ಅಂಧರ ಟಿ20 ವಿಶ್ವಕಪ್‌ಗೆ ಯುವರಾಜ್ ಸಿಂಗ್ ರಾಯಭಾರಿ, ಡಿ.6ರಿಂದ ಟೂರ್ನಿ!

By Suvarna News  |  First Published Oct 21, 2022, 5:14 PM IST

ಈ ವರ್ಷದ ಅಂತ್ಯದಲ್ಲಿ ಅಂಧರ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದೆ. ಭಾರತ ಆತಿಥ್ಯ ನೀಡುತ್ತಿರುವ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 7 ತಂಡಗಳು ಪಾಲ್ಗೊಳ್ಳುತ್ತಿದೆ. ಇದೀಗ ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಬಾರಿಯಾಗಿದ್ದಾರೆ.
 


ಬೆಂಗಳೂರು(ಅ.21): ಅಂಧರ ಟಿ20 ವಿಶ್ವಕಪ್ ಟೂರ್ನಿ ಮತ್ತೆ ಬಂದಿದೆ. ಡಿಸೆಂಬರ್ 6 ರಿಂದ ಬ್ಲೈಂಡ್ ಟಿ20 ವರ್ಲ್ಡ್ ಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಈಗಾಗಲೇ ಭಾರತ ತಂಡ ಪ್ರಕಟಿಸಿದೆ. ಇದೀಗ 3ನೇ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಯುವರಾಜ್ ಸಿಂಗ್ ರಾಯಭಾರಿಯಾಗಿದ್ದಾರೆ.  ಈ ಕುರಿತು ಸುದ್ದಿಗೋಷ್ಠಿ ನಡೆಸಿದ  ದಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇನ್ ಇಂಡಿಯಾ ಈ ನಿರ್ಧಾರ ಘೋಷಿಸಿದೆ. ಈಗಾಗಲೆ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಜಯ್ ರೆಡ್ಡಿ -ಬಿ2 (ಆಂಧ್ರ ಪ್ರದೇಶ) ಭಾರತ ತಂಡದ ನಾಯಕರಾಗಿದ್ದಾರೆ. ಹಾಗೇ ವೆಂಕಟೇಶ್ವರ ರಾವ್ ದುನ್ನಾ -ಬಿ2 (ಆಂಧ್ರ ಪ್ರದೇಶ) ತಂಡದ ಉಪನಾಯಕರಾಗಿದ್ದಾರೆ. ವಿಶ್ವ ಕಪ್ ಪಂದ್ಯಾವಳಿಯ ಪಂದ್ಯಗಳು ಇದೇ 2022ರ ಡಿಸೆಂಬರ್ 6ರಿಂದ ಆರಂಭವಾಗಿ ಡಿಸೆಂಬರ್ 17ರವರೆಗೆ ಭಾರತದಲ್ಲಿ ನಡೆಯಲಿವೆ.

ಅಂಧರ 3ನೇ ಟಿ20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ, ಆಸ್ಟೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶದ ತಂಡಗಳು ಭಾಗವಹಿಸಲಿವೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಹಾಗೂ ನೇಪಾಳ ತಂಡಗಳ ನಡುವೆ 2022ರ ಡಿಸೆಂಬರ್ 6ರಂದು ಪಂದ್ಯಾವಳಿಯ ಉದ್ಘಾಟನಾ ಪಂದ್ಯ (ಮೊದಲ ಪಂದ್ಯ) ನಡೆಯಲಿದೆ.

Tap to resize

Latest Videos

Team India: ದೇಶದ ಪರವಾಗಿ ಆಡಿದ್ದ ಕ್ರಿಕೆಟಿಗ ಇಂದು ಹಣಕ್ಕಾಗಿ ಎಮ್ಮೆ ಸಾಕ್ತಿದ್ದಾರೆ!

ಒಬ್ಬ ಬ್ರಾಂಡ್ ರಾಯಭಾರಿಯಾಗಿ ಅಂಧರ 3ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಒಂದು ಭಾಗವಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ ಎಂದು ಭಾರತದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.  ದೃಷ್ಟಿ ವಿಕಲಚೇತನ ಕ್ರಿಕೆಟಿಗರು ಕ್ರಿಕೆಟ್ ಆಟದ ಬಗ್ಗೆ ಹೊಂದಿರುವ ಪ್ರೀತಿ, ಬದ್ಧತೆ ಹಾಗೂ ಪ್ಯಾಷನ್ ಅನ್ನು ಕಂಡು ಪ್ರಶಂಸೆ ಮಾಡಲೇಬೇಕು ಎಂದೆನಿಸಿದೆ. ಅಲ್ಲದೆ ಅವರು ನಿತ್ಯ ಜೀವನದ ಸವಾಲುಗಳನ್ನು ಮೆಟ್ಟಿನಿಂತು ಇಂತಹ ಸಾಧನೆ ತೋರುತ್ತಿರುವುದು ಶ್ಲಾಘನೀಯ ಎಂದರು.

ಇದೊಂದು ವಿಭಿನ್ನವಾಗಿರುವ ಜಗತ್ತು. ಆದರೆ ಇದು ಕ್ರಿಕೆಟಿನ ಜಗತ್ತು. ಕ್ರಿಕೆಟ್‌ಗೆ ಯಾವುದೇ ಎಲ್ಲೆಗಳಿಲ್ಲ. ಈ ಆಟ ನನಗೆ, ಹೋರಾಟದ ಮನೋಭಾವವನ್ನು ಕಲಿಸಿದೆ ಎಂಬುದು ನನ್ನ ನಂಬಿಕೆಯಾಗಿದೆ. ಹಾಗೇ ಜೀವನದಲ್ಲಿ ಬೀಳುವುದು, ಧೂಳಿನಿಂದ ಮತ್ತೆ ಕೊಡವಿಕೊಂಡು ಮೇಲೆದ್ದು ಬರುವುದು, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಪಾಠವನ್ನು ಈ ಕ್ರೀಡೆ ನನಗೆ ಕಲಿಸಿಕೊಟ್ಟಿದೆ. ಹೀಗಾಗಿ ಈ ಒಂದು ಅತ್ಯದ್ಭುತ ಕ್ರೀಡಾಕೂಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ನಾನು ಈ ಮೂಲಕ ಮನವಿ ಮಾಡುತ್ತೇನೆ ಮತ್ತು ಕ್ರೀಡಾಕೂಟಕ್ಕೆ ಆಹ್ವಾನವನ್ನು ಕೂಡ ನೀಡುತ್ತಿದ್ದೇನೆ ಎಂದು ಯುವಿ ಹೇಳಿದರು.

ಕ್ರಿಕೆಟಿನಿಂದಲೇ ಕಣ್ಣು ಕಳೆದುಕೊಂಡವನು ಅಂಧರ ಕ್ರಿಕೆಟ್ ತಂಡದ ಕ್ಯಾಪ್ಟನ್!

ಈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ಸಮರ್ಥನಂ ಅಂಗವಿಕಲರ ಸಂಸ್ಥೆಯ ಒಂದು ಮಹತ್ವಾಕಾಂಕ್ಷಿ ಕ್ರೀಡಾ ಚಟುವಟಿಕೆಯಾಗಿದ್ದು, ಸಮರ್ಥನಂ ಸಂಸ್ಥೆಯು 2012ರಿಂದಲೂ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಮರ್ಥನಂ ಸಂಸ್ಥೆಯು ಎಲ್ಲರನ್ನೂ ಒಂದುಗೂಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸದೃಢವಾಗಿಸುವ ಹಾಗೂ ವಿವಿಧ ರೀತಿಯ ಅಂಗ ವಿಕಲತೆಗಳನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗೆ ಉತ್ತೇಜನ ನೀಡುವ ಒಂದು ಮಾಧ್ಯಮವಾಗಿ ಕ್ರೀಡೆಯನ್ನು ಪರಿಗಣಿಸಿದೆ. ಹಾಗೇ, ಸಂಸ್ಥೆಯು ಆರಂಭವಾದಾಗಿನಿಂದ ಇದುವರೆಗೆ ಸುಮಾರು25,000ಕ್ಕೂ ಹೆಚ್ಚಿನ ಸಂಖ್ಯೆಯ ದೃಷ್ಟಿ ವಿಕಲಚೇತನ ಕ್ರಿಕೆಟಿಗರನ್ನು ತಲುಪಿದೆ ಎಂಬುದು ಗಮನಿಸಬೇಕಾದ ಅಂಶ.

ಯುವರಾಜ್ ಸಿಂಗ್ ಅವರನ್ನು ಅಂಧರ 3ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿ ಹೊಂದಿರುವ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡ ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾದ ಅಧ್ಯಕ್ಷರು ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾಗಿರುವ ಡಾ. ಮಹಾಂತೇಶ್ ಜಿ.ಕೆ. ಅವರು, “ಅಂಧರ ಕ್ರಿಕೆಟ್ ಕುಟುಂಬಕ್ಕೆ ಯುವರಾಜ್ ಸಿಂಗ್ ಅವರನ್ನು ಸ್ವಾಗತಿಸಲು ನಮಗೆ ಹೆಮ್ಮೆ ಎನಿಸುತ್ತಿದೆ. ಅವರ ಸಾಟಿಯಿಲ್ಲದ ಸಾಮರ್ಥ್ಯ ಮತ್ತು ಧೈರ್ಯ, ನಿಖರತೆ, ನೈಜತೆ, ಸತ್ಯ, ಹೋರಾಟದ ಕಿಚ್ಚು ಮತ್ತು ಯಾರೊಂದಿಗೂ ಹೋಲಿಕೆ ಮಾಡಲಾಗದ ಗುಣಮಟ್ಟದ ಬಗ್ಗೆ ಅವರು ಹೊಂದಿರುವ ಬದ್ಧತೆ ಸಿಎಬಿಐನ ಬ್ರಾಂಡ್ ಮೌಲ್ಯಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ,” ಎಂದು ಹೇಳಿದರು.

ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯು 56 ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಜುಲೈ ಮಾಹೆಯಲ್ಲಿ ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಅಗತ್ಯ ತರಬೇತಿ ನೀಡಿತ್ತು. ಬಳಿಕ ಆಯ್ಕೆ ಸಮಿತಿಯಿಂದ ಮೌಲ್ಯಮಾಪನ ನಡೆಸಿ 29 ಆಟಗಾರರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ಆಟಗಾರರು, 12 ದಿನಗಳ ಕಾಲ ಭೋಪಾಲ್‌ನಲ್ಲಿ ಕಠಿಣ ಕ್ರಿಕೆಟ್ ತರಬೇತಿ ಮತ್ತು ದೈಹಿಕ ಸದೃಢತೆಯ ಮೌಲ್ಯಮಾಪನಕ್ಕೆ ಒಳಪಟ್ಟರು. ಈ ಎಲ್ಲ ಹಂತಗಳ ಬಳಿಕ ಪ್ರಸ್ತುತ ಆಯ್ಕೆ ಸಮಿತಿಯು, ಅಂಧರ 3ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ 17 ಆಟಗಾರರನ್ನು ಒಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದೆ. ಈ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಒಟ್ಟು 24 ಪಂದ್ಯಗಳು ಇರಲಿದ್ದು, ಅವೆಲ್ಲ ಪಂದ್ಯಗಳು ಭಾರತದ ವಿವಿಧ ನಗರಗಳಲ್ಲಿ ನಡೆಯಲಿವೆ.

click me!