ಬೆಂಗಳೂರು: 1.21 ಕೋಟಿಯ ಚಿನ್ನ ದೋಚಿದ್ದು ಪೊಲೀಸರೇ..!

By Kannadaprabha News  |  First Published Mar 15, 2023, 6:33 AM IST

ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸರಿಂದಲೇ ಕೃತ್ಯ, ಗೆಳೆಯನ ಮಾತು ಕೇಳಿ ದರೋಡೆ, ಬಸ್‌ ಹತ್ತಲು ಬಂದ ರಾಯಚೂರಿನ ಇಬ್ಬರನ್ನು ತಡೆದು ಚಿನ್ನ ಕಸಿದು ಪರಾರಿ, ಸೆರೆ. 


ಬೆಂಗಳೂರು(ಮಾ.15):  ಇತ್ತೀಚೆಗೆ ಆನಂದರಾವ್‌ ವೃತ್ತದ ಸಾರ್ವಜನಿಕ ಶೌಚಾಲಯದ ಬಳಿ ಪೊಲೀಸರೆಂದು ಬೆದರಿಸಿ ಇಬ್ಬರು ವ್ಯಕ್ತಿಗಳಿಂದ 1.21 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಆಭರಣ ದೋಚಿ ಪರಾರಿಯಾಗಿದ್ದ ಇಬ್ಬರು ರೈಲ್ವೆ ಪೊಲೀಸ್‌ ಕಾನ್‌ಸ್ಟೇಬಲ್‌ಗಳು ಸೇರಿ ಮೂವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಾಲಬಾವಿ ತಾಂಡ ನಿವಾಸಿ ಮೌನೇಶ್‌(30), ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಗರಾಜ ಗ್ರಾಮದ ನಿವಾಸಿ ಸಿದ್ದಪ್ಪ(31) ಹಾಗೂ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಾರುದಿನಿ ತಾಂಡ ನಿವಾಸಿ ಮೌನೇಶ್‌(28) ಬಂಧಿತರು. ಆರೋಪಿಗಳಿಂದ 1.76 ಕೇಜಿ ತೂಕದ ಚಿನ್ನದ ಬಿಸ್ಕತ್‌, 290 ಗ್ರಾಂ ತೂಕದ ಚಿನ್ನಾಭರಣ, 1.18 ಕೇಜಿ ತೂಕದ ಬೆಳ್ಳಿ ಹಾಗೂ .19 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಬೆಂಗಳೂರಲ್ಲಿ ಮತ್ತೊಬ್ಬ ನಕಲಿ ಎಸ್‌ಪಿ: ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ ಖದೀಮ..!

ರಾಯಚೂರು ಮೂಲದ ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯ ತಮ್ಮ ಮಾಲಿಕರ ಸೂಚನೆ ಮೇರೆಗೆ ಚಿಕ್ಕಪೇಟೆಯಲ್ಲಿ ಚಿನ್ನದ ಗಟ್ಟಿ ಖರೀದಿಸಿ ಮಾ.11ರಂದು ರಾತ್ರಿ 11 ಗಂಟೆಗೆ ಖಾಸಗಿ ಬಸ್‌ನಲ್ಲಿ ರಾಯಚೂರಿಗೆ ತೆರಳಲು ಗಾಂಧಿನಗರದ ಆನಂದರಾವ್‌ ವೃತ್ತದ ಗ್ರೀನ್‌ ಲೈನ್‌ ಟ್ರಾವೆಲ್ಸ್‌ ಕಚೇರಿ ಬಳಿ ಬಂದಿದ್ದರು. ಈ ವೇಳೆ ಅಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ತೆರಳುವಾಗ ಎದುರಾದ ಇಬ್ಬರು ಅಪರಿಚಿತರು, ತಾವು ಪೊಲೀಸರೆಂದು ಹೇಳಿಕೊಂಡು ಮೂರು ತಿಂಗಳಿಂದ ನಿಮ್ಮ ಮೇಲೆ ನಿಗಾವಹಿಸಿದ್ದೇವೆ ಎಂದು ಬೆದರಿಸಿ, ಚಿನ್ನದ ಗಟ್ಟಿಮತ್ತು ಆಭರಣಗಳಿದ್ದ ಬ್ಯಾಗ್‌ ಕಸಿದುಕೊಂಡಿದ್ದರು.

ಬಳಿಕ ಆಟೋರಿಕ್ಷಾ ಕರೆದು ಇಬ್ಬರನ್ನು ಕೂರಿಸಿಕೊಂಡು ರೇಸ್‌ಕೋರ್ಸ್‌ ರಸ್ತೆಯಲ್ಲಿ ಸ್ವಲ್ಪ ದೂರು ಕ್ರಮಿಸಿ, ಮಲ್ಲಯ್ಯನನ್ನು ಕೆಪಿಸಿಸಿ ಕಚೇರಿ ಬಳಿ ಹಾಗೂ ಅಬ್ದುಲ್‌ ರಜಾಕ್‌ನನ್ನು ಚೌಡಯ್ಯ ರಸ್ತೆಯ ನೆಹರು ತಾರಾಲಯ ಬಳಿ ಇಳಿಸಿ ಡಿ.ಸಿ. ಕಚೇರಿ ಬಳಿ ಬರುವಂತೆ ಸೂಚಿಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರೋಡೆಗೆ ಸ್ನೇಹಿತ ನೀಡಿದ ಸುಳಿವು!

ಬಂಧಿತ ಮೂರು ಆರೋಪಿಗಳ ಪೈಕಿ ಹಾಲಬಾವಿ ತಾಂಡಾ ನಿವಾಸಿ ಮೌನೇಶ್‌ ಮತ್ತು ನಾಗರಾಜ ಗ್ರಾಮದ ನಿವಾಸಿ ಸಿದ್ದಪ್ಪ ವಿಜಯಪುರ ರೈಲ್ವೆಯ ವಿಭಾಗದಲ್ಲಿ ಕಾನ್‌ಸ್ಟೇಬಲ್‌ಗಳಾಗಿದ್ದಾರೆ. ಮರುದಿನಿ ತಾಂಡಾ ನಿವಾಸಿ ಮೌನೇಶ್‌ ಚಿಕ್ಕಪೇಟೆಯ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಕಡಿಮೆ ಎಂದು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಈತ ಮತ್ತು ಕಾನ್‌ಸ್ಟೇಬಲ್‌ ಮೌನೇಶ್‌ ಸ್ನೇಹಿತರು. ಚಿನ್ನಾಭರಣ ಖರೀದಿಗೆ ಬರುವವರ ಬಗ್ಗೆ ಚೆನ್ನಾಗಿ ತಿಳಿದಿದ್ದ ಮೌನೇಶ್‌, ಕಾನ್‌ಸ್ಟೇಬಲ್‌ ಮೌನೇಶ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದ. ಅದರಂತೆ ಕಾನ್‌ಸ್ಟೇಬಲ್‌ಗಳಾದ ಮೌನೇಶ್‌ ಮತ್ತು ಸಿದ್ದಪ್ಪ ತಾವು ಪೊಲೀಸರೆಂದು ಹೇಳಿಕೊಂಡು ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯನನ್ನು ಬೆದರಿಸಿ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದರು.

ಬೆಂಗಳೂರು: ಅಪಾರ್ಟ್‌ಮೆಂಟ್‌ನ 4ನೇ ಫ್ಲೋರಿಂದ ಬಿದ್ದು ಗಗನಸಖಿ ಸಾವು, ಪ್ರಿಯಕರ ಪೊಲೀಸ್‌ ವಶಕ್ಕೆ

ರೈಲು ಕಾಯಲು ಬಂದು ದರೋಡೆ

ಇತ್ತೀಚೆಗೆ ನಗರದಲ್ಲಿ ವಂದೇ ಭಾರತ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿ ಹಾನಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲು ಸಂಚರಿಸುವ ಮಾರ್ಗದಲ್ಲಿ ಭದ್ರತೆ ಒದಗಿಸಲು ವಿಜಯಪುರದ ರೈಲ್ವೆ ವಿಭಾಗದಿಂದ ಕಾನ್‌ಸ್ಟೇಬಲ್‌ಗಳಾದ ಮೌನೇಶ್‌ ಮತ್ತು ಸಿದ್ದಪ್ಪನನ್ನು ಬೆಂಗಳೂರಿಗೆ ವಿಶೇಷ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೆಲ ದಿನಗಳಿಂದ ಬೆಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮೌನೇಶ್‌, ತನ್ನ ಸ್ನೇಹಿತ ಮೌನೇಶ್‌ನನ್ನು ಭೇಟಿಯಾದಾಗ ಚಿನ್ನಾಭರಣ ಖರೀದಿಗೆ ರಾಜ್ಯದ ಎಲ್ಲೆಲ್ಲಿಂದ ಯಾರೆಲ್ಲಾ ಬರುತ್ತಾರೆ ಎಂಬ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಆರೋಪಿಗಳು ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯನನ್ನು ಹಿಂಬಾಲಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಸಿಸಿಟಿವಿ ನೀಡಿದ ಸುಳಿವು

ಘಟನೆ ಸಂಬಂಧ ದುಷ್ಕರ್ಮಿಗಳ ಪತ್ತೆಗೆ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ರೈಲ್ವೆ ಪೊಲೀಸ್‌ ಕಾನ್‌ಸ್ಟೇಬಲ್‌ಗಳಾದ ಮೌನೇಶ್‌ ಮತ್ತು ಸಿದ್ದಪ್ಪನ ಚಲನವಲನ ಸೆರೆಯಾಗಿತ್ತು. ಈ ಸುಳಿವನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಇವರು ನೀಡಿದ ಮಾಹಿತಿ ಮೇರೆಗೆ ಮೌನೇಶ್‌ನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!