Latest Videos

ಪಾನಿಪುರಿ‌ಯಿಂದ ಸೆಂಚುರಿವರೆಗೆ! ಭಾರತದ ಕ್ರಿಕೆಟ್ ತಂಡಕ್ಕೆ ಸಿಕ್ಕಿದ ಯಶಸ್ವಿ ಎಂಬೊಂದು ನಕ್ಷತ್ರ

By Suvarna NewsFirst Published Jul 14, 2023, 11:28 AM IST
Highlights

ಎಲ್ಲಿಂದಲೋ ಬಂದು, ಏನೇನೋ ಸಾಧಿಸುವವರು ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಪಾನಿಪುರಿ ಮಾರುವ ಹುಡುಗನ ಯಶೋಗಾಥೆ ಕೇಳಿದರೆ ಎಲ್ಲರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟದೇ ಇರದು. 

-ಮುನ್ನವರ್ ಅಗಸನಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್
 
ಅವನ ದಾರಿ ಸುಲಭವಂತೂ ಇರಲೇ ಇಲ್ಲ. ಆದ್ರೆ ಅವನ ಗುರಿ ಅಚಲವಾಗಿತ್ತು, ಅದನ್ನ ಈಗ ಸಾಧಿಸುವಲ್ಲಿ ಈ ಹುಡುಗ 'ಯಶಸ್ವಿ'ಯಾಗಿದ್ದಾನೆ..
ನಾ ಯಾರ ಬಗ್ಗೆ ಹೇಳ್ತಾ ಇದ್ದೆನೆ ಅಂತ ಗೊತ್ತಾಗಿರಬೇಕಲ್ವಾ..? ಕಷ್ಟವನ್ನೇ ತನ್ನ ಮೆಟ್ಟಿಲಾಗಿಸಿಕೊಂಡು ಉತ್ತುಂಗಕ್ಕೇರಿದ್ದಾರೆ ಯಶಸ್ವಿ ಜೈಸ್ವಾಲ್. ಭಾರತದ ಭವಿಷ್ಯದ ತಾರೆ. ಪ್ರಸ್ತುತ ವೆಸ್ಟ್ ಇಂಡಿಸ್‌‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಾದಾರ್ಪಣೆ ಪಂದ್ಯದಲ್ಲೆ ಶತಕ ಬಾರಿಸಿ, ನಾನು ಟೀಮ್ ಇಂಡಿಯದ ಭವಿಷ್ಯದ ತಾರೆ ಎಂದು ಬ್ಯಾಟ್‌ನಿಂದಲೇ ಇಡೀ ಜಗತ್ತಿಗೆ ಹೇಳಿದ್ದಾನೆ. ಆದ್ರೆ ಯಶಸ್ವಿ ಬೆಳೆದು ಬಂದ ಹಾದಿಯೇ ಒಂದು ರೋಚಕ ಕಥೆ.

ಪಾನಿಪೂರಿ ಮಾರಿ ಜೀವನ ಮಾಡುತ್ತಿದ್ದ ಪೋರ ಇಂದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಮುಂಬೈನ ಕಲಬಾದೇವಿ ಎಂಬ ಸ್ಥಳ. ಹಳೆಯ ಪುಸ್ತಕಗಳನ್ನು ಮಾರುವ ಸಣ್ಣ ಗಲ್ಲಿ ಅದು. ಅಲ್ಲೊಂದು ಚಿಕ್ಕದೊಂದು ದನದ ಕೊಟ್ಟಿಗೆ. ಅಲ್ಲಿ ಇದ್ದದ್ದು ಬಳಲಿ ಬೆಂಡಾಗಿದ್ದ ಬಾಲಕ. ತೊಟ್ಟು ನೀರಿನಿಂದಲೇ ಜೀವನ. ಒಂದು ದಿನ ಆ ದನದ ಕೊಟ್ಟಿಗೆ ಮಾಲೀಕ ಪೋರನ ಮೇಲೆ ನೀರೆರಚಿ ರಸ್ತೆಗೆ ಬಿಸಾಡುತ್ತಾನೆ. ಪುಟ್ಟ ಲಗೇಜ್ ಅನ್ನು ಮುಖಕ್ಕೆ ಎಸೆದು ಬಿಡುತ್ತಾನೆ. ಆಗಿನ್ನೂ ಆ ಹುಡುಗನಿಗೆ 13 ವರ್ಷ. ಅಂದಿನ ಮಟ್ಟಿಗೆ ವಿಧಿ ಕ್ರೂರವಾಗಿತ್ತು. ಯಾರಿಗೂ ಬೇಡ ಅಂದಿನ ನರಕದ ರಾತ್ರಿ. ಊಟವಿಲ್ಲ, ಯಾರೂ ಕೇಳುವವರಿಲ್ಲ. ರಾತ್ರಿ ಪೂರ್ತಿ ನಿದ್ದೆ ಇಲ್ಲ. ಮುಂಜಾನೆಯ ಸೂರ್ಯನ ಕಿರಣಗಳಿಗೆ ಕಾದು ಕುಳಿತಿದ್ದ ಆ ಬಾಲಕ. ಬೆಳಗಾದ ಕೂಡಲೇ ಅಲ್ಲಿಂದ ಹೋಗಿದ್ದು, ಮುಂಬೈನ ಆಜಾದ್ ಗ್ರೌಂಡ್‌ಗೆ!

ಪಾನಿಪುರಿ ಮಾರುತ್ತಿದ್ದವ ಈಗ ಭಾರತ ಕ್ರಿಕೆಟಿಗ!

ಆತ ಬೇರೆ ಯಾರೂ ಅಲ್ಲ, ಅಂಡರ್-19 ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಮತ್ತು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರನಾಗಿ ಧೂಳೆಬ್ಬಿಸಿ ಈಗ ಭಾರತದ ಪರ ಟೆಸ್ಟ್ ಆಡುತ್ತಿರುವ ಯಶಸ್ವಿ ಜೈಸ್ವಾಲ್. ಹುಟ್ಟೂರು ಮುಂಬೈ ಇಲ್ಲ, ಉತ್ತರ ಪ್ರದೇಶದ ಬದೋಹಿ. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಪಾನಿ ಪೂರಿ ಮಾರುವುದು ತಂದೆಯ ಕಸುಬು. ಒಂದೆಡೆ ಮಗನಿಗೆ ಕ್ರಿಕೆಟ್ ಅಂದರೆ ಹುಚ್ಚು. ಟೀಮ್ ಇಂಡಿಯಾಗೆ ಸೇರಬೇಕೆಂಬ ಕನಸು. ಇದೇ ಕಾರಣದಿಂದ ತಂದೆಯ ಗೆಳೆಯನೊಂದಿಗೆ ಮುಂಬೈಗೆ ಬಂದಿದ್ದ. ಅವರ ಅನುಮತಿ ಮೇರೆಗೆ ಕೇವಲ ಮಲಗಲು ದನದ ಕೊಟ್ಟಿಗೆ ಮಾಲೀಕ ಒಪ್ಪುತ್ತಾನೆ. ಆದರೆ, ಯಾವುದೇ ಕೆಲಸ ಮಾಡದ ಕಾರಣ ಅವನನ್ನು ಮಾಲೀಕ ಹೊರ ದಬ್ಬುತ್ತಾನೆ. ಆದರೆ ಇವೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಯಾವತ್ತೂ ಯಶಸ್ವಿ ತಂದೆಗೆ ಹೇಳಿರಲಿಲ್ಲ. ಹೇಳಿ ಬಿಟ್ಟರೆ ಮತ್ತೆ ವಾಪಸ್ ಬರುವಂತೆ ಹೇಳುತ್ತಾರೆ ಎಂಬ ಭಯ. ಆಗಾಗ ಅಪ್ಪ ಕಳುಹಿಸುತ್ತಿದ್ದ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಅಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ಯಶಸ್ವಿ, ಶತಕ ಬಾರಿಸದೇ ಮಲಗಿದ್ದೇ ಇಲ್ಲ. ಅವನಿಗಿಂತ ಹಿರಿಯ ಆಟಗಾರರು ತಂಡಕ್ಕೆ ಕರೆಯಿಸಿಕೊಂಡು ಶತಕ ಹೊಡೆದರೆ 200 ರೂಪಾಯಿ ಕೊಡ್ತೇವೆ ಎಂದು ಹೇಳಿದ್ದರಂತೆ. ಹಾಗಾಗಿ ಶತಕ ಸಿಡಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದ.

ಹೀಗೇ ಅಮೋಘ ಆಟವಾಡುತ್ತಿದ್ದ ಜೈಸ್ವಾಲ್ ಬಿದ್ದದ್ದು ಲೋಕಲ್‌ ಕೋಚ್ ಜ್ವಾಲಾ‌ ಸಿಂಗ್ ಅವರ ಕಣ್ಣಿಗೆ. ಜೈಸ್ವಾಲ್ ಬ್ಯಾಟಿಂಗ್ ಕಥೆ ಕೇಳಿದ ಕೋಚ್, ಆಟ ನೋಡಿ ದಂಗಾಗಿ ಹೋಗಿದ್ದರು. ಜೈಸ್ವಾಲ್‌ ಅವರಲ್ಲಿ ತನ್ನನ್ನ ತಾನೇ ಕಂಡೆ ಎಂದಿದ್ದರು ಕೋಚ್. ಜ್ವಾಲಾ ‌ಸಿಂಗ್ ಕೂಡ ಉತ್ತರಪ್ರದೇಶದವರೇ. ಕ್ರಿಕೆಟರ್ ಆಗಬೇಕೆಂಬ ಕನಸಿನೊಂದಿಗೆ ಮುಂಬೈಗೆ ಬಂದಿದ್ದ ಯಶಸ್ವಿಗೆ ಜ್ವಾಲಾ ಸಿಂಗ್ ಅವರೇ ಗಾಡ್ ಫಾದರ್ ಆದರು. ಇಷ್ಟರಮಟ್ಟಿಗೆ ಸಿದ್ಧವಾಗಿದ್ದ ಯುವಕ, ಮುಂಬೈ ಅಂಡರ್ 19 ಕೋಚ್ ಸಂತೋಷ್ ಸಾಮಂತ್ ಗಮನ ಸೆಳೆದಿದ್ದ.

Ind vs WI: ಸೆಹ್ವಾಗ್‌, ವೀವ್ ರಿಚರ್ಡ್ಸ್‌ ದಾಖಲೆ ಸರಿಗಟ್ಟಲು ಸಜ್ಜಾದ ಕೊಹ್ಲಿ

ಆದ್ರೆ ಹಣವಿಲ್ಲದೇ ಯಶಸ್ವಿ ಜೈಸ್ವಾಲ್ ಮೈದಾನದಲ್ಲಿ ಪ್ರೇಕ್ಷಕರಿಗೆ ಪಾನಿಪುರಿ ಮಾರಲು ಪ್ರಾರಂಭಿಸಿದ. ಇದರ ಜೊತೆಗೆ ತಮ್ಮ ಅಭ್ಯಾಸ ಮುಂದುವರೆಸಿದ. ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಿದ್ದ. ಭಾರತಕ್ಕಾಗಿ ಆಡುವ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಯುವಕ, ತನ್ನ 17ನೇ ವಯಸ್ಸಿನಲ್ಲಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಡಲು ಆಯ್ಕೆಯಾದ. ಆ ದಿನದಿಂದ ಯಶಸ್ವಿ ಹಿಂದಿರುಗಿ ನೋಡಲೇ ಇಲ್ಲ. ರಣಜಿ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಇವನದ್ದು. ಇಷ್ಟು ದಿನಗಳ ಶ್ರಮ ಕೊನೆಗೂ ಫಲ ಕೊಟ್ಟಿತ್ತು. ಅಂಡರ್-19 ವಿಶ್ವಕಪ್‌ನಲ್ಲಿ 88, 105*, 62, 57*, 29*, 59 ರನ್ ಗಳಿಸಿದ್ದ. ತಂಡವನ್ನು ಫೈನಲ್‌ವರೆಗೂ ಕೊಂಡೋಯ್ದಿದ್ದ. ನಿಮಗೆ ದಿಟ್ಟ ಗುರಿ, ಗೆಲ್ಲೋ ಜಿದ್ದು ಇದ್ರೆ ಕಂಡಿತ ಯಶಸ್ಸು ಸಿಗುತ್ತೆ ಅನ್ನೋಕೆ ಈ ಯಶಸ್ವಿ ಜೈಸ್ವಾಲ್ ನೋಡಿ ಕಲಿಬೇಕು. ಈಗ ಈ ಎಡಗೈ ದಾಂಡಿಗ ವೆಸ್ಟ್ ಇಂಡಿಸ್ ಬೌಲರ್ಸ್ ಬೆಂಡೆತ್ತುತ್ತಿದ್ದಾನೆ. ಈಗ 150ರ ಸನಿಹದಲ್ಲಿದ್ದು, ಇಂದು 200ಹೊಡೆದು, 300ರನ್ ಬಾರಿಸಲಿ, ಅಲ್ ದಿ ಬೆಸ್ಟ್ ಯಶಸ್ವಿ

click me!