* ಬ್ಯಾಂಕ್ ಉದ್ಯೋಗಿ ಒಬ್ಬರಿಂದ 10 ಲಕ್ಷ ರೂಪಾಯಿ ವರ್ಗಾವಣೆ
* ಜಾಹೀರಾತು ನೀಡಿದವರನ್ನು ಸಂಪರ್ಕಿಸಿದ್ದ ಸೌಮ್ಯ
* ' ಟ್ರೇಡ್ ಸಿಗ್ನಲ್' ಎಂಬ ಹೆಸರಲ್ಲಿ ವ್ಯವಹಾರದ ಖಾತೆ ತೆರೆದು ವಂಚಿಸಿದ ವಂಚಕರು
ಹುಬ್ಬಳ್ಳಿ(ಜು.05): ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ವ್ಯವಹಾರ ಮಾಡುವ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ಆಸೆ ತೋರಿಸಿ ನಗರದ ಬ್ಯಾಂಕ್ ಉದ್ಯೋಗಿ ಒಬ್ಬರಿಂದ 10 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ
ಕೇಶ್ವಾಪುರದ ಶಾಂತಿನಗರದ ಸೌಮ್ಯ ಎಂಬುವರು ವಂಚನೆಗೀಡಾದವರು. ಜು. 2ರಂದು ಸೌಮ್ಯ ಅವರು ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ ಜಾಹೀರಾತೊಂದು ಕಂಡಿತ್ತು. ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ವಿವರಿಸಲಾಗಿತ್ತು. ಇದನ್ನು ನಂಬಿದ ಸೌಮ್ಯ ಜಾಹೀರಾತು ನೀಡಿದವರನ್ನು ಸಂಪರ್ಕಿಸಿದ್ದರು.
Online Fraud; ಆನ್ಲೈನ್ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!
ವಂಚಕರು ಇವರ ಹೆಸರಲ್ಲಿ 'ಟ್ರೇಡ್ ಸಿಗ್ನಲ್' ಎಂಬ ವ್ಯವಹಾರದ ಖಾತೆ ತೆರೆದು, ಅವರಿಂದ 50 ಸಾವಿರ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಅದಕ್ಕೆ ಲಾಭ ಸೇರಿಸಿ 6,50,553 ರೂ.ಗಳನ್ನು ಖಾತೆಯಲ್ಲಿ ತೋರಿಸಿದ್ದರು. ಆ ಹಣವನ್ನು ಬಿಡಿಸಿಕೊಳ್ಳಬೇಕೆಂದರೆ, ಖಾತೆಯನ್ನು ಅಪ್‌ಗ್ರೇಡ್ ಮಾಡಬೇಕು ಎಂದು ಮತ್ತೆ 2.5 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಹೀಗೆ ಇಲ್ಲಸಲ್ಲದ ಕಾರಣ ಹೇಳಿ ಬರೋಬ್ಬರಿ 10 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚು ಹಣ ಹಾಕಿದರೆ ವಿತ್‌ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.