
ನವದೆಹಲಿ (ನ. 15): ಆನ್‌ಲೈನ್ ಓಲಾ ಎಲೆಕ್ಟ್ರಿಕ್ ಸ್ಕೂಟಿ ಹಗರಣದಲ್ಲಿ ತೊಡಗಿದ್ದ ಖತರ್ನಾಕ್ ಗ್ಯಾಂಗನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟಿ ಮಾರಾಟದ ಹೆಸರಿನಲ್ಲಿ 1,000ಕ್ಕೂ ಅಧಿಕ ಜನರಿಗೆ ಈ ಗ್ಯಾಂಗ್ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ. ಬೆಂಗಳೂರು, ಹರಿಯಾಣದ ಗುರುಗ್ರಾಮ್ ಮತ್ತು ಬಿಹಾರದ ಪಾಟ್ನಾ ಸೇರಿದಂತೆ ದೇಶದ ವಿವಿಧ ಸ್ಥಳಗಳಿಂದ 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓಲಾ ಸ್ಕೂಟಿ ಬಗ್ಗೆ ವೆಬ್‌ಸೈಟಿನಲ್ಲಿ ಸರ್ಚ್ ಮಾಡುವ ಮತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸುವ ಜನರೇ ಈ ಗ್ಯಾಂಗಿನ ಟಾರ್ಗೇಟ್ ಆಗಿದ್ದರು. ಅಕ್ಟೋಬರ್ 7 ರಂದು ಸೈಬರ್ ಠಾಣೆಗೆ ಬಂದ ದೂರಿನ ಆಧಾರದ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಇಬ್ಬರು ವ್ಯಕ್ತಿಗಳು ಓಲಾ ಸ್ಕೂಟಿಯ ನಕಲಿ ವೆಬ್‌ಸೈಟ್ ವಿನ್ಯಾಸ ಮಾಡಿದ್ದು, ಗ್ರಾಹಕರು ವೆಬ್‌ಸೈಟಿನಲ್ಲಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಿದ ತಕ್ಷಣ, ಇಬ್ಬರೂ ಈ ಮೊಬೈಲ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು ಇತರ ರಾಜ್ಯಗಳಲ್ಲಿರುವ ತಮ್ಮ ಗ್ಯಾಂಗ್ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಬಿಹಾರ ಮತ್ತು ತೆಲಂಗಾಣದ ಗ್ಯಾಂಗ್ ಸದಸ್ಯರು ನಂತರ ಗ್ರಾಹಕರಿಗೆ ಕರೆ ಮಾಡಿ ಓಲಾ ಸ್ಕೂಟಿ ಬುಕ್ ಮಾಡುವ ಹೆಸರಿನಲ್ಲಿ 499 ರೂ.ಗಳನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡುವಂತೆ ಹೇಳುತ್ತಿದ್ದರು. ಸ್ಕೂಟಿಗೆ ವಿಮೆ ಮತ್ತು ಸಾರಿಗೆ ಶುಲ್ಕದ ಹೆಸರಿನಲ್ಲಿ ಪ್ರತಿ ಗ್ರಾಹಕರಿಂದ 60,000 ರಿಂದ 70,000 ರೂಪಾಯಿಗಳನ್ನು ವರ್ಗಾಯಿಸುವಂತೆ ಹೇಳುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿಗರೇ.. ಈ ತಿಂಗಳ ಕರೆಂಟ್ ಬಿಲ್ ಆನ್‌ಲೈನ್ ಪೇಮೆಂಟ್ ಮಾಡ್ಬೇಡಿ..!
ಆನ್‌ಲೈನ್ ವಂಚನೆ ಹೇಗೆ?: ಸೆಪ್ಟೆಂಬರ್ 26 ರಂದು ಗ್ರಾಹಕರೊಬ್ಬರು ಓಲಾ ಆ್ಯಪ್ ಮೂಲಕ ಓಲಾ ಎಲೆಕ್ಟ್ರಿಕ್ ಸ್ಕೂಟಿಯನ್ನು ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ತಾವು ಬಯಸಿದ ಪೇಮೆಂಟ್ ಆಪ್ಶನ್ ಸಿಗದ ಕಾರಣ ಬುಕ್ಕಿಂಗ್ ಪೂರ್ತಿಯಾಗಿಲ್ಲ. ಅದೇ ದಿನ ಅವರಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟಿ ಹೆಸರಲ್ಲಿ ಕರೆ ಬಂದಿದ್ದು ವಂಚಕರು ಸ್ಕೂಟಿ ಖರೀದಿಸಲು ಆಫ್‌ಲೈನ್ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಮರುದಿನ ವಂಚಕರು ಮತ್ತೆ ಕರೆ ಮಾಡಿದ್ದು ಬುಕಿಂಗ್ ಪ್ರಕ್ರಿಯೆಯ ಬಗ್ಗೆ ತಿಳಿಸಿದ್ದಾರೆ. ಅದರಂತೆ ದೂರುದಾರರು PayU ಅಪ್ಲಿಕೇಶನ್ ಮೂಲಕ 499 ರೂ. ಪಾವತಿಸಿದ್ದಾರೆ. ಬಳಿಕ ವಂಚಕರು ದೂರುದಾರರಿಗೆ ಬುಕಿಂಗ್ ದೃಢೀಕರಣ ಸ್ಲಿಪನ್ನು ಕಳುಹಿಸಿದ್ದಾರೆ.
ಮರುದಿನ ಎಲ್ಲ ಪೇಮೆಂಟ್ ಆಯ್ಕೆಗಳ ಬಗ್ಗೆ ಇಮೇಲ್ ಸ್ವೀಕರಿಸಿದ್ದು, ದೂರುದಾರರು ಓಲಾ ಮನಿ ಮೂಲಕ ಪೇ ಮಾಡಲು ಮುಂದಾಗಿದ್ದಾರೆ. ಒಪ್ಪಂದದ ಪ್ರಕಾರ ದೂರುದಾರರು 30,000 ರೂಗಳನ್ನು ಡೌನ್ ಪಾವತಿಯಾಗಿ ಮತ್ತು ಉಳಿದ ಮೊತ್ತವನ್ನು ಅಂದಾಜು ಮಾಸಿಕ ಕಂತುಗಳಲ್ಲಿ (EMI) ಪಾವತಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ವಂಚಕರು ಪೇಯು ಅಪ್ಲಿಕೇಶನ್‌ನಲ್ಲಿ ರೂ 30,000 ಡೌನ್ ಪೇಮೆಂಟ್ ಲಿಂಕ್ ಕ್ರಿಯೇಟ್ ಮಾಡಿ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಕಾಲು ನೋವಿರುವ ವೃದ್ಧರೇ ಇವರ ಟಾರ್ಗೆಟ್: ನಕಲಿ ಆಯುರ್ವೇದ ಶಾಪ್‌ನಲ್ಲಿ ವಂಚನೆ
ಬಳಿಕ ಮಂಜೂರಾದ ಮೊತ್ತವನ್ನು 72,000 ರೂ. ಎಂದು ತೋರಿಸಿರುವ ಇಮೇಲ್ ಬಂದಿದ್ದು, ಉಳಿದ ಹಣವನ್ನು ಅವರು ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇಮೇಲ್ ಪಡೆದ ನಂತರ ದೂರುದಾರರು ಮತ್ತೆ ಆ ವಂಚಕರೊಂದಿಗೆ ಮಾತನಾಡಿದ್ದು ಉಳಿದ ಮೊತ್ತವನ್ನು ಪಾವತಿಸುವಂತೆ ಅವರು ಸೂಚಿಸಿದ್ದಾರೆ. ದೂರುದಾರರು ಹಣ ಪಾವತಿಸಲು ಒಪ್ಪಿಕೊಂಡಿದ್ದು ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೇಳಿದ್ದಾರೆ.
ನಂತರ ವಂಚಕ ದೂರುದಾರರಿಗೆ ಕರೆ ಮಾಡಿ, ಆ ದಿನವೇ ಸ್ಕೂಟಿಯನ್ನು ಕಳುಹಿಸುವುದಾಗಿ ಹೇಳಿದ್ದು ಆದರೆ ಉಳಿದ ಮೊತ್ತವನ್ನು ಮತ್ತು ಡೆಲಿವರಿ ಶುಲ್ಕವಾಗಿ 13,000 ರೂ.ಗಳನ್ನು ಪಾವತಿಸಲು ಹೇಳಿದ್ದಾರೆ. ಸೈಬರ್ ಕ್ರೈಂ ಸೆಲ್ ದೂರು ಪಡೆದ ನಂತರ ಪ್ರಕರಣದ ತನಿಖೆ ಆರಂಭಿಸಿ ಈ ಗ್ಯಾಂಗನ್ನು ಈಗ ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ