ಮಂಡ್ಯ; ಕಸಾಯಿ ಖಾನೆ ಪಾಲಾಗುತ್ತಿದ್ದ 11 ಒಂಟೆ ರಕ್ಷಿಸಿ ರಾಜಸ್ಥಾನಕ್ಕೆ ರವಾನೆ

By Suvarna NewsFirst Published Jul 1, 2021, 10:26 PM IST
Highlights

* ಕಸಾಯಿ ಖಾನೆ ಪಾಲಾಗಿದ್ದ 11 ಒಂಟೆ ರಕ್ಷಣೆ
* ಮಂಡ್ಯದಿಂದ ರಾಜಸ್ಥಾನಕ್ಕೆ ಕಳುಹಿಸಿಕೊಡಲಾಗಿದೆ
* ವಿಶೇಷ ವ್ಯವಸ್ಥೆಯುಳ್ಳ ಎರಡು ಲಾರಿಗಳ ಮೂಲಕ ರವಾನೆ
* ರಾಜಸ್ಥಾನದ ಸರೋಹಿ ಗೋ ರಕ್ಷಣಾ ಶಾಲೆಗೆ ರವಾನೆ

ಮಂಡ್ಯ (ಜು.01):  ಕಸಾಯಿ ಖಾನೆ ಪಾಲಾಗಿದ್ದ 11 ಒಂಟೆಗಳನ್ನು ಪೊಲೀಸರು ಸುರಕ್ಷಿತವಾಗಿ ರಾಜಸ್ಥಾನಕ್ಕೆ ಬುಧವಾರ ವಾಪಸ್ ಕಳುಹಿಸಿದರು. 

ಕಸಾಯಿಖಾನೆಗೆ ಸಾಗಿಸುತ್ತಿದ್ದ 11 ಒಂಟೆಗಳನ್ನು ಕೆಲವು ದಿನಗಳ ಹಿಂದೆ ಕೋಲಾರದ ಚಿಂತಾಮಣಿಯಲ್ಲಿ ಪ್ರಾಣಿದಯಾ ಸಂಘದವರು  ವಶಕ್ಕೆ ಪಡೆದು ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿಯ ಗೋರಕ್ಷಾ ಪೀಠದಲ್ಲಿ ಆಶ್ರಯ ನೀಡಿದ್ದರು. 

ಭೌಗೋಳಿಕ ಹಿನ್ನೆಲೆಯಲ್ಲಿ ಒಂಟೆಗಳು ರಾಜಸ್ಥಾನ ಮತ್ತು ಗುಜರಾತ್ ಕೆಲವೆಡೆ ಮಾತ್ರ ವಾಸಿಸಲು ಯೋಗ್ಯವಾಗಿದೆ. ಕರ್ನಾಟಕದಲ್ಲಿ ಅವುಗಳ ಆರೋಗ್ಯದಲ್ಲಿ ಏರುಪೇರಾಗುವ  ಸಾಧ್ಯತೆಗಳಿರುತ್ತವೆ. ಆದ್ದರಿಂದ ನ್ಯಾಯಾಲಯ ರಾಜಸ್ಥಾನಕ್ಕೆ ರವಾನಿಸುವಂತೆ ಆದೇಶ ನೀಡಿತ್ತು. 

ಕಾಲು ಕಳೆದುಕೊಂಡ ಶ್ವಾನಕ್ಕೆ ಹೊಸ ಜೀವನ ಕೊಟ್ಟ ಉಡುಪಿ ಕುಟುಂಬ

ಈ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಯುಳ್ಳ ಎರಡು ಲಾರಿಗಳನ್ನು ರಾಜಸ್ಥಾನದಿಂದಲೇ ತರಿಸಿ ಅದರಲ್ಲೇ 11 ಒಂಟೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ರವಾನಿಸಲಾಯಿತು. 

ಗೋರಕ್ಷಾ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ ಒಂಟೆಗಳನ್ನು ಧರ್ಮ ಮತ್ತು ಹಬ್ಬದ ಹೆಸರಿನಲ್ಲಿ ರಾಜಸ್ತಾನ, ಗುಜರಾತ್‌ನಿಂದ ಒಂಟೆಗಳನ್ನು ಕದ್ದು ತಂದು ಕಸಾಯಿ ಖಾನೆಗೆ ಸಾಗಿಸಿ ಕೊಂದು ತಿನ್ನಲಾಗುತ್ತಿದೆ. ಒಂಟೆಗಳನ್ನು ಕೊಲ್ಲುವುದು ಪ್ರಾಣಿ ಬಲಿ ನಿಷೇಧ ಕಾಯಿದೆಯನ್ವಯ ಅಪರಾಧವಾಗಿರುತ್ತದೆ. 

ಈ ರೀತಿ ಕದ್ದು ಸಾಗಿಸುತ್ತಿದ್ದ ಮಾಹಿತಿ ಅರಿತ ನಮ್ಮ ಪ್ರಾಣಿ ದಯಾ ಸಂಘದವರು ಸಾವಿರಾರು ಒಂಟೆಗಳನ್ನು ರಕ್ಷಿಸಿ ಅವುಗಳನ್ನು ಮತ್ತೆ ರಾಜಸ್ಥಾನಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಚಿಂತಾಮಣಿಯಲ್ಲಿ ಪೊಲೀಸರ ಸಹಕಾರದಿಂದ 11 ಒಂಟೆಗಳನ್ನು ರಕ್ಷಣೆ ಮಾಡಿ ಅವುಗಳ ರಕ್ಷಣಾ ಹೊಣೆಗಾರಿಕೆಯನ್ನು ಚೈತ್ರ ಗೋಶಾಲೆಗೆ ನೀಡಲಾಗಿತ್ತು. 

ಬಳಿಕ ನ್ಯಾಯಾಲಯದ  ಆದೇಶದ ಮೇರೆಗೆ  ಇಂದು ಎರಡು ಲಾರಿಗಳ ಮೂಲಕ ರಾಜಸ್ಥಾನದ ಸರೋಹಿ ಗೋ ರಕ್ಷಣಾ ಶಾಲೆಗೆ ಕಳುಹಿಸಲಾಗುತ್ತದೆ.ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಒಂಟೆಗಳನ್ನು ಕೊಲ್ಲಲಾಗುತ್ತಿದೆ ಎಂದರು.

ಇಂತಹ ಮಾಹಿತಿ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದಲ್ಲಿ ಒಂಟೆಗಳನ್ನು ಕಟುಕರಿಂದ ರಕ್ಷಿಸಿ ಗೋಶಾಲೆಗಳಿಗೆ ಸಾಗಿಸುವ ವ್ಯವಸ್ಥೆ ಮಾಡುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.(ಸಾಂದರ್ಭಿಕ ಚಿತ್ರ) 

click me!