ಪಾಕ್ ಬ್ಯಾಟರ್ ಶಾನ್ ಮಸೂದ್ ತಲೆಗೆ ಅಪ್ಪಳಿಸಿದ ಚೆಂಡು, ಆಸ್ಪತ್ರೆಗೆ ದಾಖಲು..! ಪಾಕ್ ತಂಡ ಕಂಗಾಲು

Published : Oct 21, 2022, 04:20 PM IST
ಪಾಕ್ ಬ್ಯಾಟರ್ ಶಾನ್ ಮಸೂದ್ ತಲೆಗೆ ಅಪ್ಪಳಿಸಿದ ಚೆಂಡು, ಆಸ್ಪತ್ರೆಗೆ ದಾಖಲು..! ಪಾಕ್ ತಂಡ ಕಂಗಾಲು

ಸಾರಾಂಶ

ಭಾರತ ಎದುರಿನ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಶಾಕ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಶಾನ್ ಮಸೂದ್‌ಗೆ ಗಾಯ ತಕ್ಷಣವೇ ಸ್ಕ್ಯಾನ್‌ ಮಾಡಿಸಲು ಶಾನ್‌ ಮಸೂದ್ ಆಸ್ಪತ್ರೆಗೆ ಶಿಫ್ಟ್

ಮೆಲ್ಬರ್ನ್‌(ಅ.21): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪಾಕಿಸ್ತಾನ ತಂಡದ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಪಾಕಿಸ್ತಾನದ ಅಗ್ರಶ್ರೇಯಾಂಕಿತ ಬ್ಯಾಟರ್ ಶಾನ್ ಮಸೂದ್, ಶುಕ್ರವಾರವಾದ ಇಂದು ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ಚೆಂಡೊಂದು ಅವರ ತಲೆಗೆ ಅಪ್ಪಳಿಸಿದ್ದು, ತಕ್ಷಣವೇ ಸ್ಕ್ಯಾನ್‌ ಮಾಡಿಸಲು ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ನವಾಜ್ ಅವರ ಬ್ಯಾಟಿಂದ ಚಿಮ್ಮಿದ ಚೆಂಡು, ನೇರವಾಗಿ ಶಾನ್ ಮಸೂದ್ ತಲೆಗೆ ಅಪ್ಪಳಿಸಿದೆ. 

ನೆಟ್ಸ್‌ನಲ್ಲಿ 33 ವರ್ಷದ ಶಾನ್ ಮಸೂದ್, ಬ್ಯಾಟಿಂಗ್ ಅಭ್ಯಾಸ ಮಾಡಲು ರೆಡಿಯಾಗಿ ಪ್ಯಾಡ್ ಕಟ್ಟಿಕೊಂಡು ಹೆಲ್ಮೆಟ್ ಧರಿಸದೇ ನಿಂತಿದ್ದರು. ಆದರೆ ಸ್ಪಿನ್ ಬೌಲಿಂಗ್ ಎದುರಿಸುತ್ತಿದ್ದ ಮೊಹಮ್ಮದ್ ನವಾಜ್, ಜೋರಾಗಿ ಬಾರಿಸಿದ ಚೆಂಡು ನೇರವಾಗಿ ಮಸೂದ್ ಅವರಿಗೆ ಬಡಿದಿದೆ. ಚೆಂಡು ಬಡಿದ ರಬಸಕ್ಕೆ ಅಲ್ಲೇ ಕುಸಿದುಬಿದ್ದ ಮಸೂದ್ ಅವರನ್ನು ತಕ್ಷಣದಲ್ಲೆ ಇದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನಡೆಸಿದ್ದಾರೆ. 

ಶಾನ್ ಮಸೂದ್ ಅವರ ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಉಪನಾಯಕ ಶದಾಬ್ ಖಾನ್, ಅವರ ತುಂಬಾ ಸೂಕ್ಷ್ಮವಾದ ಭಾಗಕ್ಕೆ ಚೆಂಡು ಬಡಿದಿದೆ. ಸದ್ಯಕ್ಕೆ ಅವರ ಪರಿಸ್ಥಿತಿ ಹೇಗಿದೆ ಎಂದು ನನಗೆ ಗೊತ್ತಿಲ್ಲ. ಆದರೆ ನಮ್ಮ ಫಿಸಿಯೋಗಳು ನಡೆಸಿದ ಟೆಸ್ಟ್ ಪಾಸ್ ಮಾಡಿದ್ದಾರೆ. ಈಗ ಗಾಯದ ತೀವ್ರತೆ ತಿಳಿಯಲು ಸ್ಕ್ಯಾನ್‌ ಮಾಡಿಸಲು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ ಎಂದು ಶಾದಾಬ್ ಖಾನ್ ಹೇಳಿದ್ದಾರೆ. 

T20 World Cup ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸುವ ಬ್ಯಾಟರ್‌ ಬಗ್ಗೆ ಭವಿಷ್ಯ ನುಡಿದ ಸೆಹ್ವಾಗ್..!

ಶಾನ್ ಮಸೂದ್‌, ಇದೇ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ದ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ವಿರುದ್ದದ ಎಲ್ಲಾ 7 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದ ಶಾನ್ ಮಸೂದ್, ಎರಡು ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.  ಆದರೆ ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಶಾನ್ ಮಸೂದ್ ರನ್ ಗಳಿಸಲು ಪರದಾಡಿದ್ದರು. ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಈ ಬಾರಿ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ, ಭಾರತದ ಎದುರು ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಸೋಲು, ಗ್ರೂಪ್‌ ಹಂತದಲ್ಲೇ ಟೀಂ ಇಂಡಿಯಾವನ್ನು ಹೊರಬೀಳುವಂತೆ ಮಾಡಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಬಾಬರ್ ಅಜಂ ಪಡೆಗೆ ತಿರುಗೇಟು ನೀಡಲು ಸಜ್ಜಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?