* 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಧೀರಜ್
* ಬೆಂಗಳೂರಿನ ಆರ್‌ಆರ್ ನಗರದಲ್ಲಿ ನಡೆದ ಘಟನೆ
* ನಕಲು ಮಾಡಿ ಸಿಕ್ಕಿಬಿದ್ದ?
ಬೆಂಗಳೂರು(ಮಾ.25): ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ(Student) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರದ ಧೀರಜ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ತಂದೆ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮನೆ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಧೀರಜ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬುಧವಾರ ಸಂಜೆ ಶಾಲೆಯಿಂದ ಮನೆಗೆ ಬಂದ ಬಾಲಕ, ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧೀರಜ್ ರೂಮ್ ಒಳಗೆ ಹೋಗಿ ತುಂಬಾ ಹೊತ್ತು ಕಳೆದರೂ ಹೊರಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ತಾಯಿ ರೂಮ್ ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿನಿಂದ ಯಾವುದೇ ಸದ್ದು ಬಾರದಿದ್ದರಿಂದ ಅನುಮಾನಗೊಂಡು ಹೊರಗೆ ಬಿದ್ದಿದ್ದ ಕೀನಲ್ಲಿ ರೂಮ್ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Woman Suicide: ರಾಮನಗರ, ಕಂದಮ್ಮಗಳ ಮುಖವೂ ಕಾಣಲಿಲ್ಲವೇ.. ಗಂಡ ಪ್ರಸಾದ ತರಲಿಲ್ಲವೆಂದು ಸುಸೈಡ್!
ನಕಲು ಮಾಡಿ ಸಿಕ್ಕಿಬಿದ್ದ?
ಧೀರಜ್ ಬುಧವಾರ ಬೆಳಗ್ಗೆ ಶಾಲೆಯಲ್ಲಿ ಪರೀಕ್ಷೆ(Examination) ಬರೆಯುವಾಗ ನಕಲು ಮಾಡಿ ಶಿಕ್ಷಕರಿಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಸುಮಾರು ಮೂರು ತಾಸು ಪರೀಕ್ಷೆ ಕೊಠಡಿಯಿಂದ ಹೊರಗೆ ನಿಲ್ಲಿಸಿದ್ದರು. ಬಳಿಕ ತಂದೆಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿಲ್ಲ. ಬಳಿಕ ತಾಯಿಗೆ ಕರೆ ಮಾಡಿ ಶಾಲೆಗೆ ಕರೆಸಿಕೊಂಡು ನಕಲು ವಿಚಾರ ತಿಳಿಸಿದ್ದರು. ಅಲ್ಲದೆ, ಧೀರಜ್‌ನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದರು. ಇದರಿಂದ ಮನನೊಂದು ಧೀರಜ್ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸರು(Police) ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಷ ಸೇವಿಸಿದ್ದ ಮಾನಸಿಕ ಅಸ್ವಸ್ಥೆ ಸಾವು
ಬ್ಯಾಡಗಿ: ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿ(Hubballi) ಕಿಮ್ಸ್‌ನಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬಡಮಲ್ಲಿ ಗ್ರಾಮದಲ್ಲಿ ನಡೆದಿದೆ.
ಗೌರಮ್ಮ ಮಲ್ಲಪ್ಪ ಅಂಗಡಿ (68) ಎಂಬುವವರೇ ಮೃತ ಮಹಿಳೆ. ಕಳೆದ 2 ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು. ಇದರಿಂದ ಜಿಗುಪ್ಸೆಗೊಂಡ ಆಕೆ ಈಚೆಗೆ ವಿಷ ಸೇವಿಸಿದ್ದಾಳೆ, ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ಮತ್ತು ಅಕ್ಕಪಕ್ಕದವರು ಚಿಕಿತ್ಸೆಗೆಂದು ಗೌರಮ್ಮಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಕಳಹಿಸಿಕೊಡಲಾಗಿತ್ತು. ಆದರೆ, ಅಲ್ಲಿಯೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Suicide Cases in Karnataka: ಕತ್ತು ಸೀಳಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣು
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಪಡುಬಿದ್ರಿ: ಇಲ್ಲಿನ ಹೆಜಮಾಡಿ ಗ್ರಾಮದ ಯಶವಂತ ಶೆಟ್ಟಿ(54) ಎಂಬವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದು, ಯಾವುದೇ ಕೆಲಸವಿಲ್ಲದೇ ಮನೆಯಲ್ಲಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಗೊಳಗಾಗಿ ಮನೆಯಲ್ಲಿ ಯಾರೊಂದಿಗೂ ಬೆರೆಯತ್ತಿರಲಿಲ್ಲ. ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಹೊಳೆನರಸೀಪುರ: ತಾಲೂಕಿನ ಗೆಜ್ಜಿಗನಹಳ್ಳಿ ಗ್ರಾಮದ ವಿರುಪಾಕ್ಷ(45) ಎಂಬ ರೈತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗೆಜ್ಜಿಗನಹಳ್ಳಿ ಗ್ರಾಮದ ವಿರುಪಾಕ್ಷ ಅವರು ಹೊಗೆಸೊಪ್ಪು ಬೆಳೆ ಬೆಳೆಯಲು ಬ್ಯಾಂಕಿನಲ್ಲಿ 4.5 ಲಕ್ಷ ರು.ಸಾಲ ಮಾಡಿಕೊಂಡಿದ್ದರು. ಮತ್ತು ಕೈಸಾಲ ಕೂಡ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಬ್ಯಾಂಕಿನಿಂದ ಸಾಲಕ್ಕೆ ನೋಟಿಸ್ ಬಂದಿತ್ತು. ಮತ್ತು ಹೊಗೆಸೊಪ್ಪು ಬೆಳೆಯಲ್ಲಿ ನಷ್ಟವುಂಟಾಗಿದ್ದರಿಂದ, ಮನನೊಂದು ಮಂಗಳವಾರ ಸಂಜೆ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.