯಲ್ಲಿ ಜ್ಯುವೆಲರ್ಸ್‌ ಮಳಿಗೆಯ ಗೋಡೆಯನ್ನು 2 ಅಡಿ ಕೊರೆದಿದ್ದರು. ಆಗ ಜ್ಯುವೆಲ​ರ್ಸ್‌ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದರು. ಗೋಡೆ ಕೊರೆದು ಒಳ ಪ್ರವೇಶಿಸಿದ ಆರೋಪಿಗಳು, ಎರಡನೇ ಮಹಡಿಯಿಂದ ಕೆಳ ಮಹಡಿಗೆ ಬಂದಿದ್ದಾರೆ. ಅಲ್ಲಿದ್ದ ಲಾಕರ್‌ ಅನ್ನು ಗ್ಯಾಸ್‌ ಕಟ್ಟರ್‌ನಿಂದ ಕತ್ತರಿಸಿ ಅದರಲ್ಲಿದ್ದ 5 ಕೆ.ಜಿ. ಬಂಗಾರ ದೋಚಿ ಪರಾರಿಯಾಗಿದ್ದಾರೆ. ಮರುದಿನ ಅಂಗಡಿ ಬಾಗಿಲು ತೆರೆಯಲು ಬಂದಾಗ ಕನ್ನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಸಂಬಂಧ ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru Crime: ಹಾಡಹಗಲೇ ಬಟ್ಟೆ ಅಂಗಡಿಗೆ ಕನ್ನ

5ರಿಂದ 6ರ ತಂಡದಿಂದ ಕೃತ್ಯ?

ಚಿನ್ನಾಭರಣ ಮಳಿಗೆ ಕನ್ನ ಕೃತ್ಯದಲ್ಲಿ ಐದರಿಂದ ಆರು ಜನರು ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

ಕಳ್ಳತನ(Theft) ದುರುದ್ದೇಶದಿಂದಲೇ ನಗರಕ್ಕೆ ಬಂದಿರುವ ಈ ತಂಡ, ಭದ್ರತೆ ಇಲ್ಲದ ಪ್ರಿದರ್ಶಿನಿ ಜ್ಯುವೆಲ​ರ್ಸ್‌ ಅನ್ನು ಗುರಿಯಾಗಿಸಿದ್ದಾರೆ. ಈ ಮಳಿಗೆಗೆ ಸಿಸಿಟಿವಿ ಕ್ಯಾಮೆರಾ ಹೊರತುಪಡಿಸಿದರೆ ಕಾವಲುಗಾರರು ನಿಯೋಜಿಸಿರಲಿಲ್ಲ. ಇದನ್ನೇ ಬಳಸಿಕೊಂಡ ಕಳ್ಳರ ತಂಡದ ಇಬ್ಬರು ಸದಸ್ಯರು, ಮೊದಲು ಆಭರಣ ಮಳಿಗೆಯ ಪಕ್ಕದ ಕಟ್ಟಡದಲ್ಲಿ ನಕಲಿ ದಾಖಲೆ ಸಲ್ಲಿಸಿ ರೂಮ್‌ ಬಾಡಿಗೆ ಪಡೆದಿದ್ದಾರೆ. ಬಳಿಕ ಆಭರಣ ಮಳಿಗೆಯ ಭದ್ರತಾ ವ್ಯವಸ್ಥೆ ಹಾಗೂ ವಹಿವಾಟಿನ ಬಗ್ಗೆ ಮಾಹಿತಿ ಸಂಗ್ರಹಿಸಿ ಕನ್ನ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 

click me!