Bengaluru crime: ಹಣ ಡಬಲ್‌ ಆಸೆ ತೋರಿಸಿ ಅರ್ಚಕನಿಗೆ ₹1.7 ಕೋಟಿ ಟೋಪಿ

By Kannadaprabha News  |  First Published Jul 22, 2023, 4:44 AM IST

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 20 ತಿಂಗಳಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಅರ್ಚಕರೊಬ್ಬರಿಂದ ವಿವಿಧ ಹಂತಗಳಲ್ಲಿ .1.07 ಕೋಟಿ ಪಡೆದು ವಂಚಿಸಿದ್ದವನನ​ು​್ನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜು.22) :  ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 20 ತಿಂಗಳಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಅರ್ಚಕರೊಬ್ಬರಿಂದ ವಿವಿಧ ಹಂತಗಳಲ್ಲಿ .1.07 ಕೋಟಿ ಪಡೆದು ವಂಚಿಸಿದ್ದವನನ​ು​್ನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಶೇಷಗಿರಿ(45) ಬಂಧಿತ. ಆರೋಪಿಯಿಂದ .45 ಲಕ್ಷ ನಗದು ಹಾಗೂ ಎರಡು ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. ಎನ್‌.ಆರ್‌.ಕಾಲೋನಿ ನಿವಾಸಿ ರಾಘವೇಂದ್ರ ಆಚಾರ್ಯ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಬೂಸ್ಟ್‌ ಹಿಡಿ​ದ ಆಹಾರ ರಾಜಾರೋಷ ಮಾರಾಟ; ಡಿಜೆ ಹಳ್ಳಿ ಸಿದ್ಧಿಕ್ ಪಾಷ ಬಂಧನ

::ಪ್ರಕರಣದ ಹಿನ್ನೆಲೆ

ದೂರುದಾರ ರಾಘವೇಂದ್ರ ಆಚಾರ್ಯ(Raghavendra acharya) ಅವರು ಎನ್‌.ಆರ್‌.ಕಾಲೋನಿಯ ಮಠವೊಂದರ ಅರ್ಚಕರಾಗಿದ್ದಾರೆ. ಮೂರು ವರ್ಷದ ಹಿಂದೆ ಆರೋಪಿ ಶೇಷಗಿರಿ ಆಗಾಗ ಮಠಕ್ಕೆ ಬರುತ್ತಿದ್ದ. ಈ ವೇಳೆ ಅರ್ಚಕ ರಾಘವೇಂದ್ರ ಅವರಿಗೆ ಪರಿಚಿತನಾಗಿದ್ದಾನೆ. ಬಳಿಕ ಆತ್ಮೀಯತೆ ಬೆಳೆದು ಮಠದಲ್ಲಿ ನಿಮ್ಮ ಜತೆಗೆ ಇದ್ದು ಶ್ಲೋಕ, ಮಂತ್ರಗಳನ್ನು ಕಲಿಯುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ರಾಘವೇಂದ್ರ ಅವರು ಸಮ್ಮತಿ ಸೂಚಿಸಿ ತಮ್ಮ ಸಹಾಯಕನಾಗಿ ಜೊತೆಗಿರಲು ಅವಕಾಶ ನೀಡಿದ್ದಾರೆ. ಎರಡು ವರ್ಷ ಆರೋಪಿಯು ಮಠದಲ್ಲಿ ರಾಘವೇಂದ್ರ ಅವರ ಸಹಾಯಕನಾಗಿ ಇದ್ದು ನಂಬಿಕೆ ಗಿಟ್ಟಿಸಿದ್ದ.

ಮನಿ ಡಬಲ್‌ ಆಸೆ:

ಈ ನಡುವೆ ಕಳೆದ ವರ್ಷ ‘ನಾನು ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿದ್ದೇನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ 20 ತಿಂಗಳಲ್ಲಿ ಹಣ ದ್ವಿಗುಣವಾಗಲಿದೆ’ ಎಂದು ರಾಘವೇಂದ್ರ ಅವರನ್ನು ನಂಬಿಸಿದ್ದಾನೆ. ಈತನ ಮಾತು ನಂಬಿದ ರಾಘವೇಂದ್ರ ಅವರು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಆರೋಪಿಗೆ ವಿವಿಧ ಹಂತಗಳಲ್ಲಿ .1.07 ಕೋಟಿ ನೀಡಿದ್ದಾರೆ.

ಮನೆ ಸೇಲ್‌ ಆಗ್ರಿಮೆಂಟ್‌ಗೆ ಯತ​್ನ:

ಅಷ್ಟಕ್ಕೆ ಸುಮ್ಮನಾಗದ ಆರೋಪಿಯು, ರಾಘವೇಂದ್ರ ಅವರ ಮನೆಯ ಸೇಲ್‌ ಅಗ್ರಿಮೆಂಟ್‌ ಮಾಡಿಕೊಂಡು ಬ್ಯಾಂಕಿನಲ್ಲಿ ಸಾಲ ಪಡೆಯಲು ಪ್ರಯತ್ನಿಸಿದ್ದಾನೆ. ಆದರೆ, ಸಾಲ ಪಡೆಯಲು ಸಾಧ್ಯವಾಗಿಲ್ಲ. ಕೆಲ ದಿನಗಳ ಬಳಿಕ ಆರೋಪಿಯು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾನೆ. ಇತ್ತ ರಾಘವೇಂದ್ರ ಅವರು ಹತ್ತಾರು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿ ಬನಶಂಕರಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ತನಿಖೆ ನಡೆಸಿ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗನಂತಿ​ದ್ದು ವಂಚಿಸಿದ

ಅರ್ಚಕ ರಾಘವೇಂದ್ರ ಅವರಿಗೆ ಮಕ್ಕಳು ಇರಲಿಲ್ಲ. ಮಠದಲ್ಲಿ ಸಹಾಯಕನಾಗಿ ವಿಧೇಯ ವಿದ್ಯಾರ್ಥಿಯಂತೆ ಇದ್ದ ಆರೋಪಿ ಶೇಷಗಿರಿಯನ್ನೇ ಮಗನಂತೆ ನೋಡಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಶೇಷಗಿರಿ ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣ ಮಾಡುವುದಾಗಿ ನಂಬಿಸಿ, ರಾಘವೇಂದ್ರ ಅವರಿಂದ ವಿವಿಧ ಹಂತಗಳಲ್ಲಿ ಬರೋಬ್ಬರಿ .1.07 ಕೋಟಿ ಪಡೆದು ವಂಚಿಸಿದ್ದಾನೆ.

ಲವ್‌ ಅಫೇರ್‌ಗೆ ತಂಗಿಯ ಶಿರಚ್ಛೇದ, ರುಂಡ ಹಿಡಿದು ಗ್ರಾಮದಲ್ಲಿ 800 ಮೀಟರ್‌ ತಿರುಗಾಡಿದ ಅಣ್ಣ!

ಚೆನ್ನೈನಲ್ಲೂ ಟೋಪಿ

ಆರೋಪಿ ಶೇಷಗಿರಿ ಬಿಕಾಂ ಪದವಿಧರನಾಗಿದ್ದು ಅವಿವಾಹಿತನಾಗಿದ್ದಾನೆ. ಆರಂಭದಲ್ಲಿ ಚೆನ್ನೈನ ಖಾಸಗಿ ಬ್ಯಾಂಕ್‌ ಹಾಗೂ ಷೇರು ಕಂಪನಿಗಳಲ್ಲಿ ಕೆಲ ಕಾಲ ಕೆಲಸ ಮಾಡಿದ್ದ. ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದ ವಂಚನೆಗೆ ಇಳಿದಿದ್ದ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹಣ ದ್ವಿಗುಣ ಮಾಡಿಕೊಡುವುದಾಗಿ ಅಮಾಯಕರನ್ನು ನಂಬಿಸಿ ಹಣ ಪಡೆದು ವಂಚಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಅರ್ಚಕ ರಾಘವೇಂದ್ರ ಆಚಾರ್ಯ ಅವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈತನಿಂದ ವಂಚನೆಗೆ ಒಳಗಾದವರು ಇದ್ದರೆ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

click me!