WTC Final: ಅನುಭವಿ ರವಿಚಂದ್ರನ್ ಅಶ್ವಿನ್‌ಗೆ ಸಿಗುತ್ತಾ ಚಾನ್ಸ್‌?

By Naveen KodaseFirst Published Jun 7, 2023, 10:56 AM IST
Highlights

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕ್ಷಣಗಣನೆ
* ಚಾಂಪಿಯನ್ ಪಟ್ಟಕ್ಕಾಗಿ ಭಾರತ-ಆಸ್ಟ್ರೇಲಿಯಾ ನಡುವೆ ಫೈಟ್
* ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಸಿಗುತ್ತಾ ಸ್ಥಾನ

ಲಂಡನ್‌(ಜೂ.07): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. ಇಲ್ಲಿನ ಓವಲ್ ಮೈದಾನದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಇದೆಲ್ಲದರ ನಡುವೆ ಟೆಸ್ಟ್‌ ಕ್ರಿಕೆಟ್‌ನ ಭಾರತದ ನಂ.1 ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌, ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಾರಾ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಭಾರತದ ಬೌಲಿಂಗ್‌ ಸಂಯೋಜನೆ ಬಗ್ಗೆ ಇನ್ನೂ ಕುತೂಹಲ ಮುಂದುವರಿಯಲಿದ್ದು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್‌ ಪಂದ್ಯದ ದಿನ ಬೆಳಗ್ಗೆ ಪಿಚ್‌ ನೋಡಿದ ಮೇಲೆ ಬೌಲರ್‌ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ. ಪಿಚ್‌ನಲ್ಲಿ ಬೌನ್ಸ್‌ ಇರಲಿದ್ದು, ಸ್ಪಿನ್ನರ್‌ಗಳಿಗೆ ನೆರವು ಸಿಗುವ ನಿರೀಕ್ಷೆಯೂ ಇದೆ. 

ಒಂದು ವೇಳೆ ಪಿಚ್‌ ಮೇಲೆ ನಿರೀಕ್ಷೆಗಿಂತ ಹೆಚ್ಚು ಹುಲ್ಲು ಇದ್ದರೆ ಆಗ ಉಮೇಶ್‌ ಯಾದವ್‌ ಬದಲು ಎಡಗೈ ವೇಗಿ ಜಯ್‌ದೇವ್‌ ಉನಾದ್ಕತ್‌ರನ್ನು ಆಡಿಸಬಹುದು ಎನ್ನಲಾಗುತ್ತಿದೆ. ಜಡೇಜಾ ಒಬ್ಬರನ್ನೇ ಆಡಿಸಬೇಕಾ ಅಥವಾ ಅಶ್ವಿನ್‌ಗೂ ಸ್ಥಾನ ನೀಡಬೇಕಾ ಎನ್ನುವುದನ್ನು ತಂಡ ಟಾಸ್‌ಗೂ ಮೊದಲು ನಿರ್ಧರಿಸಲಿದೆ. ಉಳಿದಂತೆ ಮೊಹಮದ್‌ ಶಮಿ ಹಾಗೂ ಮೊಹಮದ್‌ ಸಿರಾಜ್‌ ಮುಂಚೂಣಿ ವೇಗಿಗಳಾಗಿ ಆಡಲಿದ್ದು, ನಾಲ್ವರು ವೇಗಿಗಳಿಗೆ ಸ್ಥಾನ ನೀಡಿದರೆ ಶಾರ್ದೂಲ್‌ ಠಾಕೂರ್‌ ಸಹ ಕಣಕ್ಕಿಳಿಯಬಹುದು.

ಐಪಿಎಲ್‌ ವೇಳೆಯೇ ಟೆಸ್ಟ್‌ ಫೈನಲ್‌ಗೆ ಅಶ್ವಿನ್‌ ಸಿದ್ಧತೆ !

ಆಸ್ಪ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಆರ್‌.ಅಶ್ವಿನ್‌ಗೆ ಆಡುವ ಅವಕಾಶ ಸಿಗಲಿದೆಯೇ ಎನ್ನುವುದು ತಿಳಿದಿಲ್ಲ. ಆದರೆ ಅಶ್ವಿನ್‌ ಮಾತ್ರ ಕಳೆದೊಂದು ತಿಂಗಳಿಂದ ಫೈನಲ್‌ಗಾಗಿ ವಿಶೇಷ ಸಿದ್ಧತೆ ನಡೆಸಿದ್ದಾರೆ. ಐಪಿಎಲ್‌ ವೇಳೆಯೇ ಅಂದರೆ ಮೇ 2ನೇ ವಾರದಿಂದಲೇ ತಮ್ಮ ಜೈವಿಕ ಗಡಿಯಾರವನ್ನು ಲಂಡನ್‌ನ ಸಮಯಕ್ಕೆ ಅನುಸಾರವಾಗಿ ಸಿದ್ಧಪಡಿಸಿಕೊಂಡಿದ್ದಾರೆ. 

WTC Final: ಇಂದಿನಿಂದ ಭಾರತ vs ಆಸೀಸ್‌ ಟೆಸ್ಟ್‌ ವಿಶ್ವಕಪ್‌ ಫೈನಲ್‌

ರಾಜಸ್ಥಾನದ ಪಂದ್ಯಗಳು ಇಲ್ಲದ ದಿನಗಳಂದು ಲಂಡನ್‌ನ ಸ್ಥಳೀಯ ಸಮಯಕ್ಕೆ ತಕ್ಕಂತೆ ಮಗಲುವುದು, ಏಳುವುದು ಮಾಡುತ್ತಿದ್ದರಂತೆ. ಜೊತೆಗೆ ತಮ್ಮ ಆಪ್ತ ಡೇಟಾ ವಿಶ್ಲೇಷಕರಿಂದ, ದಿ ಓವಲ್‌ ಪಿಚ್‌ನಲ್ಲಿ ಸಾಮಾನ್ಯವಾಗಿ ಚೆಂಡು ಎಷ್ಟು ತಿರುವು ಪಡೆಯುತ್ತದೆ. ಪಂದ್ಯದ ಮೊದಲನೇ ದಿನದಿಂದ ಕೊನೆಯ ದಿನದ ವರೆಗೂ ಯಾವ್ಯಾವ ದಿನ ಚೆಂಡು ಎಷ್ಟೆಷ್ಟು ಸ್ಪಿನ್‌ ಆಗುತ್ತದೆ. ಇಂಗ್ಲೆಂಡ್‌ನಲ್ಲಿ ಸ್ಟೀವ್‌ ಸ್ಮಿತ್‌, ಲಬುಶೇನ್‌, ಖವಾಜ ಸೇರಿ ಆಸ್ಪ್ರೇಲಿಯಾದ ಪ್ರಮುಖ ಬ್ಯಾಟರ್‌ಗಳು ಸ್ಪಿನ್‌ ದಾಳಿಯನ್ನು ಎದುರಿಸಲು ಏನೇನು ತಂತ್ರ ಬಳಸಿದ್ದಾರೆ. ಹೀಗೆ ಹಲವು ಮಾಹಿತಿಯನ್ನು ಆಧರಿಸಿ ತಮ್ಮ ಬೌಲಿಂಗ್‌ನಲ್ಲಿ ಬೇಕಿರುವ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯಾಸದ ವೇಳೆ ರೋಹಿತ್‌ಗೆ ಗಾಯ!

ಲಂಡನ್‌: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮಂಗಳವಾರ ನೆಟ್ಸ್‌ ಅಭ್ಯಾಸದ ವೇಳೆ ಎಡಗೈನ ಹೆಬ್ಬೆರಳಿನ ಗಾಯಕ್ಕೆ ತುತ್ತಾದರು. ಕೈಗೆ ಪ್ಲ್ಯಾಸ್ಟರ್‌ ಹಾಕಿದ ಬಳಿಕ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಬ್ಯಾಟ್‌ ಮಾಡಲಿಲ್ಲ. ರೋಹಿತ್‌ರ ಗಾಯದ ಪ್ರಮಾಣ ದೊಡ್ಡದೇನಿಲ್ಲ. ಅವರು ಫೈನಲ್‌ನಲ್ಲಿ ಆಡಲು ಫಿಟ್‌ ಇದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆ ಎಸ್ ಭರತ್‌/ ಇಶಾನ್ ಕಿಶನ್‌, ರವಿಚಂದ್ರನ್ ಅಶ್ವಿನ್‌/ಶಾರ್ದೂಲ್‌ ಠಾಕೂರ್, ಉಮೇಶ್‌ ಯಾದವ್/ಜಯದೇವ್ ಉನಾದ್ಕತ್‌, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌.

ಆಸ್ಪ್ರೇಲಿಯಾ: ಡೇವಿಡ್ ವಾರ್ನರ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಕ್ಯಾಮರೋನ್ ಗ್ರೀನ್‌, ಅಲೆಕ್ಸ್‌ ಕೇರಿ, ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್‌, ಸ್ಕಾಟ್ ಬೋಲೆಂಡ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!