
ಮಂಗಳೂರು (ಜು. 09): ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ ಐ ರಾಜೇಂದ್ರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು, ಮಂಗಳೂರಿನ ನಗರದ ವೆಲೆನ್ಸಿಯಾ ಸೂಟರ್ ಪೇಟೆ 3 ನೇ ಕ್ರಾಸ್ ನ ವಸತಿಗೃಹವೊಂದಕ್ಕೆ ದಾಳಿ ನಡೆಸಿ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಶಾನೂಫ್ ಅಬ್ದುಲ್ ಗಫೂರ್ (21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್ (22), ಶಾರೂನ್ ಆನಂದ(19), ಅನಂತು ಕೆ ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್ ಎಂ ಟಿ ಪಿ(22), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22), ರಿಜಿನ್ ರಿಯಾಝ್(22) ಎಂಬವರನ್ನು ಬಂಧಿಸಲಾಗಿದೆ.
ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಗಾಂಜಾ ಪೆಡ್ಲರ್ಸ್: ಆರೋಪಿಗಳಿಂದ ಒಟ್ಟು 900 ಗ್ರಾಂ ತೂಕದ ರೂ. 20,000 ಮೌಲ್ಯದ ಗಾಂಜಾ, ಗಾಂಜಾವನ್ನು ಸೇದುವ ಸ್ಮೋಕಿಂಗ್ ಪೈಪ್ಸ್ (Smoking Pipes), ರೋಲಿಂಗ್ ಪೇಪರ್ ಹಾಗೂ ನಗದು ರೂ. 4,500 ಹಾಗೂ 11 ಮೊಬೈಲ್ ಫೋನ್ಸ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,85,000 ಎಂದು ಅಂದಾಜಿಸಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಯುವಕರು/ವಿದ್ಯಾರ್ಥಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 3 ತಿಂಗಳಲ್ಲಿ ಭಾರತೀಯ ಮೂಲದ 2ನೇ ಡ್ರಗ್ ಪೆಡ್ಲರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಸಿಂಗಾಪುರ!
ಆರೋಪಿಗಳ ಪೈಕಿ 8 ಮಂದಿ ವಿದ್ಯಾರ್ಥಿಗಳು ಅಂತಿಮ ವರ್ಷದ ಬಿಬಿಎ, ಬಿಸಿಎ ಪದವಿ, ಫಾರೆನ್ಸಿಕ್ ಸಯನ್ಸ್ ಪದವಿ ವ್ಯಾಸಂಗವನ್ನು, ಮತ್ತು ಓರ್ವ ಪ್ರಥಮ ವರ್ಷದ ಬಿಬಿಎ ಪದವಿ ವ್ಯಾಸಂಗವನ್ನು ಮಂಗಳೂರಿನ ಬಲ್ಮಠದ ಖಾಸಗಿ ಕಾಲೇಜಿನಲ್ಲಿ ಮಾಡುತ್ತಿದ್ದಾರೆ.
ಮಂಗಳೂರಿನ ಫಳ್ನೀರ್‌ನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 3 ಮಂದಿ ವಿದ್ಯಾರ್ಥಿಗಳ ಪೈಕಿ ಒಬ್ಬಾತ ವಿದ್ಯಾರ್ಥಿ ನರ್ಸಿಂಗ್ ಪದವಿ, ಓರ್ವ ರೇಡಿಯೋಲಾಜಿ , ಹಾಗೂ ಇನ್ನೋರ್ವ ಅಲೈಡ್ ಸೈನ್ಸ್ (Allied Science) ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ