* ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ
* ಓಜಿ ಕುಪ್ಪಂ ಗ್ಯಾಂಗ್ ಕೈಚಳಕ?
* ಎಚ್‌ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಸಾದಿಕ್ ಪಾಪಾ ಹಣ ಕಳೆದುಕೊಂಡವರು
ಬೆಂಗಳೂರು(ಮಾ.23): ವ್ಯಕ್ತಿಯೊಬ್ಬರು ಟೀ ಕುಡಿಯಲು ಹೋಗಿದ್ದಾಗ ದುಷ್ಕರ್ಮಿಗಳು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ 2.75 ಲಕ್ಷ ರು. ಎಗರಿಸಿ(Robbery) ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್‌ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಸಾದಿಕ್ ಪಾಪಾ ಹಣ(Money) ಕಳೆದುಕೊಂಡವರು. ಮಾ.7ರಂದು ಮಧ್ಯಾಹ್ನ 12.45ರ ಸುಮಾರಿಗೆ ಫ್ರೇಜರ್ ಟೌನ್‌ನ ನಂದಿನಿ ಹೋಟೆಲ್ ಬಳಿಯ ಕ್ಯಾಸ್ಟಲ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯಿಂದ 2.75 ಲಕ್ಷ ರು. ನಗದು ಹಣ ಪಡೆದುಕೊಂಡು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇರಿಸಿದ್ದರು. ಬಳಿಕ ಫ್ರೇಜರ್‌ಟೌನ್‌ನ ಎಂ.ಎಂ.ರಸ್ತೆಯ ಸವೆರಾ ಹೋಟೆಲ್ ಬಳಿ ಬಂದು ದ್ವಿಚಕ್ರ ವಾಹನ ನಿಲ್ಲಿಸಿ ಟೀ ಕುಡಿಯಲು ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ದ್ವಿಚಕ್ರ ವಾಹನದ ಡಿಕ್ಕಿ ತೆರೆದು ಹಣ ದೋಚಿ ಪರಾರಿಯಾಗಿದ್ದಾರೆ.
Bengaluru Crime: ವಿಮಾನದಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ: ನಾಲ್ವರ ಬಂಧನ
ಟೀ ಕುಡಿದ ಬಳಿಕ ಮೊಹಮ್ಮದ್ ಡಿಕ್ಕಿಯನ್ನು ಗಮನಿಸದೆ, ಕಲ್ಯಾಣನಗರದ 2ನೇ ಬ್ಲಾಕ್‌ನ ಮಟನ್ ಅಂಗಡಿ ಬಳಿ ಬಂದು ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದಾರೆ. ಕೆಲಸ ಮುಗಿಸಿಕೊಂಡು ಮಧ್ಯಾಹ್ನ 2.45ರ ಸುಮಾರಿಗೆ ದ್ವಿಚಕ್ರ ವಾಹನದ ಬಳಿ ಬಂದು ಡಿಕ್ಕಿ ನೋಡಿದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಹಮ್ಮದ್ ಟೀ ಕುಡಿಯಲು ಹೋಗಿದ್ದಾಗ ದುಷ್ಕರ್ಮಿಗಳು ದ್ವಿಚಕ್ರ ವಾಹನದ ಡಿಕ್ಕಿ ತೆರೆದು ಹಣ ಎತ್ತಿಕೊಂಡು ಪರಾರಿಯಾಗಿರುವುದು ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದೆ.
ಓಜಿ ಕುಪ್ಪಂ ಗ್ಯಾಂಗ್ ಕೈಚಳಕ?
ಬ್ಯಾಂಕ್, ಫೈನಾನ್ಸ್, ಹಣಕಾಸು ಸಂಸ್ಥೆಗಳ ಬಳಿ ಹೊಂಚು ಹಾಕಿ ಹಣ ಇರುವ ವ್ಯಕ್ತಿಗಳನ್ನು ಹಿಂಬಾಲಿಸಿ ಮಾರ್ಗ ಮಧ್ಯೆ ಗಮನ ಬೇರೆಡೆ ಸೆಳೆದು ಹಣ ಎಗರಿಸುವಲ್ಲಿ ಅಂಧ್ರಪ್ರದೇಶದ ಒಜಿ ಕುಪ್ಪುಂ ಗ್ಯಾಂಗ್ ಕುಖ್ಯಾತಿ ಪಡೆದಿದೆ. ಈ ಪ್ರಕರಣವನ್ನು ನೋಡಿದಾಗ ದುಷ್ಕರ್ಮಿಗಳು ಸಾದಿಕ್ ಅವರನ್ನು ಹಿಂಬಾಲಿಸಿಕೊಂಡು ಬಂದು ಈ ದುಷ್ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಹೀಗಾಗಿ ಇದರಲ್ಲಿ ಒಜಿ ಕುಪ್ಪಂ ಗ್ಯಾಂಗ್(OG Kuppam Gang) ಕೈವಾಡವಿರುವ ಶಂಕೆಯಿದೆ ಎಂದಿದ್ದಾರೆ ಅಧಿಕಾರಿಗಳು.
ಶೋಕಿಗಾಗಿ ಆಟೋ ಕಳವು ಮಾಡ್ತಿದ್ದ ಬಾಲಕ ವಶಕ್ಕೆ
ಬೆಂಗಳೂರು: ಶೋಕಿಗಾಗಿ ಆಟೋ ರಿಕ್ಷಾಗಳನ್ನು ಕಳವು(Theft) ಮಾಡುತ್ತಿದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದಿರುವ ಕೆಂಗೇರಿ ಠಾಣೆ ಪೊಲೀಸರು(Police), ಆತ ನೀಡಿದ ಮಾಹಿತಿ ಮೇರೆಗೆ ಆರು ಆಟೋ ರಿಕ್ಷಾಗಳನ್ನು ಜಪ್ತಿ ಮಾಡಿದ್ದಾರೆ.
Bengaluru Crime: ಪೊಲೀಸರಿಗೇ ಸವಾಲು ಹಾಕಿದ್ದ ಕಳ್ಳ ಜೈಲು ಅರೆಸ್ಟ್
ಮಾ.11ರಂದು ರಾತ್ರಿ ಕೆಂಗೇರಿಯ ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಆಟೋ ರಿಕ್ಷಾ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಆಟೋ ಕಳುವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಕೆಂಗೇರಿ, ಕಾಮಾಕ್ಷಿಪಾಳ್ಯ, ಕಾಟನ್‌ಪೇಟೆ, ಚಂದ್ರಾಲೇಔಟ್, ಕುಂಬಳಗೋಡು ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾಗಿದ್ದ 15 ಲಕ್ಷ ರು. ಮೌಲ್ಯದ ಆರು ಆಟೋ ರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕ ಆಟೋ ಓಡಿಸುವ ಶೋಕಿಗೆ ಬಿದ್ದಿದ್ದ. ಕದ್ದ ಆಟೋ ರಿಕ್ಷಾದಲ್ಲಿ ನಗರವನ್ನು ಸುತ್ತಾಡಿ ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದ. ತಾನು ಆಟೋ ನಿಲ್ಲಿಸಿದ ಪ್ರದೇಶದಲ್ಲೇ ಸುತ್ತಾಡಿ ಬೇರೆ ಆಟೋ ಗುರುತಿಸಿ ಬಳಿಕ ರಾತ್ರಿ ಆ ಆಟೋ ಕದ್ದು ಸುತ್ತಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.