
ಬೆಂಗಳೂರು(ಮಾ.24): ಕ್ಷುಲ್ಲಕ ವಿಚಾರಕ್ಕೆ ಮೂವರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್ (36) ಮೃತಪಟ್ಟಿದ್ದು, ಘಟನೆಯಲ್ಲಿ ಮಂಜುನಾಥ್ ಮತ್ತು ಕೃತ್ಯ ಎಸಗಿದ ಆರೋಪಿ ಚಿಕ್ಕಮಗಳೂರಿನ ಗಣೇಶ್ ಎಂಬಾತ ಕೂಡ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಜೆಸ್ಟಿಕ್ ಸಮೀಪದ ಗಣೇಶ ದೇವಾಲಯದ ಬಳಿ ಗುರುವಾರ ಸಂಜೆ 6.20ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 ತಿಂಗಳ ಹಿಂದಿನ ದ್ವೇಷಕ್ಕೆ ಗಾರೆ ಮೇಸ್ತ್ರಿ ಕೊಲೆ....
ಉತ್ತರ ಕರ್ನಾಟಕ ಮೂಲದ ಮಲ್ಲಿನಾಥ್ ಬಿರಾದರ್, ಮಂಜುನಾಥ್ ಹಾಗೂ ಚಿಕ್ಕಮಗಳೂರಿನ ಗಣೇಶ್ ಸ್ನೇಹಿತರು. ಕೆಲ ತಿಂಗಳಿಂದ ಮೆಜೆಸ್ಟಿಕ್ ಸುತ್ತಮುತ್ತ ಹೋಟೆಲ್, ಬಾರ್ ಸೇರಿದಂತೆ ಸಿಕ್ಕ ಕೆಲಸಗಳನ್ನು ಮಾಡಿ ಕೊಂಡಿದ್ದರು. ರಾತ್ರಿ ವೇಳೆ ಮದ್ಯ ಸೇವಿಸಿ ಮೆಜೆಸ್ಟಿಕ್ ಸುತ್ತಮುತ್ತಲ ಖಾಲಿ ಜಾಗಗಳಲ್ಲಿ ಮಲಗುತ್ತಿದ್ದರು. ಬುಧವಾರ ರಾತ್ರಿ ಸಿಗರೇಟ್ ಸೇದುವ ವಿಚಾರಕ್ಕೆ ಮೂವರ ನಡುವೆ ಗಲಾಟೆ ಆಗಿದೆ. ಈ ವೇಳೆ ಮಂಜುನಾಥ್ ಮತ್ತು ಮಲ್ಲಿನಾಥ್ ಬಿರಾದರ್ ಆರೋಪಿ ಗಣೇಶ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಪರಸ್ಪರ ಸಮಾಧಾನಗೊಂಡಿದ್ದರು.
ಗುರುವಾರ ಬೆಳಗ್ಗೆ ಮೂವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಮತ್ತೆ ಮೂವರು ಒಟ್ಟಿಗೆ ಮದ್ಯ ಸೇವಿಸಿ ಗಣೇಶ್ ದೇವಾಲಯದ ಬಳಿ ಹೋಗಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಗಣೇಶ್ ಬುಧವಾರ ರಾತ್ರಿ ನಡೆದ ಗಲಾಟೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಜಗಳ ಆರಂಭವಾಗಿದೆ. ಈ ವೇಳೆ ಮೂವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ಗಣೇಶ್ ತನ್ನ ಬಳಿಯಿದ್ದ ಚಾಕುವಿನಿಂದ ಮಂಜುನಾಥ್ ಹಾಗೂ ಮಲ್ಲಿನಾಥ್‌ನ ಹೊಟ್ಟೆಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಲ್ಲಿನಾಥ್ ಬಿರಾದಾರ್ ಮೃತಪಟ್ಟಿದ್ದಾನೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ