
ಕಿಡಿ ಹೊತ್ತಿಸಿದವನು ಒಬ್ಬ. ಆ ಕಿಡಿ ಕಾಡ್ಗಿಚ್ಚಾಗಿ ಸುಟ್ಟು ಭಸ್ಮವಾದವನು ಮತ್ತೊಬ್ಬ. 6, 6, 6, 6, 6, 6. ‘ಬ್ಯಾಟ್’ನಿಂದ ಹೊಡೆಯುತ್ತೇನೆ’ ಎಂದವನು ಹೊಡೆದೇ ಬಿಟ್ಟಿದ್ದ.. ಅದು ಹೊಡೆತವಲ್ಲ.. ಪ್ರಹಾರ.. ಯುವರಾಜನ ತೋಳ್ಬಲದ ತಾಕತ್ತಿನ ವಜ್ರಮುಷ್ಠಿ ಪ್ರಹಾರ.
2007 ಮೊಟ್ಟ ಮೊದಲ ಟಿ20 ವಿಶ್ವಕಪ್ ಟೂರ್ನಿ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯ ಸಮಬಲಗೊಂಡು ಭಾರತ ಬಾಲ್ ಔಟ್’ನಲ್ಲಿ ಗೆದ್ದಿತ್ತು. 3ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು. ಸೆಮಿಫೈನಲ್ ತಲುಪಬೇಕೆಂದರೆ ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಿತ್ತು..
ಇವತ್ತಿಗೆ ಸರಿಯಾಗಿ 19 ವರ್ಷಗಳ ಹಿಂದೆ. ದಕ್ಷಿಣ ಆಫ್ರಿಕಾದ ಡರ್ಬನ್’ನ ಕಿಂಗ್ಸ್’ಮೀಡ್ ಮೈದಾನ. 17ನೇ ಓವರ್’ನ 4ನೇ ಎಸೆತದಲ್ಲಿ ರಾಬಿನ್ ಉತ್ತಪ್ಪ ಔಟಾಗುತ್ತಿದ್ದಂತೆ ಅಖಾಡಕ್ಕಿಳಿದವನು ಯುವರಾಜ್ ಸಿಂಗ್. 20 ಎಸೆತಗಳ ಆಟವಷ್ಟೇ ಬಾಕಿಯಿತ್ತು. ಪಂದ್ಯದ 18ನೇ ಓವರ್. ಬೌಲಿಂಗ್ ತುದಿಯಲ್ಲಿದ್ದವನು ಇಂಗ್ಲೆಂಡ್ ಆಲ್ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್. 4 ಮತ್ತು 5ನೇ ಎಸೆತದಲ್ಲಿ ಫ್ಲಿಂಟಾಫ್’ಗೆ ಎರಡು ಬೌಂಡರಿ ಬಾರಿಸಿಬಿಟ್ಟ ಯುವರಾಜ. ಫ್ಲಿಂಟಾಫ್ ಉರಿದು ಬಿದ್ದ..ಯುವರಾಜನ ಜೊತೆ ಒಂದು ಸಣ್ಣ ಮಾತಿನ ಚಕಮಕಿ.
ಫ್ಲಿಂಟಾಫ್: "Those were f***ing ridiculous shots"
ಯುವರಾಜ್: "F*** you"*
ಫ್ಲಿಂಟಾಫ್: "Excuse me?"
ಯುವರಾಜ್: "ನಾನು ಹೇಳಿದ್ದು ನಿನಗೆ ಕೇಳಿಸಿದೆ"
ಫ್ಲಿಂಟಾಫ್: "ನಾನು ನಿನ್ನ ಕೊರಳನ್ನು ಸೀಳುತ್ತೇನೆ"
ಯುವರಾಜ್: "ನನ್ನ ಕೈಯಲ್ಲಿರುವ ಬ್ಯಾಟ್ ನಿನ್ನ ಕಣ್ಣಿಗೆ ಕಾಣಿಸುತ್ತಿದೆಯಲ್ಲವೇ? ಈ ಬ್ಯಾಟ್’ನಿಂದ ಎಲ್ಲಿಗೆ ಹೊಡೆಯುತ್ತೇನೆ ಗೊತ್ತಾ ನಿನಗೆ?"
ಕೊಟ್ಟದ್ದನ್ನು ಬಡ್ಡಿ ಸಮೇತ ವಾಪಸ್ ಕೊಡುವ ದಾದಾ ಗಂಗೂಲಿ ಗರಡಿಯಲ್ಲಿ ಪಳಗಿ ಬಂದಿದ್ದ ಯುವಕ. ಫ್ಲಿಂಟಾಫ್’ಗೆ ಅವನದ್ದೇ ಭಾಷೆಯಲ್ಲಿ ಉತ್ತರ ಕೊಟ್ಟಿದ್ದ ಯುವರಾಜ.
‘‘ನಿನ್ನ ಕೊರಳನ್ನು ಸೀಳಿ ಬಿಡುತ್ತೇನೆ’’. ಯುವರಾಜನನ್ನು ಬೆಂಕಿಯಾಗಿಸಿದ್ದು ಇದೊಂದು ಮಾತು. ದೇಶಕ್ಕೆ ಅತೀ ಹೆಚ್ಚು ಸೈನಿಕರನ್ನು ಕೊಟ್ಟ ನೆಲದಿಂದ ಬಂದ ಯೋಧ ಅವನು.. ಕ್ರಿಕೆಟ್ ಯೋಧ. ಯುವಿ ಧಗಧಗಿಸಿಬಿಟ್ಟ. ಕಿಡಿ ಹೊತ್ತಿಸಿದವನು ಫ್ಲಿಂಟಾಫ್.. ಆ ಕಿಡಿ ಕಾಡ್ಗಿಚ್ಚಾಗಿ ಅದರಲ್ಲಿ ಸುಟ್ಟು ಭಸ್ಮವಾದವನು ಕ್ರಿಸ್ ಬ್ರಾಡ್. ಫ್ಲಿಟಾಂಫ್ ಕೆಣಕಿದ್ದ. ಯುವರಾಜ ಕೆರಳಿದ್ದ. ಆದರೆ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಬಾರಿಸುವ ಯೋಚನೆಯಂತೂ ಅವನಿಗೆ ಇರಲಿಲ್ಲ.. ‘‘ತನ್ನ ತಾಕತ್ತನ್ನು ತೋರಿಸುತ್ತೇನೆ ಇವನಿಗೆ’’ ಎಂಬಂತೆ ನಿಂತಿದ್ದ ಅಷ್ಟೇ. ಆದರೆ. ಡರ್ಬನ್’ನ ಕಿಂಗ್ಸ್’ಮೀಡ್ ಮೈದಾನದಲ್ಲಿ ತಾಕತ್ತು ತೋರಿಸಲು ನಿಂತವನು ಇತಿಹಾಸವನ್ನೇ ನಿರ್ಮಿಸಿಬಿಟ್ಟ. 26ರ ಯುವರಾಜನ ಮುಂದೆ 21ರ ಸ್ಟುವರ್ಟ್ ಬ್ರಾಡ್. ಸಿಂಹವೊಂದು ಜಿಂಕೆಯ ಮೇಲೆ ಎರಗಿದಂತಿತ್ತು ಆ ದೃಶ್ಯ. ಆರಕ್ಕೆ ಆರೂ ಎಸೆತಗಳನ್ನು ಸೀಮಾರೇಖೆಯ ಗಡಿ ದಾಟಿಸಿ ಬಿಟ್ಟ ಯುವಿ..
ಮೊದಲ ಎಸೆತ: ಡೀಪ್ ಮಿಡ್ ವಿಕೆಟ್’ನಲ್ಲಿ ಸಿಕ್ಸರ್
2ನೇ ಎಸೆತ: ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್’ನಲ್ಲಿ ಸಿಕ್ಸರ್
3ನೇ ಎಸೆತ: ಎಕ್ಸ್’ಟ್ರಾ ಕವರ್’ನಲ್ಲಿ ಸಿಕ್ಸರ್
4ನೇ ಎಸೆತ: ಬ್ಯಾಕ್ವರ್ಡ್ ಪಾಯಿಂಟ್’ನಲ್ಲಿ ಸಿಕ್ಸರ್
5ನೇ ಎಸೆತ: ಸ್ಕ್ವೇರ್ ಲೆಗ್’ನಲ್ಲಿ ಸಿಕ್ಸರ್ ಸಿಕ್ಸರ್
6ನೇ ಎಸೆತ: ಲಾಂಗ್ ಆನ್’ನಲ್ಲಿ ಸಿಕ್ಸರ್
ಆ ಕ್ಷಣದವರೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಬಾರಿಸಿದವರಿರಲಿಲ್ಲ. 19 ವರ್ಷಗಳ ಹಿಂದೆ ಯುವರಾಜ್ ಸಿಂಗ್ ಬರೆದದ್ದು ಅದುವರೆಗೆ ಯಾರೂ ಮಾಡಲಾಗದ ವಿಶ್ವದಾಖಲೆ. ಯುವಿ ಆ ಪರಿ ರೊಚ್ಚಿಗೇಳಲು ಕಾರಣ ಆ್ಯಂಡ್ರ್ಯೂ ಫ್ಲಿಂಟಾಫ್ ನಿಜ.. ಆದರೆ ಆ ರೋಷಾವೇಶದ ಹಿಂದೆ ಅವಮಾನದ ಕಥೆಯಿದೆ..
14 ದಿನಗಳ ಹಿಂದೆ ನಡೆದ ಘಟನೆಯದು. ಇಂಗ್ಲೆಂಡ್’ನ ಓವಲ್ ಮೈದಾನದಲ್ಲಿ ಭಾರತ 317 ರನ್ ಗುರಿ ಬೆನ್ನಟ್ಟಿ ಗೆದ್ದ ಪಂದ್ಯ ನೆನಪಿರಬೇಕು ನಿಮಗೆ.. ರಾಬಿನ್ ಉತ್ತಪ್ಪನ ವೀರಾವೇಶದ 47 ರನ್’ಗಳ ಇನ್ನಿಂಗ್ಸ್ ಭಾರತವನ್ನು ಗೆಲ್ಲಿಸಿತ್ತು. ಅದೇ ಪಂದ್ಯ. ಯುವರಾಜ ಒಂದೇ ಓವರ್’ನಲ್ಲಿ ಐದು ಸಿಕ್ಸರ್’ಗಳನ್ನು ಚಚ್ಚಿಸಿಕೊಂಡಿದ್ದ. ಹೊಡೆದವನು ಇಂಗ್ಲೆಂಡ್ ಆಲ್ರೌಂಡರ್ ಡಿಮಿಟ್ರಿ ಮಸ್ಕರೇನ್ಹಸ್. ಇಂಗ್ಲೆಂಡ್ ಇನ್ನಿಂಗ್ಸ್’ನ ಕೊನೆಯ ಓವರ್’ನಲ್ಲಿ ಅಂತಿಮ ಐದು ಎಸೆತಗಳನ್ನು ಮಸ್ಕರೇನ್ಹಸ್ ಸಿಕ್ಸರ್’ಗಟ್ಟಿದ್ದ. ಆ ಸೇಡನ್ನು ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತೀರಿಸಿಕೊಳ್ಳುವ ಹೊತ್ತಿಗೆ, ಕಿಂಗ್ಸ್’ಮೀಡ್ ಮೈದಾನದಲ್ಲಿ ಯುವಿ ಪರಾಕ್ರಮಕ್ಕೆ ಮೂಕಸಾಕ್ಷಿಯಾಗಿ ನಿಂತಿದ್ದ ಡಿಮಿಟ್ರಿ ಮಸ್ಕರೇನ್ಹಸ್. ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳ ವಿಶ್ವದಾಖಲೆಯ ಜೊತೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗದ ಅರ್ಧಶತಕದ ವಿಶ್ವದಾಖಲೆ. 12 ಎಸೆತಗಳಲ್ಲಿ 50 ರನ್. 19 ವರ್ಷಗಳ ಹಿಂದೆ ಯುವರಾಜ ಬರೆದ ಆ ವಿಶ್ವದಾಖಲೆಯನ್ನು ಐಸಿಸಿಯ ಪೂರ್ಣ ಸದಸ್ಯತ್ವ ಪಡೆದ ದೇಶಗಳ ಪೈಕಿ ಈವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.