ಐವರು ಅಪ್ರಾಪ್ತರಿಂದ ಬಾಲಕಿ ಮೇಲೆ ಗ್ಯಾಂಗ್‌ರೇಪ್: ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದವರು ವಶಕ್ಕೆ

By BK AshwinFirst Published Nov 30, 2022, 2:08 PM IST
Highlights

ಬಾಲಕರು ಅಶ್ಲೀಲ ಚಿತ್ರಗಳ ಚಟಕ್ಕೆ ಬಿದ್ದಿದ್ದರು ಹಾಗೂ ಆಗಾಗ್ಗೆ ಅವರು ಶಾಲೆಯ ಬಳಿಕ ಮೊಬೈಲ್‌ನಲ್ಲಿ ಇಂತಹ ವಿಡಿಯೋಗಳನ್ನು ನೋಡುತ್ತಿದ್ದರು. ಈ ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 

ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಮತ್ತೊಂದು ಗ್ಯಾಂಗ್‌ರೇಪ್‌ ಪ್ರಕರಣ ವರದಿಯಾಗಿದ್ದು, ಬಾಲಕರು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡಸಿದ್ದಾರೆ ಎಂದು ಹೇಳಲಾಗಿದೆ. ಇನ್ನು, ಆಗಸ್ಟ್‌ ತಿಂಗಳಲ್ಲೇ ಘಟನೆ ನಡೆದಿದ್ದರೂ, ಸೋಮವಾರ ಕುಟುಂಬ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. 9 ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕರು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಯಾತ್‌ನಗರ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು, ಈ ಅತ್ಯಾಚಾರ ಪ್ರಕರಣ ಕೆಲವೇ ದಿನಗಳ ಹಿಂದೆ ಕುಟುಂಬದವರ ಗಮನಕ್ಕೆ ಬಂದಿದೆ ಎಂದೂ ತಿಳಿದುಬಂದಿದೆ. 

ಐವರು ಬಾಲಕರ ಪೈಕಿ ಮೂವರು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, 15 ವರ್ಷ ವಯಸ್ಸಿನವರಾಗಿದ್ದರೆ, ಇನ್ನಿಬ್ಬರಿಗೆ 14 ವರ್ಷಗಳಾಗಿದ್ದು, ಇವರು 9ನೇ ತರಗತಿ ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಲಕಿಗೆ 17 ವರ್ಷಗಳಾಗಿದ್ದು, ಈಕೆ ಸಹ 10ನೇ ತರಗತಿ ಓದುತ್ತಿದ್ದಾರೆ ಎಂದೂ ವರದಿಯಾಗಿದೆ.

ಇದನ್ನು ಓದಿ: ಬಾಲಕಿಯ ಮೇಲೆ ಕಣ್ಣು ಹಾಕಿದ ಕಾಮುಕನಿಗೆ ಗೂಸಾ

ಬಾಲಕರು ಅಶ್ಲೀಲ ಚಿತ್ರಗಳ ಚಟಕ್ಕೆ ಬಿದ್ದಿದ್ದರು ಹಾಗೂ ಆಗಾಗ್ಗೆ ಅವರು ಶಾಲೆಯ ಅವಧಿಯ ಬಳಿಕ ಮೊಬೈಲ್‌ನಲ್ಲಿ ಇಂತಹ ವಿಡಿಯೋಗಳನ್ನು ನೋಡುತ್ತಿದ್ದರು. ಇವರೆಲ್ಲರೂ ದಿನಗೂಲಿ ಕಾರ್ಮಿಕರ ಮಕ್ಕಳು. ಇನ್ನು, ಸಂತ್ರಸ್ಥೆಗೆ ಆರೋಪಿಗಳ ಪರಿಚಯವಿದ್ದು, ಈ ಹಿನ್ನೆಲೆ ಆಗಾಗ್ಗೆ ಅವರೊಂದಿಗೆ ಆಕೆ ಸುತ್ತಾಡುತ್ತಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು ಆಗಸ್ಟ್‌ ತಿಂಗಳಲ್ಲಿ 10 ದಿನಗಳ ಅವಧಿಯಲ್ಲಿ 2 ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಈ ಕೃತ್ಯವನ್ನು 2 ಬಾರಿಯೂ ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿಕೊಡಿದ್ದಾರೆ ಎಂದು ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.   

ಗೆಳೆತನವನ್ನೇ ಬಂಡವಾಳವಾಗಿಸಿಕೊಂಡ ಹುಡುಗರು ಆಕೆಯ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ 2 ಬಾರಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಈ ಪೈಕಿ ಒಬ್ಬ ಆರೋಪಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಅಲ್ಲದೆ, ವಿಡಿಯೋದೊಂದಿಗೆ ಬಾಲಕಿಗೆ ಬೆದರಿಸಿ 10 ದಿನಗಳ ಬಳಿಕ, ಮತ್ತೊಮ್ಮೆ ಆಕೆಗೆ ಅತ್ಯಾಚಾರ ಮಾಡಿದ್ದಾರೆ. ಈ ಕೃತ್ಯವನ್ನೂ ಸಹ ಮೊಬೈಲ್‌ವೊಂದರಲ್ಲಿ ರೆಕಾರ್ಡ್‌ ಮಾಡಲಾಗಿದೆ. ಆರೋಪಿಗಳು ಬೆದರಿಕೆ ಹಾಕಿರುವ ಬಗ್ಗೆ ಸಂತ್ರಸ್ಥೆ ಹೇಳಿದ್ದಾಳೆ ಎಂದೂ ಪೊಲೀಸರು ವಿವರಿಸಿದ್ದಾರೆ. 

ಇದನ್ನೂ ಓದಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಕೇವಲ ಐದು ಬಸ್ಕಿಯ ಶಿಕ್ಷೆ

ಇನ್ನು, ವಾಟ್ಸಾಪ್‌ನಲ್ಲಿ ಬಾಲಕರು ಈ ವಿಡಿಯೋವನ್ನು ಶೇರ್‌ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಬಾಲಕಿಯ ಕುಟುಂಬದವರು ಈ ವಿಡಿಯೋ ಬಗ್ಗೆ ಕೇಳಿದಾಗ, ಅತ್ಯಾಚಾರವಾಗಿರುವ ಬಗ್ಗೆ ಹಾಗೂ ಘಟನೆಯ ವಿವರವನ್ನು ಆಕೆ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಸಂತ್ರಸ್ಥೆಯ ಪೋಷಕರು ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಐವರು ಬಾಲಕರ ವಿರುದ್ಧ ದೂರು ನೀಡಿದ್ದಾರೆ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೋಷಕರು ಗ್ಯಾಂಗ್‌ ರೇಪ್‌ ದೂರು ನೀಡಿದ ನಂತರ ಪೊಲೀಸರು ಐವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಅವರನ್ನು ಬಾಲಾಪರಾಧಿ ನ್ಯಾಯ ಮಂಡಳಿ ಎದುರು ಹಾಜರುಪಡಿಸಿದ್ದು, ನಂತರ ಅವರನ್ನು ಬಾಲಾಪರಾಧಿ ಗೃಹಕ್ಕೆ ಕಳಿಸಲಾಗಿದೆ. ಸಂತ್ರಸ್ಥೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್‌ 376 DA ಹಾಗೂ ಪೋಕ್ಸೋ ಕಾಯ್ದೆ ಹಾಗೂ ಐಟಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

click me!