*ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಖಾಸಗಿ ಬಸ್
* ಮನೆ ಸೇರುವ ಮುನ್ನವೇ ಜವರಾಯನ ರೂಪದಲ್ಲಿ ಬಂದ ಖಾಸಗಿ ಬಸ್
* ಕುಟುಂಬದ ಎಲ್ಲರೂ ಅಸುನೀಗಿದಕ್ಕೆ ಅನಾಥವಾದ ನಾಗರಾಜ್ ನಿವಾಸ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮಾ.24): ಅವರೆಲ್ಲಾ ನೆಂಟರ ಊರಲ್ಲಿ ನಡೆದ ಜಾತ್ರೆಯ ಊಟ ಮುಗಿಸಿ ಸ್ವಗ್ರಾಮಕ್ಕೆ ತೆರಳುತಿದ್ರು. ಆದ್ರೆ ಮನೆ ಸೇರುವ ಮುನ್ನವೇ ಜವರಾಯನ ರೂಪದಲ್ಲಿ ಬಂದ ಖಾಸಗಿ ಬಸ್ಸೊಂದು ಇಡೀ ಕುಟುಂಬಕ್ಕೆ ಮಸಣದ ದಾರಿ ತೋರಿಸಿದೆ. ಹೀಗಾಗಿ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
undefined
ರಕ್ತದ ಮಡುವಿನಲಿ ದಿಕ್ಕಾ ಪಾಲಾಗಿ ಬಿದ್ದಿರೋ ಶವಗಳು. ತಂದೆ ತಾಯಿ ಎದುರಲ್ಲೇ ಕೊನೆಯುಸಿರೆಳೆದ ಮಕ್ಕಳು. ಈ ಮನಕಲಕುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮ.
ಚಿತ್ರದುರ್ಗದ ಬಳಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ
ಹೌದು ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕಾಗಿ ಇಬ್ಬರು ಮಕ್ಕಳ ಸಹಿತ ಪತ್ನಿಯೊಂದಿಗೆ ಬಿ ದುರ್ಗ ಗ್ರಾಮದ ನಾಗರಾಜ್ ತಮ್ಮ ಬೈಕಿನಲ್ಲಿ ತೆರಳಿದ್ರು. ನಿನ್ನೆ(ಬುಧವಾರ) ರಾತ್ರಿ ಊಟ ಮುಗಿಸಿ ಸ್ವಗ್ರಾಮಕ್ಕೆ ಬೈಕ ನಲ್ಲಿ ವಾಪಾಸ್ ಆಗ್ತಿದ್ರು. ಆಗ ಇವರ ಹಿಂಬದಿಯಿಂದ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಓವರ್ ಟೇಕ್ ಮಾಡುವ ಭರಾಟೆಯಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಲ್ಲಿದ್ದ ದಂಪತಿಗಳಾದ ನಾಗರಾಜ್(43),ಶೈಲಜ(40) ಇವರ ಮಕ್ಕಳಾದ ವೀರೇಶ್(15), ಸಂತೋಷ್(13) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಹೀಗಾಗಿ ಸ್ಥಳದಲ್ಲಿದ್ದ ಸ್ಥಳಿತರು ಬಸ್ ಚಾಲಕನ ವಿರುದ್ಧ ಕಿಡಿಕಾರಿದ್ದಾರೆ. ಆಗ ಬಸ್ಸನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಚಾಲಕ ಎಸ್ಕೇಪ್ ಆಗಿದ್ದಾನೆ.
ಇನ್ನು ಈ ವಿಚಾರದ ತಿಳಿದ ಹೊಳಲ್ಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದೂ, ಮೃತ ದೇಹಗಳನ್ನು ಸಂಬಂಧಿಗಳಿಗೆ ಹಸ್ತಾಂತರಿಸಿದ್ದಾರೆ. ನಾಲ್ವರ ಅಂತ್ಯಕ್ರಿಯೆ ಇಂದು ಸಂಜೆ ಬಿ ದುರ್ಗ ಗ್ರಾಮದಲ್ಲಿ ನಡೆದಿದ್ದು, ಹೀಗಾಗಿ ಮೃತರ ಅಂತಿಮ ದರ್ಶನವನ್ನು ಗ್ರಾಮಸ್ಥರು, ಸಂಬಂಧಿಗಳು ಹಾಗು ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳು ಪಡೆದುಕೊಂಡು, ಕಣ್ಣೀರಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹರಸಿದ್ರು. ಈ ವೇಳೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದ್ದೂ, ಪ್ರಕರಣ ಹೊಳಲ್ಕೆರೆ ಠಾಣೆಯಲ್ಲಿ ದಾಖಲಾಗಿದೆ. ಖಾಸಗಿ ಬಸ್ ಚಾಲಕರು ಸಿಕ್ಕಾಪಟ್ಟೆ ಸ್ಪೀಡ್ ಆಗಿ ಡ್ರೈವ್ ಮಾಡ್ತಾರೆ ಆದ್ದರಿಂದ ಈ ರೀತಿಯ ಘಟನೆಗಳು ಸಂಭವಿಸ್ತಿವೆ ಎಂದು ಸ್ಥಳೀಯರು ಕಿಡಿಕಾರಿದರು.
ಒಟ್ಟಾರೆ ಸಂತಸದಿಂದ ಜಾತ್ರೆ ಊಟ ಮಾಡಿಬಂದ ಕುಟುಂಬಸ್ಥರ ಬೆನ್ನ ಹಿಂದೆ ಖಾಸಗಿ ಬಸ್ ಯಮದೂತನಾಗಿ ಧಾವಿಸಿದೆ. ಹೀಗಾಗಿ ಮಕ್ಕಳು ಸಹಿತ ಮನೆ ಸೇರಬೇಕಾದ ದಂಪತಿಗಳು ಮನೆ ಸೇರುವ ಮನ್ನವೇ ಮಸಣ ಸೇರಿದ್ದೂ, ಇಡೀ ಬಾಳಿ ಬದುಕಬೇಕಾದ ಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಇಹಲೋಕ ದರ್ಶನವಾಗಿದ್ದೂ, ಶೋಚನೀಯ ಎನಿಸಿದೆ.