ಬೆಂಗಳೂರು: ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗೆ ಧೋಖಾ, 21 ಮಂದಿ ಬಂಧನ

By Kannadaprabha NewsFirst Published Aug 29, 2023, 6:41 AM IST
Highlights

ಬಂಧಿತ ಆರೋಪಿಗಳಿಂದ 11 ಮೊಬೈಲ್‌ಗಳು, 3 ಲ್ಯಾಪ್‌ಟಾಪ್‌, 1 ಹಾರ್ಡ್‌ಡಿಸ್ಕ್‌, ಹಾಗೂ .7.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ 19.45 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬೆಂಗಳೂರು(ಆ.29):  ಆನ್‌ಲೈನ್‌ ಇ-ಕಾಮರ್ಸ್‌ನಲ್ಲಿ ವಿವಿಧ ಕಂಪನಿಗಳ ವಸ್ತುಗಳನ್ನು ಆರ್ಡರ್‌ ಮಾಡುವ ಗ್ರಾಹಕರ ಡೇಟಾ ಕಳವು ಮಾಡಿ ನಕಲಿ ವಸ್ತುಗಳನ್ನು ಡೆಲಿವರಿ ಮಾಡಿ ಹಣ ಪಡೆದು ವಂಚಿಸುತ್ತಿದ್ದ 21 ಮಂದಿ ಅಂತರ್‌ ರಾಜ್ಯ ವಂಚಕರನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಮೂಲದ ಅಭಿಷೇಕ್‌ ಅವದೇಶ್‌ ಗುಪ್ತಾ, ಆಶಿಷ್‌ ಕಾಂತಿಲಾಲ್‌ ತಲಿವಿಯಾ, ಸೂರತ್‌ ಮೂಲದ ಮಿಲನ್‌, ಗೌತಮ್‌ ಪನಸೂರ್ಯ, ಪಾತ್‌ರ್‍ ತಲಿವಿಯಾ, ವಾಗ್ಸೀಯಾ ಹಷ್‌ರ್‍ ಮನ್ಸುಖ್‌ಬಾಯ್‌, ಅಕ್ಷಯ್‌ ಕತ್ರಾನಿ ಪ್ರದೀಪ್‌ ಬಾಯ್‌, ದರ್ಶಿತ್‌ ರಫೀಲಿಯಾ, ರಾಹುಲ್‌ ಡೆಕೇಚಾ, ವಾಗ್ಸೀಯಾ ಕೆಯೂರ್‌, ಬ್ರಿಜೇಶ್‌ ಸರೋಲಾ, ಗೌರವ್‌ ಜಗದೀಶ್‌ ಬಾಯ್‌, ರೇಖಾಬಿನ್‌ ರತಿಬಾಯ್‌, ವಿವೇಕ್‌ ಸದ್ವೋದಿಯಾ, ತಲವಿಯಾ ಭೂಮಿತ್‌, ಪನಸೂರ್ಯ ಉತ್ತಮ್‌, ನಿಕುಂಜ್‌ ಮತ್ತು ಭೂಪಾಲ್‌ ಮೂಲದ ಮೊದ್‌ ಶಾಕೀರ್‌ ಅನ್ಸಾರಿ, ಅಂಕಿತ್‌ ವಿಶ್ವಕರ್ಮ, ಅನಿಕೇತ್‌ ವಿಶ್ವಕರ್ಮ ಹಾಗೂ ಶುಭಂ ವರ್ಮಾ ಬಂಧಿತರು.

ಕಲ​ಬು​ರಗಿ ಜಿಲ್ಲಾ​ದ್ಯಂತ ಪಿಂಚಣಿ ವಂಚನೆ ಹಗ​ರ​ಣ?

ಬಂಧಿತ ಆರೋಪಿಗಳಿಂದ 11 ಮೊಬೈಲ್‌ಗಳು, 3 ಲ್ಯಾಪ್‌ಟಾಪ್‌, 1 ಹಾರ್ಡ್‌ಡಿಸ್ಕ್‌, ಹಾಗೂ .7.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ 19.45 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿಗಳು ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ಗಳಾದ ಫ್ಲಿಪ್‌ಕಾರ್ಚ್‌, ಅಮೆಜಾನ್‌, ಮಿಶೋ, ಅಜಿಯೋ ಸೇರಿ ವಿವಿಧ ಕಂಪನಿಗಳ ಆ್ಯಪ್‌ಗಳಲ್ಲಿ ಆರ್ಡರ್‌ ಮಾಡುವ ಕ್ಯಾಶ್‌ ಆನ್‌ ಡೆಲವರಿ ಗ್ರಾಹಕರನ್ನೇ ಟಾರ್ಗೆಟ್‌ ಮಾಡಿ ಅಸಲಿ ವಸ್ತುಗಳ ಬದಲು ನಕಲಿ ವಸ್ತುಗಳನ್ನು ಫೇಕ್‌ ಶಿಪ್‌ಮೆಂಟ್‌ ಕಳುಹಿಸುತ್ತಿದ್ದರು. ಬಳಿಕ ಅಸಲಿ ವಸ್ತುಗಳು ಗ್ರಾಹಕರ ಕೈ ಸೇರುವ ಎರಡು ದಿನ ಮೊದಲೇ ನಕಲಿ ವಸ್ತುಗಳನ್ನು ಡೆಲಿವರಿ ಮಾಡಿ ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದರು.

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಕಂಪನಿಗೆ ಆರೋಪಿಗಳು 3 ವರ್ಷಗಳಿಂದ ಸುಮಾರು .70 ಲಕ್ಷ ನಷ್ಟಉಂಟು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಶೋ ಮಾಜಿ ನೌಕರರು ಭಾಗಿ

ಆರೋಪಿಗಳು ಮಿಶೋ ಆ್ಯಪ್‌ ಮೂಲಕ ವಸ್ತುಗಳನ್ನು ಆರ್ಡರ್‌ ಮಾಡುವ ಗ್ರಾಹಕರನ್ನೇ ಹೆಚ್ಚು ಟಾರ್ಗೆಟ್‌ ಮಾಡುತ್ತಿದ್ದರು. ಬಂಧಿತ ಆರೋಪಿಗಳ ಪೈಕಿ ಕೆಲವರು ಈ ಹಿಂದೆ ಮಿಶೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗ್ರಾಹಕರ ಡೇಟಾ ಕಳವು ಮಾಡಿ ಇತರೆ ಆರೋಪಿಗಳಿಗೆ ಮಾರಾಟ ಮಾಡಿದ್ದರು. ಬಳಿಕ ಮುಂಬೈ ಮೂಲದ ಆರೋಪಿಗಳು ನಕಲಿ ವಸ್ತುಗಳ ಫೇಕ್‌ ಶಿಪ್‌ಮೆಂಟ್‌ ಕಳುಹಿಸಿ, ನಕಲಿ ವಸ್ತುಗಳನ್ನು ಡೆಲಿವರಿ ಮಾಡಿ ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆಧಾರ್ ಅಪ್ಡೇಟ್ ಮಾಡಲು ದಾಖಲೆ ಹಂಚಿಕೊಳ್ಳುವಂತೆ ನಿಮ್ಗೆ ಇ-ಮೇಲ್ ಬಂದಿದೆಯಾ? ಹಾಗಿದ್ರೆ ಎಚ್ಚರ!

ಕೊರಿಯರ್‌ ಮೂಲಕ ಡೆಲಿವರಿ

ಗ್ರಾಹಕರಿಗೆ ಅಸಲಿ ವಸ್ತುಗಳು ತಲುಪುವ ಮುನ್ನವೇ ನಕಲಿ ವಸ್ತುಗಳನ್ನು ತಲುಪುವ ಹಾಗೆ ನೋಡಿಕೊಂಡಿದ್ದರು. ವಸ್ತುಗಳನ್ನು ಕೊರಿಯರ್‌ ಮುಖಾಂತರ ಗ್ರಾಹಕರಿಗೆ ಡೆಲಿವರಿ ಮಾಡಿಸಿ ಹಣ ಸಂಗ್ರಹಿಸುತ್ತಿದ್ದರು. ಆರೋಪಿಗಳ ವಂಚನೆ ಜಾಲದ ಬಗ್ಗೆ ಕೊರಿಯರ್‌ ಸಂಸ್ಥೆಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ವಸ್ತುಗಳನ್ನು ಡೆಲಿವರಿ ಮಾಡಿ ಗ್ರಾಹಕರಿಂದ ಹಣ ಸಂಗ್ರಹಿಸಿದ ಬಳಿಕ ಬ್ಯಾಂಕ್‌ ಮೂಲಕವೇ ಆರೋಪಿಗಳ ಖಾತೆಗೆ ಹಣ ಜಮೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಶಿಪ್‌ಮೆಂಟ್‌ ನೀಡಿದ ಸುಳಿವು

ಪ್ರಕರಣ ದಾಖಲಾದ ಬೆನ್ನಲ್ಲೇ ತನಿಖೆಗೆ ಇಳಿದ ಪೊಲೀಸರು, ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್‌ಮೆಂಟ್‌ನಲ್ಲಿನ ಏರ್‌ವೇ ಬಿಲ್‌ ನಂಬರ್‌, ಬ್ಲೂಡಾರ್ಚ್‌ ಕೊರಿಯರ್‌ ಸಬ್‌ಶಿಪರ್‌ ಆದ ನಿಂಬೂಸ್‌ ಪೋಸ್ಟ್‌ ಅವರ ಮಾಹಿತಿ, ಕೆವೈಸಿ, ಬ್ಯಾಂಕ್‌ ಖಾತೆ ಮಾಹಿತಿ ಆಧರಿಸಿ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

click me!