ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ: ಏರ್ಪೋರ್ಟಲ್ಲಿ ಜಪ್ತಿ

By Kannadaprabha News  |  First Published Aug 23, 2023, 7:02 AM IST

ಅಪರೂಪದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. 


ಬೆಂಗಳೂರು (ಆ.23): ಅಪರೂಪದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ತರಲಾಗಿದ್ದ ಹೆಬ್ಬಾವು ಮರಿ, ಊಸರವಳ್ಳಿ, ಮೊಸಳೆ ಮರಿ, ಆಮೆಗಳು, ಮರಿ ಕಾಂಗರೂ ಸೇರಿದಂತೆ 234 ವನ್ಯಜೀವಿಗಳನ್ನು ರಕ್ಷಿಸಿದ್ದಾರೆ. ಸೋಮವಾರ ರಾತ್ರಿ 10.30ಕ್ಕೆ ಬ್ಯಾಂಕಾಕ್‌ನಿಂದ ಎಫ್‌.ಡಿ-137 ಸಂಖ್ಯೆ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. 

ಈ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ಗಮನ ದ್ವಾರದ ಬಳಿ ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ಮಾಡುವಾಗ, ಪ್ರಯಾಣಿಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ಆತನ ಟ್ರಾಲಿ ಬ್ಯಾಗ್‌ ಪರಿಶೀಲಿಸಿದಾಗ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಇದೇ ವಿಮಾನದಲ್ಲಿ ವಾರಸುದಾರರು ಇಲ್ಲದ ಮತ್ತೊಂದು ಟ್ರಾಲಿ ಬ್ಯಾಗ್‌ ಪತ್ತೆಯಾಗಿದ್ದು, ಅದರಲ್ಲಿಯೂ ವನ್ಯಜೀವಿಗಳು ಇರುವುದು ಕಂಡು ಬಂದಿದೆ. ಈ ಸಂಬಂಧ ವನ್ಯಜೀವಿಗಳ ಕಳ್ಳ ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ.

Tap to resize

Latest Videos

‘ಅತೃಪ್ತ’ ಸೋಮಶೇಖರ್‌ ಸದ್ಯದಲ್ಲೇ ದಿಲ್ಲಿಗೆ ದೌಡು: ಕಾಂಗ್ರೆಸ್‌ ಪಕ್ಷ ಸೇರ್ಪಡೆ?

ಗಗನಸಖಿಯರ ಜತೆ ವಿದೇಶಿಗನ ಅಸಭ್ಯ ವರ್ತನೆ: ವಿಮಾನ ಪ್ರಯಾಣದ ವೇಳೆ ಇಬ್ಬರು ಗಗನ ಸಖಿಯರ ಜತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಮಾಲ್ಡೀವ್ಸ್‌ ಮೂಲದ ಅಕ್ರಂ ಮಹಮದ್‌(51) ಬಂಧಿತ. ಆ.18ರಂದು ಘಟನೆ ನಡೆದಿದೆ. ಖಾಸಗಿ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ನೀಡಿದ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಆ.18ರಂದು ಮಾಲ್ಡೀವ್‌್ಸನ ಮಾಲೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದ. ಪ್ರಯಾಣದ ವೇಳೆ ವಿಮಾನದಲ್ಲಿ ಗಗನಸಖಿಯನ್ನು ಕರೆದು ಬಿಯರ್‌ ಮತ್ತು ಗೋಡಂಬಿ ಕೇಳಿದ್ದಾನೆ. ಅದರಂತೆ ಆ ಗಗನಸಖಿ ಬಿಯರ್‌ ಮತ್ತು ಗೋಡಂಬಿ ತಂದು ಕೊಟ್ಟಿದ್ದಾರೆ. ಆಗ ಆರೋಪಿಯು ‘ನಾನು ನಿನ್ನಂತಹ ಹುಡುಗಿಯನ್ನು ಹುಡುಕುತ್ತಿದ್ದೆ. ಸೇವೆಗೆ ನೀನು ಎಷ್ಟುಶುಲ್ಕ ಕೇಳುವೆ. ಯಾವಾಗ ನೀನು ಬಿಡುವಾಗುವೆ’ ಎಂದು ಕೇಳಿದ್ದಾನೆ. ಮುಂದುವರೆದು, ‘ನಿನ್ನಂತಹ ಹುಡುಗಿಯನ್ನು ನಾನು 51 ವರ್ಷದಿಂದ ಹುಡುಕುತ್ತಿದ್ದೆ. 10 ಡಾಲರ್‌ ಬದಲು 100 ಡಾಲರ್‌ ನೀಡುತ್ತೇನೆ. ಉಳಿದ ಹಣವನ್ನು ನಿನ್ನ ಬಳಿಯೇ ಇರಿಸಿಕೋ’ ಎಂದು ಗಗನಸಖಿಯ ದೇಹವನ್ನು ಕೈನಿಂದ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

100 ದಿನದಲ್ಲಿ ಎತ್ತಿನಹೊಳೆಯಿಂದ ನಾಲೆಗೆ ನೀರು ಗ್ಯಾರಂಟಿ: ಡಿಕೆಶಿ

ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ನೊಂದ ಗಗನ ಸಖಿಯರು ಆರೋಪಿ ಅಕ್ರಂ ವರ್ತನೆ ಹಾಗೂ ಕಿರುಕುಳದ ಬಗ್ಗೆ ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯು ಆರೋಪಿ ಅಕ್ರಂ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಕ್ರಂ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಬಿಜಿನೆಸ್‌ ವೀಸಾದಡಿ ಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!