
ಕವರ್ಧಾ, ಛತ್ತೀಸ್‌ಗಢ (ಏಪ್ರಿಲ್ 4, 2023): ಮದುವೆಗೆ ನಾನಾ ರೀತಿಯ ಉಡುಗೊರೆಗಳು ಬರೋದು ಸಾಮಾನ್ಯ. ಇಂತಹ ಮದುವೆ ಉಡುಗೊರೆಗಳಿಂದಲೇ ಸಾವಾದರೆ.. ಸಂತಸದ ಸಮಾರಂಭದಲ್ಲಿ ಸೂತಕದ ವಾತಾವರಣ ಏರ್ಪಡುತ್ತದೆ. ಛತ್ತೀಸ್‌ಗಢದಲ್ಲಿ ಈ ಘಟನೆ ನಡೆದಿದೆ. ಛತ್ತೀಸ್‌ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆ ಉಡುಗೊರೆಯಾಗಿ ಪಡೆದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಮನೆಯಲ್ಲೇ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮತ್ತು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರಲ್ಲಿ ನವವಿವಾಹಿತರು ಮತ್ತು ಅವರ ಅಣ್ಣ ಸೇರಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. ಸೋಮವಾರದಂದು ಘಟನೆ ವರದಿಯಾಗಿದ್ದು, ಸ್ಫೋಟಕ್ಕೆ ನಿಖರ ಕಾರಣ ಈವರೆಗೆ ತಿಳಿದುಬಂದಿಲ್ಲ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಿಂದ ಸುಮಾರು 200 ಕಿಮೀ ದೂರದಲ್ಲಿರುವ ಛತ್ತೀಸ್‌ಗಢ-ಮಧ್ಯಪ್ರದೇಶ ಗಡಿಯಲ್ಲಿರುವ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ: ಯೂಟ್ಯೂಬ್‌ಗೆ ವಿಡಿಯೋ ಕಾಲ್ ಅಪ್ಲೋಡ್ ಮಾಡುವ ಬೆದರಿಕೆ: 80 ವರ್ಷದ ಮುದುಕನಿಗೆ 8 ಲಕ್ಷ ರೂ. ವಂಚನೆ
ಪ್ರಾಥಮಿಕ ಮಾಹಿತಿಯ ಪ್ರಕಾರ, 22 ವರ್ಷದ ಹೇಮೇಂದ್ರ ಮೆರಾವಿ ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ, ಅವರು ಮತ್ತು ಇತರ ಕುಟುಂಬ ಸದಸ್ಯರು ತಮ್ಮ ಮನೆಯ ಕೋಣೆಯೊಳಗೆ ಮದುವೆಯ ಉಡುಗೊರೆಗಳನ್ನು ಪರಿಶೀಲಿಸುತ್ತಿದ್ದರು ಎಂದು ಕಬೀರ್‌ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಮಾಹಿತಿ ನೀಡಿದ್ದಾರೆ.
ಇದೇ ರೀತಿ, ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಅನ್ನು ಸ್ವಿಚ್ ಬೋರ್ಡ್‌ಗೆ ಕನೆಕ್ಟ್ ಮಾಡಿ ಆನ್ ಮಾಡಿದ ಬಳಿಕ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ, ನವ ವಿವಾಹಿತ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ, ಅವರ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಕೌರಾದದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮದುವೆಯಾಗಿದ್ರೂ ಅಪ್ರಾಪ್ತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಟೀಚರ್: ಕಾಮುಕ ಶಿಕ್ಷಕನ ಬಂಧನ
ಇನ್ನು, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿಯೂ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಹೇಳಿದ್ದೇನು..?
ಈ ಘಟನೆಯ ಕುರಿತು ಮಾತನಾಡಿದ ಕುಟುಂಬ ಸದಸ್ಯರು, ನಮಗೆ ಗನ್ ಪೌಡರ್ ವಾಸನೆ ಬಂತು ಎಂದು ಹೇಳಿದ್ದು, ಈ ಹಿನ್ನೆಲೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರುವುದನ್ನು ಸೂಚಿಸುತ್ತದೆ. ಅಲ್ಲದೆ, ಪೊಲೀಸರು ತನಿಖೆಯ ಸಮಯದಲ್ಲಿ ಸ್ಪೀಕರ್ ಬಾಕ್ಸ್‌ಗಳಲ್ಲಿ ಕೆಲವು ಸ್ಫೋಟಕಗಳನ್ನು ಕಂಡುಕೊಂಡರು. ಆದರೆ ಅವರು ವಿಧಿವಿಜ್ಞಾನದ ವರದಿ ಪಡೆಯುವವರೆಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ಸಿದ್ಧರಿಲ್ಲ ಎಂದಿದ್ದಾರೆ.
ಇದನ್ನೂ ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!
ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಮೃತಪಟ್ಟಿದ್ದು, ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಹೇಳಿದ್ದಾರೆ. ಕಬೀರಧಾಮ ಪೊಲೀಸರು ಮಾಹಿತಿ ನೀಡಿದ ತಕ್ಷಣ, ಫೋರೆನ್ಸಿಕ್ ತಜ್ಞರೊಂದಿಗೆ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದ್ದು, ಸ್ಫೋಟಕ್ಕೆ ನಿಖರವಾದ ಕಾರಣವನ್ನು ಇನ್ನೂ ಕಂಡುಕೊಂಡಿಲ್ಲ.
ಇನ್ನು, ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗುವ ಯಾವುದೇ ದಹನಕಾರಿ ವಸ್ತು ಪತ್ತೆಯಾಗಿಲ್ಲ ಎಂದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ. ಮ್ಯೂಸಿಕ್ ಸಿಸ್ಟಂ ಮಾತ್ರ ಕೋಣೆಯಲ್ಲಿ ಸ್ಫೋಟಗೊಂಡಿದ್ದು, ಈ ಹಿನ್ನೆಲೆ ಸ್ಫೋಟದ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: Bengaluru: ಕಾರಿನ ಜಿಪಿಎಸ್‌ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ