ಮಕ್ಕಳ ಮಾರಾಟ ಗ್ಯಾಂಗ್‌ನಿಂದ 10 ಶಿಶು ಬಿಕರಿ: ಖತರ್ನಾಕ್‌ ಖದೀಮರ ಬಂಧನ

By Kannadaprabha NewsFirst Published Nov 29, 2023, 4:18 AM IST
Highlights

ಶಿಶು ಮಾರಾಟ ಜಾಲದಲ್ಲಿ ತಮಿಳುನಾಡಿನ ನಾಲ್ಕು ಆಸ್ಪತ್ರೆಗಳು ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಆಸ್ಪತ್ರೆಗಳ ಪೈಕಿ ಈಗಾಗಲೇ ಮೂರು ಆಸ್ಪತ್ರೆಗಳಿಗೆ ಅಲ್ಲಿನ ಪೊಲೀಸರಿಂದಲೇ ಬೀಗ ಬಿದ್ದಿದೆ. ಇನ್ನು ಕರ್ನಾಟಕದ ವೈದ್ಯರು ಹಾಗೂ ಆಸ್ಪತ್ರೆಗಳ ಬಗ್ಗೆ ಇನ್ನಷ್ಟೆ ತನಿಖೆ ನಡೆಯಬೇಕಿದೆ ಎಂದು ತಿಳಿಸಿದ ಪೊಲೀಸ್ ಆಯುಕ್ತ ಬಿ.ದಯಾನಂದ್ 

ಬೆಂಗಳೂರು(ನ.29):  ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು, ಈ ಜಾಲದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳು ಹಾಗೂ ವೈದ್ಯರ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ರಾಜ್ಯದ ಈರೋಡ್ ಮೂಲದ ಸುಹಾಸಿನಿ, ಗೋಮತಿ ಹಾಗೂ ರಾಧಾ ಬಂಧಿತರಾಗಿದ್ದಾರೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಮಹಾಲಕ್ಷ್ಮಿ, ತಮಿಳುನಾಡಿನ ಕಣ್ಣನ್‌ ರಾಮಸ್ವಾಮಿ, ಹೇಮಲತಾ, ಮಧುರೈನ ಮುರುಗೇಶ್ವರಿ ಹಾಗೂ ಶಾಂತಿನಗರದ ಶರಣ್ಯ ಸಿಸಿಬಿ ಬಲೆಗೆ ಬಿದ್ದಿದ್ದರು.

ಈ ಶಿಶು ಮಾರಾಟ ಜಾಲದಲ್ಲಿ ತಮಿಳುನಾಡಿನ ನಾಲ್ಕು ಆಸ್ಪತ್ರೆಗಳು ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಆಸ್ಪತ್ರೆಗಳ ಪೈಕಿ ಈಗಾಗಲೇ ಮೂರು ಆಸ್ಪತ್ರೆಗಳಿಗೆ ಅಲ್ಲಿನ ಪೊಲೀಸರಿಂದಲೇ ಬೀಗ ಬಿದ್ದಿದೆ. ಇನ್ನು ಕರ್ನಾಟಕದ ವೈದ್ಯರು ಹಾಗೂ ಆಸ್ಪತ್ರೆಗಳ ಬಗ್ಗೆ ಇನ್ನಷ್ಟೆ ತನಿಖೆ ನಡೆಯಬೇಕಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

Latest Videos

ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಿದ ತಾಯಿ!

ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯ ಬಳಿ ತಮಿಳುನಾಡು ಮೂಲದ ಒಂದು ಗಂಡು ಶಿಶು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿಯ ಸಂಘಟಿತ ಅಪರಾಧ ದಳದ (ಪಶ್ಚಿಮ) ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಆಧರಿಸಿ ಡಿಸಿಪಿ ಆರ್‌.ಶ್ರೀನಿವಾಸ್‌ ಗೌಡ ನೇತೃತ್ವದಲ್ಲಿ ಎಸಿಪಿ ಎಚ್‌.ಎನ್‌.ಧರ್ಮೇಂದ್ರ, ಇನ್‌ಸ್ಪೆಕ್ಟರ್‌ಗಳಾದ ಎಸ್‌.ಮಹದೇವಸ್ವಾಮಿ ಹಾಗೂ ಎಸ್‌.ನಯಾಜ್ ಅಹಮದ್‌ ತಂಡ ಕಾರ್ಯಾಚರಣೆಗಿಳಿಯಿತು. ಕೊನೆಗೆ ರಾಜರಾಜೇಶ್ವರಿ ದೇವಾಲಯದ ಬಳಿ ಸ್ವಿಫ್ಟ್‌ ಕಾರಿನಲ್ಲಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರು ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಕ್ಕಳ ಮಾರಾಟ ಜಾಲ ಬಯಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಆಸ್ಪತ್ರೆಗಳಿಗೆ ₹15-20 ಸಾವಿರಕ್ಕೆ ಅಂಡಾಣು ಮಾರಾಟ:

ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕಾನೂನುಬಾಹಿರವಾಗಿ ತಮ್ಮ ಅಂಡಾಣುಗಳನ್ನು ಮಾರಾಟ ಮಾಡಿ ಆರೋಪಿತ ಮಹಿಳೆಯರು ಹಣ ಸಂಪಾದಿಸಿದ್ದಾರೆ. ಅಲ್ಲದೆ ಬಡ ಮಹಿಳೆಯರಿಗೆ ಹಣದಾಸೆ ತೋರಿಸಿ ಅವರಿಂದ ಕೂಡಾ ಅಂಡಾಣು ಮಾರಾಟ ಮಾಡಿಸುವ ಮಧ್ಯವರ್ತಿಗಳಾಗಿ ಆರೋಪಿಗಳು ಕೆಲಸ ಮಾಡಿದ್ದಾರೆ.

ಈ ಹಿಂದೆ ತಮಿಳುನಾಡಿನಲ್ಲಿ ಬಾಡಿಗೆ ತಾಯ್ತನ ಅಥವಾ ತಮ್ಮ ಶಿಶುಗಳ ಮಾರಾಟದಲ್ಲಿ ಆರೋಪಿಗಳು ತೊಡಗಿದ್ದ ಬಗ್ಗೆ ಮಾಹಿತಿ ಇದೆ. ಬಾಡಿಗೆ ತಾಯಿತನ ಕಾಯ್ದೆಗೆ ತಿದ್ದುಪಡಿ ಬಳಿಕ ಅಕ್ರಮವಾಗಿ ದಂಧೆ ನಡೆಸುತ್ತಿದ್ದರು. ಅಂಡಾಣು ಮಾರಾಟ ಮಾಡಿದ ಸಂತ್ರಸ್ತೆಯರಿಗೆ ₹15 ಸಾವಿರದಿಂದ ₹20 ಸಾವಿರ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಂಪತಿಗೆ ಆಯ್ಕೆ ಬಳಿಕ ದರ ನಿಗದಿ

ತಮಿಳುನಾಡಿನಲ್ಲಿ ತಮ್ಮ ಜಾಲದ ಮೇಲೆ ಪೊಲೀಸರು ಬೆನ್ನುಹತ್ತಿದ್ದ ಬಳಿಕ ಆರೋಪಿಗಳು, ತಮ್ಮ ಜಾಲವನ್ನು ಕರ್ನಾಟಕಕ್ಕೆ ವಿಸ್ತರಿಸಿದರು. ಬೆಂಗಳೂರಿನ ಆಸ್ಪತ್ರೆಗಳು ಹಾಗೂ ಐವಿಎಫ್‌ ಕೇಂದ್ರಗಳನ್ನು ಸಂಪರ್ಕಿಸಿ ದಂಧೆಕೋರರು, ಸಂತಾನಕ್ಕೆ ಕಾತರಿಸುವ ನಿರ್ಭಾಗ್ಯ ದಂಪತಿಗಳ ಮಾಹಿತಿ ಪಡೆದು ಗಾಳ ಹಾಕುತ್ತಿದ್ದರು. ಇದಕ್ಕೆ ಆಸ್ಪತ್ರೆಗಳ ಹಾಗೂ ಐವಿಎಫ್‌ ಕೇಂದ್ರಗಳ ನೌಕರರು ಸಹಕರಿಸಿದ್ದಾರೆ. ತಮ್ಮಲ್ಲಿಗೆ ಚಿಕಿತ್ಸೆಗೆ ಬರುವ ಗರ್ಭ ಫಲವತ್ತತೆ ಇಲ್ಲದ ಮಹಿಳೆಯರ ಬಗ್ಗೆ ದಂಧೆಕೋರರಿಗೆ ಐವಿಎಫ್ ಕೇಂದ್ರಗಳು ಹಾಗೂ ಆಸ್ಪತ್ರೆಗಳಿಂದ ವಿವರ ಲಭಿಸಿದೆ.

ಈ ಮಾಹಿತಿ ಪಡೆದ ಬಳಿಕ ಆರೋಪಿಗಳು, ಸಂತಾನ ಭಾಗ್ಯವಿಲ್ಲದ ದಂಪತಿಯನ್ನು ಸಂಪರ್ಕಿಸಿ ಡೀಲ್ ನಡೆಸುತ್ತಿದ್ದರು. ಅನಂತರ ಆ ದಂಪತಿಗೆ ಬಾಡಿಗೆ ತಾಯ್ತನ ಮೂಲಕ ಮಗು ಅಥವಾ ನವಜಾತ ಶಿಶು ಪ್ರಸ್ತಾಪಿಸುತ್ತಿದ್ದರು. ಇದರಲ್ಲಿ ಆಯ್ಕೆ ಮಾಡಿದ್ದಕ್ಕೆ ದರ ನಿಗದಿಪಡಿಸುತ್ತಿದ್ದರು. ಮಗುವಿಗೆ ₹4 ಲಕ್ಷದಿಂದ ₹8 ಲಕ್ಷ ಪಡೆಯುತ್ತಿದ್ದರು. ಈ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು.

10 ಮಕ್ಕಳ ಮಾರಾಟ ಸುಳಿವು

ಇದುವರೆಗೆ 10 ಮಕ್ಕಳನ್ನು ಮಾರಾಟ ಮಾಡಿರುವ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿಗಳಿಂದ 20 ದಿನಗಳ ಗಂಡು ಮಗುವನ್ನು ರಕ್ಷಿಸಿದ ಬಳಿಕ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ಆರೈಕೆಗೆ ವೈದ್ಯರಿಗೊಪ್ಪಿಸಲಾಗಿದೆ. ಇನ್ನುಳಿದ ಮಕ್ಕಳನ್ನು ಖರೀದಿಸಿದ ದಂಪತಿ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.

ಮಗು ಖರೀದಿ ನೆಪದಲ್ಲಿ ಕಾರ್ಯಾಚರಣೆ:

ಶಿಶು ಮಾರಾಟ ದಂಧೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಆರೋಪಿಗಳನ್ನು ಸೆರೆ ಹಿಡಿಯಲು ಮಗು ಖರೀದಿಸುವ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ತಾವು ಮಗು ಖರೀದಿಸುವುದಾಗಿ ಮಹಾಲಕ್ಷ್ಮಿಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಮಹದೇವಸ್ವಾಮಿ ಕರೆ ಮಾಡಿ ಡೀಲ್ ಕುದುರಿಸಿದ್ದರು. ಅಂತೆಯೇ ಆರ್‌.ಆರ್‌.ನಗರಕ್ಕೆ ಮಗು ನೀಡಲು ಬಂದಾಗ ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

₹2 ಲಕ್ಷಕ್ಕೆ ಹೆತ್ತ ಮಕ್ಕಳನ್ನೇ ಮಾರಿದ್ದ ಆರೋಪಿಗಳು!

ಬಂಧಿತ ಮಹಿಳೆಯರು ಕಾನೂನುಬಾಹಿರವಾಗಿ ಬಾಡಿಗೆ ತಾಯ್ತನದಲ್ಲಿ ಮಕ್ಕಳನ್ನು ಹೆತ್ತು ಮಾರಾಟ ಮಾಡಿದ್ದಾರೆ. ಹೀಗೆ ಬಾಡಿಗೆ ತಾಯತನಕ್ಕಾಗಿ ಆರೋಪಿಗಳಿಗೆ ₹2 ಲಕ್ಷ ಮಾತ್ರ ಸಿಕ್ಕಿದ್ದರೆ, ಏಜೆಂಟ್‌ಗಳಿಗೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಲಾಭವಾಗಿದೆ. ಆರ್‌.ಆರ್‌.ನಗರದಲ್ಲಿ ತನ್ನ 20 ದಿನಗಳ ನವಜಾತ ಗಂಡು ಮಗುವನ್ನು ಆರೋಪಿ ಮುರುಗೇಶ್ವರಿ ಮಾರಾಟಕ್ಕೆ ಬಂದಿದ್ದಾಗ ಬಂಧಿತಳಾಗಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಮಗು ಮಾರಾಟ:

ಆರ್ಥಿಕ ಸಂಕಷ್ಟ ಅಥವಾ ಅಕ್ರಮ ಸಂಬಂಧದಿಂದ ಧರಿಸಿದ ಕಾರಣಕ್ಕೆ ಗರ್ಭಪಾತಕ್ಕೆ ಮುಂದಾಗುವ ಮಹಿಳೆಯರನ್ನು ದಂಧೆಕೋರರು ಟಾರ್ಗೆಟ್ ಮಾಡುತ್ತಿದ್ದರು. ಈ ರೀತಿ ಆಸ್ಪತ್ರೆಗಳಿಗೆ ಬರುವ ಮಹಿಳೆಯರ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳು, ಬಳಿಕ ಆ ಮಹಿಳೆಯರಿಗೆ ಹಣದಾಸೆ ತೋರಿಸಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಬಳಿಕ ರಹಸ್ಯ ಸ್ಥಳದಲ್ಲಿ ಆ ಗರ್ಭಿಣಿಯರನ್ನು ತಾವೇ ಆರೈಕೆ ಮಾಡಿ ಮಗು ಹುಟ್ಟಿದ ಬಳಿಕ ಆ ಮಹಿಳೆಯರಿಗೆ 1ರಿಂದ 2 ಲಕ್ಷ ನೀಡಿ ಖರೀದಿಸುತ್ತಿದ್ದರು. ತರುವಾಯ ಆ ನವಜಾತ ಶಿಶುಗಳನ್ನು ಶ್ರೀಮಂತ ಕುಟುಂಬಗಳಿಗೆ ದುಬಾರಿ ಬೆಲೆ ಮಾರುತ್ತಿದ್ದರು.

ಬಣ್ಣ, ಲಿಂಗದ ಆಧರಿಸಿ ದರ ನಿಗದಿ

ಇನ್ನು ಬಣ್ಣ ಹಾಗೂ ಲಿಂಗ ಆಧರಿಸಿ ಮಕ್ಕಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಹೆಣ್ಣು ಮಗುವಾದರೆ 4 ರಿಂದ 5 ಲಕ್ಷ ಹಾಗೂ ಗಂಡು ಮಗುವಾದರೆ 8 ರಿಂದ 10 ಲಕ್ಷಕ್ಕೆ ಬಿಕರಿ ಮಾಡುತ್ತಿದ್ದರು. ಅದೇ ರೀತಿ ಮಗು ಕಪ್ಪಾಗಿದ್ದರೆ 1 ಲಕ್ಷದಿಂದ 2 ಲಕ್ಷ ಬೆಲೆ ಕಡಿಮೆ ಇದ್ದರೆ ಬಿಳಿ ಬಣ್ಣದ ಮಗುವಿಗೆ 3 ರಿಂದ 4 ಲಕ್ಷ ದರದವರೆಗೂ ಬೆಲೆ ನಿಗದಿ ಆಗುತ್ತಿತ್ತು.

ನಕಲಿ ಜನನ ಪತ್ರಕ್ಕೆ ವೈದ್ಯರ ಸಹಕಾರ:

ಇನ್ನು ತಾವು ಮಾರಾಟ ಮಾಡುವ ನವಜಾತ ಶಿಶುಗಳಿಗೆ ಅಕ್ರಮವಾಗಿ ಜನನ ಪ್ರಮಾಣ ಪತ್ರವನ್ನು ಸಹ ಆರೋಪಿಗಳು ತಯಾರಿಸುತ್ತಿದ್ದರು. ಇದಕ್ಕೆ ಕೆಲ ವೈದ್ಯರು ಕೂಡಾ ಸಹಕರಿಸಿದ್ದಾರೆ. ಮಗು ಖರೀದಿಸುವ ಅಥವಾ ಕೆಲವು ಬಾರಿ ತಮ್ಮದೇ ಆಧಾರ್ ಕಾರ್ಡ್ ಬಳಸಿಕೊಂಡು ನಕಲಿ ಜನನ ಪ್ರಮಾಣ ಪತ್ರವನ್ನು ಆರೋಪಿಗಳು ಪಡೆದಿದ್ದರು. ಈಗ ರಕ್ಷಿಸಿರುವ 20 ದಿನಗಳ ಗಂಡು ಮಗುವಿಗೆ ಸಹ ಜನನ ಪ್ರಮಾಣ ಪತ್ರ ಮಾಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಘಟಿತ ತಂಡವಾಗಿ ಕೆಲಸ

ಈ ಜಾಲವು ಸಂಘಟಿತ ಸಂಸ್ಥೆಯಂತೆ ಕೆಲಸ ಮಾಡಿದೆ. ನವಜಾತ ಶಿಶು ಮಾರಾಟಕ್ಕೆ ದಂಪತಿಗಳ ಜತೆ ರಾಧಾ ಡೀಲ್ ಕುದುರಿಸಿದರೆ, ಆಕೆಯ ಸೂಚನೆ ಮೇರೆಗೆ ಸಂಬಂಧಪಟ್ಟವರಿಗೆ ಮಗು ನೀಡಿ ಹಣ ಸಂಗ್ರಹಿಸುವ ಕೆಲಸವನ್ನು ಹೇಮಲತಾ ಹಾಗೂ ಶರಣ್ಯ ಮಾಡುತ್ತಿದ್ದರು. ಇನ್ನುಳಿದವರು ಬಾಡಿಗೆ ತಾಯ್ತನಕ್ಕೆ ಮಹಿಳೆಯರ ಸೆಳೆಯುವ ಏಜೆಂಟ್‌ಗಳಾಗಿದ್ದರು.

ಶಿಶು ಮಾರಾಟ ಕೇಸ್‌: ಅಜ್ಜ ಸೇರಿ ನಾಲ್ವರ ಬಂಧನ

ವಾಟ್ಸ್‌ ಆ್ಯಪ್ ಮೂಲಕ ಆರೋಪಿಗಳು ವ್ಯವಹರಿಸುತ್ತಿದ್ದರು. ನವಜಾತ ಶಿಶು ಮಾರಾಟಕ್ಕೆ ಸಿಕ್ಕಿದರೆ ಕೂಡಲೇ ಆ ಮಗುವಿನ ಫೋಟೋವನ್ನು ವಾಟ್ಸ್‌ ಆಪ್‌ನಲ್ಲಿ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಮಗು ಬೇಕೆಂದು ರಾಧಾಗೆ ಮಹಾಲಕ್ಷ್ಮಿಗೆ ಮಾಹಿತಿ ನೀಡಿದ್ದಳು. ಆ ಸಂದೇಶವನ್ನು ಕಣ್ಣನ್ ಸ್ವಾಮಿಗೆ ಆಕೆ ರವಾನಿಸಿದ್ದಳು. ಈತನ ಮಾಹಿತಿ ಪಡೆದ ಗೋಮತಿ, ತನ್ನ ಸಂಪರ್ಕದಲ್ಲಿದ್ದ ಮುರುಗೇಶ್ವರಿ ಬಳಿ ಗಂಡು ಶಿಶು ಇರುವುದಾಗಿ ಖಚಿತಪಡಿಸಿದ್ದಳು. ಕೊನೆಗೆ ಆಕೆಗೆ ₹2 ಲಕ್ಷ ಮಾರಾಟಕ್ಕೆ ಆರೋಪಿಗಳು ಕರೆ ತಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನವಜಾತ ಶಿಶುಗಳ ಮಾರಾಟ ಹಾಗೂ ಹೆಣ್ಣು ಭ್ರೂಣ ಲಿಂಗ ಪತ್ತೆ ಜಾಲಗಳನ್ನು ಭೇದಿಸಿದ ಪೊಲೀಸರನ್ನು ಅಭಿನಂದಿಸುತ್ತೇನೆ. ಈ ಎರಡು ಪ್ರಕರಣಗಳಲ್ಲಿ ಯಾರೇ ಇದ್ದರು ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ. 

click me!