ICC Test Rankings: 11 ಸ್ಥಾನ ಜಿಗಿದ ಯಶಸ್ವಿ ಜೈಸ್ವಾಲ್‌, ಟಾಪ್ 10 ಪಟ್ಟಿಯೊಳಗೆ ರೋಹಿತ್ ಶರ್ಮಾಗೆ ಸ್ಥಾನ..!

By Naveen KodaseFirst Published Jul 26, 2023, 6:19 PM IST
Highlights

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ; ಟೀಂ ಇಂಡಿಯಾ ಆಟಗಾರರಿಗೆ ಜಾಕ್‌ಪಾಟ್
ಟಾಪ್ 10 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಂಡ ನಾಯಕ ರೋಹಿತ್ ಶರ್ಮಾ
ಬೌಲಿಂಗ್ ವಿಭಾಗದಲ್ಲಿ ನಂ.1 ಸ್ಥಾನದಲ್ಲೇ ಮುಂದುವರೆದ ರವಿಚಂದ್ರನ್ ಅಶ್ವಿನ್

ದುಬೈ(ಜು.26): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಇದೀಗ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಆಕರ್ಷಕ ಶತಕ ಚಚ್ಚಿದ್ದ ಯಶಸ್ವಿ ಜೈಸ್ವಾಲ್‌, ಬ್ಯಾಟಿಂಗ್ ಶ್ರೇಯಾಂಕದಲ್ಲೂ ಗಣನೀಯ ಏರಿಕೆ ಕಂಡಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟಾಪ್ 10 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಹೌದು, ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ವಿಂಡೀಸ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ 57&38 ರನ್‌ ಬಾರಿಸಿ ಮಿಂಚಿದ್ದರು. ಇದರೊಂದಿಗೆ ಯಶಸ್ವಿ ಜೈಸ್ವಾಲ್, 11 ಸ್ಥಾನ ಜಿಗಿತ ಕಂಡು ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 63ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 21 ವರ್ಷದ ಎಡಗೈ ಬ್ಯಾಟರ್ ಖಾತೆಯಲ್ಲಿ ಸದ್ಯ 466 ರೇಟಿಂಗ್ ಅಂಕಗಳಿವೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ವಿಂಡೀಸ್ ಎದುರು ಉತ್ತಮವಾಗಿ ರನ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ 103 ರನ್ ಬಾರಿಸಿದ್ದ ಹಿಟ್‌ಮ್ಯಾನ್, ಎರಡನೇ ಟೆಸ್ಟ್ ಪಂದ್ಯದಲ್ಲಿ 80 & 57 ರನ್ ಬಾರಿಸಿದ್ದರು. ಈ ಮೂಲಕ ರೋಹಿತ್ ಶರ್ಮಾ 759 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಶ್ರೀಲಂಕಾದ ಬ್ಯಾಟರ್ ದೀಮುತ್ ಕರುಣರತ್ನೆ ಜತೆಗೆ ಜಂಟಿ 9ನೇ ಸ್ಥಾನ ಹಂಚಿಕೊಂಡಿದ್ದಾರೆ. 

ಅಂತಿಮ ಆ್ಯಷಸ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ನಿವೃತ್ತಿ ಬಗ್ಗೆ ಮೌನ ಮುರಿದ ಜೇಮ್ಸ್ ಆ್ಯಂಡರ್‌ಸನ್..!

ಇನ್ನು ಕಳೆದ ಜನವರಿಯಿಂದಲೂ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಒಂದು ಸ್ಥಾನ ಕುಸಿದು 12ನೇ ಸ್ಥಾನಕ್ಕೆ ಜಾರಿದ್ದಾರೆ. ರಿಷಭ್ ಪಂತ್ ಖಾತೆಯಲ್ಲಿ 743 ರೇಟಿಂಗ್ ಅಂಕಗಳಿವೆ. ಇನ್ನೊಂದೆಡೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ 733 ರೇಟಿಂಗ್ ಅಂಕಗಳನ್ನು ಹೊಂದಿದ್ದು, 14ನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್‌ 883 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. 

ವಿರಾಟ್ ಕೊಹ್ಲಿ ಏಷ್ಯಾದ ಎರಡನೇ ಶ್ರೀಮಂತ ಅಥ್ಲೀಟ್..! ಹಾಗಿದ್ರೆ ಮೊದಲ ಸ್ಥಾನದಲ್ಲಿರೋರು ಯಾರು?

ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ನಂ.1 ಸ್ಥಾನದಲ್ಲೇ ಭದ್ರವಾಗಿ ಮುಂದುವರೆದಿದ್ದಾರೆ. ಅಶ್ವಿನ್‌, 879 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಇನ್ನು ಸಹ ಆಟಗಾರ ರವೀಂದ್ರ ಜಡೇಜಾ 782 ರೇಟಿಂಗ್ ಅಂಕಗಳೊಂದಿಗೆ ಬೌಲಿಂಗ್ ಶ್ರೇಯಾಂಕದಲ್ಲಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನುಳಿದಂತೆ ಆಲ್ರೌಂಡರ್‌ಗಳ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಎಂದಿನಂತೆ ಕ್ರಮವಾಗಿ ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ. ಟೀಂ ಇಂಡಿಯಾದ ಮತ್ತೋರ್ವ ಆಲ್ರೌಂಡರ್ ಅಕ್ಷರ್ ಪಟೇಲ್ ಆಲ್ರೌಂಡರ್‌ ವಿಭಾಗದಲ್ಲಿ 5ನೇ ಸ್ಥಾನದಲ್ಲೇ ಭದ್ರವಾಗಿದ್ದಾರೆ.

click me!