ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭಯದಲ್ಲಿ ಪರೀಕ್ಷೆ ಮುಂದೂಡಿಸಲು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದ ವಿದ್ಯಾರ್ಥಿ
ಬೆಂಗಳೂರು(ಜು.20): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ರಾಜರಾಜೇಶ್ವರಿನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಂದಿದ್ದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು 10ನೇ ತರಗತಿ ವಿದ್ಯಾರ್ಥಿ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ತಿಂಗಳ 21ರಂದು 10ನೇ ತರಗತಿ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು. ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸದ ವಿದ್ಯಾರ್ಥಿ, ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭಯದಲ್ಲಿ ಪರೀಕ್ಷೆ ಮುಂದೂಡಿಸಲು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದ. ವಿದ್ಯಾರ್ಥಿ ಅಪ್ರಾಪ್ತನಾಗಿರುವುದರಿಂದ ಕಾನೂನು ಪ್ರಕಾರ ಆತನ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ತಂದೆಯ ಲ್ಯಾಪ್ ಟಾಪ್ ತೆಗೆದುಕೊಂಡು ನಟ ಹುಚ್ಚ ವೆಂಕಟ್ ಹೆಸರಿನಲ್ಲಿ ಶಾಲೆಯ ಇ-ಮೇಲ್‌ಗೆ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿದ್ದ. ಸೋಮವಾರ ಬೆಳಗ್ಗೆ ಶಾಲೆಯ ಆಡಳಿತ ಮಂಡಳಿ ಇ-ಮೇಲ್ ಪರಿಶೀಲಿಸುವಾಗ ಬಾಂಬ್ ಬೆದರಿಕೆ ಸಂದೇಶ ನೋಡಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬಾಂಬ್ ನಿಷ್ಕಿ್ರಯ ದಳ, ಶ್ವಾನದಳದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸುಮಾರು ಒಂದೂವರೆ ಸಾವಿರ ಮಕ್ಕಳು ಹಾಗೂ ಶಿಕ್ಷಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.
ಡಿಕೆಶಿ ಒಡೆತನದ ಬೆಂಗಳೂರು ಶಾಲೆಗೆ ಬಾಂಬ್ ಬೆದರಿಕೆ!
ಬಳಿಕ ಶಾಲಾ ಕಟ್ಟಡ, ಪಾರ್ಕಿಂಗ್ ಸ್ಥಳ, ಆಟದ ಮೈದಾನ ಸೇರಿದಂತೆ ಶಾಲೆಯ ಸುತ್ತಮುತ್ತಲ ಪ್ರದೇಶವನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ್ದರು. ಈ ವೇಳೆ ಯಾವುದೇ ಸ್ಫೋಟಕ ಅಥವಾ ಶಂಕಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಎಂಬುದು ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಇ-ಮೇಲ್ ಮೂಲ ಪತ್ತೆಗೆ ತನಿಖೆ ಕೈಗೊಂಡಿದ್ದರು.