
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.03): ಚಿಕ್ಕಮಗಳೂರು ಅಂದ್ರೆ ದಟ್ಟ ಮಲೆನಾಡಿನ ಭೂ ಪ್ರದೇಶ ಹೊಂದಿದೆ ಎಂಬ ಹೆಗ್ಗಳಿಕೆ ಜಿಲ್ಲೆಯದ್ದಾಗಿದೆ. ಮಲೆನಾಡಿನ ಸುಂದರವಾದ ಸೊಬಗನ್ನು ಪರಿಸರ ಪ್ರಿಯರಿಗೆ ಉಣಬಡಿಸುತ್ತದೆಯೋ ಅದೇ ರೀತಿ ಭಯಾನಕತೆ ಸ್ವರೂಪವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಏಕೆಂದ್ರೆ ಇಲ್ಲಿನ ಆಳವಾದ ಪ್ರಪಾತ, ಜಲಪಾತಗಳು ,ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಕ್ರೇಜ್ ನಿಂದ ಯೂತ್ಸ್‌ಗಳ ಪ್ರಾಣಕ್ಕೆ ಸಂಚುಕಾರವನ್ನುಂಟು ಮಾಡುತ್ತಿದೆ. ಬುದ್ಧಿವಂತರು, ತಿಳುವಳಿಕೆಯುಳ್ಳವರು ಶೋಕಿಗೆ ಮಾಡುವ ಸ್ವಯಂಕೃತ ಅಪರಾಧಗಳಿಂದ ಎಳೆ ವಯಸ್ಸಲ್ಲೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸ್ತಿದ್ದಾರೆ.
ಸೆಲ್ಫಿ ಕ್ರೇಜ್ ಇರೋ ಪ್ರವಾಸಿಗರ ಪ್ರಾಣಕ್ಕೆ ಕುತ್ತು: ಹುಟ್ಟು ಅಂದ್ಮೆಲೆ ಸಾವು ಇರಲೇಬೇಕು. ಇದ್ದೇ ಇರುತ್ತೆ. ಜವರಾಯ ನಮ್ಮನ್ನ ಹುಡುಕ್ಕೊಂಡ್ ಬರಬೇಕೇ ವಿನಃ ನಾವೇ ಅವನನ್ನ ಹುಡುಕ್ಕೊಂಡ್ ಹೋಗ್ಬಾರ್ದು. ಆದ್ರೆ, ಕಾಫಿನಾಡಲ್ಲಿ ಆಗಿದ್ದು ಅದೇ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸೋಮಾವತಿ ನದಿಯ ದೊಡ್ಡಹೊಳೆಯಲ್ಲಿ ಆಂಧ್ರ ಮೂಲದ ಬೆಂಗಳೂರು ಸಾಫ್ಟ್ವೇರ್ ಇಂಜಿನಿಯರ್ 25 ವರ್ಷದ ಪ್ರಣಯ್ ಮಹೇಂದ್ರ ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ. ಒಂಬತ್ತು ಜನ ಯುವಕರಲ್ಲಿ ಕೆಲವರು ದಡದ ಮೇಲಿದ್ರೆ ಮತ್ತಲವರು ನದಿಯೊಳಗೆ ಇಳಿದಿದ್ದರು.
ಚಿಕ್ಕಮಗಳೂರು: ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧ
ನದಿಯ ಆಳದ ಅರಿವಿಲ್ಲದೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಹಾಗಾಗಿ, ಸ್ಥಳಿಯರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗ್ತಿದೆ. ನದಿಗಳ ನೀರಿನ ಹರಿವಿನ ಪ್ರಮಾಣ ಕೂಡ ಏರಿಕೆಯಾಗಿದೆ. ಪ್ರವಾಸಿಗರಿಗೆ ಇಲ್ಲಿನ ಜಾಗದ ಅರಿವು ಇರುವುದಿಲ್ಲ. ಇಲ್ಲಿನ ಸೌಂದರ್ಯಕ್ಕೆ ಮರುಳಾಗಿ ಸೆಲ್ಫಿ-ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ತಮ್ಮ ಪ್ರಾಣಕ್ಕೆ ತಾವೇ ಮುಳ್ಳಾಗುತ್ತಿದ್ದಾರೆ. ಕೆಲವೊಂದು ಕಡೆ ನಾಮಫಲಕ ಇದ್ದರೂ ಕ್ಯಾರೇ ಎನ್ನದೇ ಹೋಗಿ ಪ್ರಾಣಕ್ಕೆ ಅಪಾಯವನ್ನು ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವೊಂದು ಕಡೆ ಜಿಲ್ಲಾಡಳಿತ ಅಪಾಯದ ಸ್ಥಳಗಳಲ್ಲಿ ನಾಮಫಲಕ ಹಾಕಬೇಕು, ಇಲ್ಲ ಕಾವಲುಗಾರರನ್ನ ನೇಮಕ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೆಲ್ಫಿ ಕ್ರೇಜ್ ಕಳೆದ 3 ವರ್ಷದಿಂದ 10 ಜನರು ಬಲಿ: ಕಾಫಿನಾಡಲ್ಲಿ ಇಂಹತಾ ಹತ್ತಾರು ಸ್ಥಳಗಳಿವೆ. ಚಾರ್ಮಾಡಿಘಾಟ್, ಕಲ್ಲತ್ತಿಗರಿ ಜಲಪಾತ, ಸಿರಿಮನೆ ಫಾಲ್ಸ್, ಅಂಬುತೀರ್ಥ, ಕುಕ್ಕುಡ ಫಾಲ್ಸ್, ಕಾಮೇನಹಳ್ಳಿ ಫಾಲ್ಸ್, ಹೊನ್ನಮ್ಮನ ಹಳ್ಳ, ಹೆಬ್ಬೆ ಜಲಪಾತ ಸೇರಿದಂತೆ ನೂರಾರು ಜಲಪಾತಗಳಿವೆ. ಒಂದಕ್ಕಿಂತ ಒಂದು ಸುಂದರ. ಅಪಾಯ. ಅದರಲ್ಲೂ ಚಾರ್ಮಾಡಿಘಾಟಿಯಲ್ಲಿ ಮಳೆಗಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಬಿದ್ದು ಕೈಕಾಲು ಮುರಿದುಕೊಂಡ್ರೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಳೆದ 3ವರ್ಷಗಳಿಂದ ಸೆಲ್ಪಿ ಕ್ರೇಜ್ ಗೆ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದವರ ಮೃತದೇಹ ಹುಡುಕಲು ವಾರವಾಗಿರುವ ಉದಾಹರಣೆಯೂ ಇದೆ.
ರೋಹಿತ್ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಬಸವಯೋಗಿಪ್ರಭು ಸ್ವಾಮೀಜಿ
ಹಾಗಾಗಿ, ಮಳೆಗಾಲ ಆರಂಭಕ್ಕೂ ಮುನ್ನವೇ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಅಪಾಯದ ಸ್ಥಳಗಳಲ್ಲಿ ನಾಮಫಲಕ ಹಾಕಿ, ಪ್ರವಾಸಿಗರಿಗೆ ಮಾಹಿತಿ ನೀಡಿದರೆ ಜೀವವಾದರೂ ಉಳಿಯುತ್ತೆ. ಜಿಲ್ಲಾಡಳಿತ ಕೂಡಲೇ ಆ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಕಳೆದೊಂದು ತಿಂಗಳಿಂದ ಕಾಫಿನಾಡಲ್ಲಿ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆಯಾಗ್ತಿದೆ. ಘಟ್ಟ ಪ್ರದೇಶದಲ್ಲಿ ಸ್ವಲ್ಪ ಜಾಸ್ತಿಯೇ ಮಳೆ ಸುರಿದಿದೆ. ನದಿ-ಹಳ್ಳ-ಕೊಳ್ಳಗಳ ನೀರಿನ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ನದಿಯ ಬಂಡೆಗಲ್ಲುಗಳ ಮೇಲೆ ಪಾಚಿ ಕಟ್ಟಿದೆ. ಮಲೆನಾಡಿನ ನದಿಗಳು ಅಪಾಯವನ್ನ ಮೈಕಪ್ಪಿಕೊಂಡೇ ಹರಿಯುತ್ತಿವೆ. ಅಂತಹಾ ಅಪಾಯಕಾರಿ ಬಂಡೆಗಳ ಮೇಲೆ ಯುವಕ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡ್ತಾ ತಮ್ಮ ಪ್ರಾಣಕ್ಕೆ ತಾವೇ ಅಪಾಯಕಾರಿ ತಂದುಕೊಳ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ