ತಮಿಳುನಾಡಿನ ತಿರುಚಿ ಮೂಲದ ಸುರೇಶ್ ಕೊಲೆಯಾದ ಲಾರಿ ಚಾಲಕ. ಕೊಲೆ ಸಂಬಂಧ ಮಧ್ಯಪ್ರದೇಶ ಮೂಲದ ಸಹದೇವ ಆರ್ಯ ಅಲಿಯಾಸ್ ಬಾಬು, ಸುನೀಲ್ ನಾವೇ, ದಿನೇಶ್ ಮತ್ತು ಅಲ್ವೇಶ್ ಪಾನ್ಸೆ ಹಾಗೂ ಸಂಜಯ್ ಕಾಜ್ಜೆ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಬೆಂಗಳೂರು(ಆ.13): ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ತಮಿಳು ಭಾಷೆಯಲ್ಲಿ ನಿಂದಿಸಿದ ಲಾರಿ ಚಾಲಕನನ್ನು ಮಲಗಿದ್ದ ವೇಳೆ ಜೊತೆಗಿದ್ದ ಕಾರ್ಮಿಕರೇ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ತಿರುಚಿ ಮೂಲದ ಸುರೇಶ್ (47) ಕೊಲೆಯಾದ ಲಾರಿ ಚಾಲಕ. ಕೊಲೆ ಸಂಬಂಧ ಮಧ್ಯಪ್ರದೇಶ ಮೂಲದ ಸಹದೇವ ಆರ್ಯ ಅಲಿಯಾಸ್ ಬಾಬು(29), ಸುನೀಲ್ ನಾವೇ(20), ದಿನೇಶ್ (25) ಮತ್ತು ಅಲ್ವೇಶ್ ಪಾನ್ಸೆ(20) ಹಾಗೂ ಸಂಜಯ್ ಕಾಜ್ಜೆ(21) ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
undefined
ಏನಿದು ಪ್ರಕರಣ?:
ಕೊಲೆಯಾದ ಸುರೇಶ್ ಮತ್ತು ಸಂಬಂಧಿ ರವಿಚಂದ್ರನ್ 3 ತಿಂಗಳಿಂದ ಅಮೃತ್ ಬೋರ್‌ವೆಲ್ ಕಲ್ಕಿ ಎಂಟರ್‌ಪ್ರೈಸಸ್‌ನಲ್ಲಿ ಬೋರ್ವೆಲ್ ಲಾರಿ ಚಾಲಕ ಹಾಗೂ ಡ್ರಿಲ್ಲಿಂಗ್ ಆಪರೇಟರ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಸಿಂಗಸಂದ್ರದ ಎಇಸಿಎಲ್ ಲೇಔಟ್‌ನ ನಿವೇಶನವೊಂದರಲ್ಲಿ ಬೋರ್ ವೆಲ್ ಕೊರೆಯಲು ಸುರೇಶ್, ರವಿಚಂದ್ರನ್ ಹಾಗೂ ಆರೋಪಿಗಳು ಬಂದಿದ್ದಾರೆ.
ಅಡುಗೆ ಮಾಡುವಾಗ ನಿಂದನೆ:
ಭಾನುವಾರ ರಾತ್ರಿ ಬೋರ್‌ವೆಲ್ ಕೊರೆಯುವ ಕೆಲಸ ಸ್ಥಗಿತಗೊಳಿಸಿ, ಸೋಮವಾರ ಕೆಲಸ ಮುಂದುವರೆಸಲು ತೀರ್ಮಾನಿಸಿದ್ದಾರೆ. ನಿವೇಶನದಲ್ಲಿದ್ದ ಶೆಡ್‌ನಲ್ಲಿ ರಾತ್ರಿ ಉಳಿದುಕೊಂಡಿದ್ದಾರೆ. ಈ ವೇಳೆ ಆರೋಪಿ ಸಹದೇವ ಅಡುಗೆ ಮಾಡಲು ಆರಂಭಿಸಿದ್ದಾನೆ. ಆಗ ಬೋರ್‌ವೆಲ್ ಲಾರಿ ಚಾಲಕ ಸುರೇಶ್, ನಿನಗೆ ಸರಿಯಾಗಿ ಕೆಲಸ ಮಾಡಲೂ ಬರುವುದಿಲ್ಲ, ಅಡುಗೆ ಮಾಡಲೂ ಬರುವುದಿಲ್ಲ ಎಂದು ತಮಿಳಿನಲ್ಲಿ ಸಹದೇವನನ್ನು ನಿಂದಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಬಳಿಕ ಇತರೆ ಕಾರ್ಮಿಕರು ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಶೆಡ್‌ನಲ್ಲಿ ನಿದ್ದೆಗೆ ಜಾರಿದ್ದಾರೆ.
ಪಟ್ಟಣಗೆರೆ ಶೆಡ್ ಮಾದರಿಯಲ್ಲೇ ತುಮಕೂರು ಶೆಡ್‌ನಲ್ಲಿ ಸ್ನೇಹಿತನ ಕೊಲೆ
ರಾಡ್‌ನಿಂದ ತಲೆಗೆ ಹಲ್ಲೆಗೈದು ಕೊಲೆ:
ಲಾರಿ ಚಾಲಕ ಸುರೇಶ್ ಗಾಢ ನಿದ್ದೆಯಲ್ಲಿದ್ದಾಗ ರಾತ್ರಿ ಸುಮಾರು 11.30ಕ್ಕೆ ಕಾರ್ಮಿಕರಾದ ಸಹದೇವ ಹಾಗೂ ಇತರರು ಕಬ್ಬಿಣದ ರಾಡ್ ಹಾಗೂ ಸುತ್ತಿಗೆಯಿಂದ ಸುರೇಶ್ ತಲೆ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುರೇಶ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುರೇಶ್ ಕೊಲೆ ವಿಚಾರ ಗೊತ್ತಾಗಿ ಸಂಬಂಧಿ ರವಿಚಂದ್ರನ್ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಹತ್ಯೆ ಬಳಿಕ ತವರು ರಾಜ್ಯಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.