ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಐಪಿಎಲ್‌ನಿಂದ ಹಿಂದೆ ಸರಿದಿದ್ದರ ಬಗ್ಗೆ ತುಟಿಬಿಚ್ಚಿದ ಮಿಚೆಲ್ ಸ್ಟಾರ್ಕ್
ಈ ಹಿಂದೆ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರತಿನಿಧಿಸಿದ್ದ ಮಿಚೆಲ್ ಸ್ಟಾರ್ಕ್
ಲಂಡನ್(ಜೂ.06): ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಜೂನ್ 07ರಿಂದ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ತಾವೇಕೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದಿದ್ದು ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಗುರಿ ಏನು ಎನ್ನುವುದರ ಬಗ್ಗೆಯೂ ತುಟಿ ಬಿಚ್ಚಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, 2014 ಹಾಗೂ 2015ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 27 ಪಂದ್ಯಗಳನ್ನಾಡಿದ್ದ ಸ್ಟಾರ್ಕ್ 34 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 9.4 ಕೋಟಿ ರುಪಾಯಿ ನೀಡಿ ಸ್ಟಾರ್ಕ್ ಅವರನ್ನು ಖರೀದಿಸಿತ್ತು. ಆದರೆ ಕೆಕೆಆರ್ ಫ್ರಾಂಚೈಸಿ ಪರ ಮಿಚೆಲ್ ಸ್ಟಾರ್ಕ್ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ.
ಇದಾದ ಬಳಿಕ 33 ವರ್ಷದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಪ್ರತಿಬಾರಿಯ ಐಪಿಎಲ್ ಟೂರ್ನಿಯನ್ನು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಐಪಿಎಲ್‌ನಿಂದ ಸ್ಟಾರ್ಕ್ ಹೊರಗುಳಿಯುತ್ತಾ ಬಂದಿದ್ದಾರೆ. ಈ ಕುರಿತಂತೆ cricket.com.au ಜತೆ ಮಾತನಾಡಿರುವ ಮಿಚೆಲ್ ಸ್ಟಾರ್ಕ್, "ಐಪಿಎಲ್‌ನಲ್ಲಿ ಸಿಗುವ ಹಣ ಚೆನ್ನಾಗಿಯೇ ಇರುತ್ತೆ, ಆದರೆ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬಾರಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಬೇಕೆಂದಿದ್ದೇನೆ" ಎಂದು ಹೇಳಿದ್ದಾರೆ.
"ಆಸ್ಟ್ರೇಲಿಯಾ ಪರ ದೀರ್ಘಕಾಲ ಆಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದನ್ನು ನಾನು ಆಯ್ಕೆ ಮಾಡಿಕೊಳ್ಳಲು ಮುಂದಾಗಿಲ್ಲ. ಈ ಕುರಿತಾದ ನಾನು ಬುದ್ದಿವಂತಿಕೆಯ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಸ್ಟಾರ್ಕ್ ಹೇಳಿದ್ದಾರೆ. "ಖಂಡಿತವಾಗಿಯೂ, ಐಪಿಎಲ್‌ನಲ್ಲಿ ಸಿಗುವ ಹಣ ಚೆನ್ನಾಗಿಯೇ ಇರುತ್ತೆ. ಆದರೆ ನಾನು 100 ಟೆಸ್ಟ್ ಪಂದ್ಯಗಳನ್ನಾಡಲು ಇಷ್ಟಪಡುತ್ತೇನೆ. ಅದನ್ನು ನಾನು ತಲುಪುತ್ತೇನೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಗುರಿ ತಲುಪುವ ನಿಟ್ಟಿನಲ್ಲಿ ಒಂದು ಪ್ರಯತ್ನವಂತೂ ಮಾಡಿದ್ದೇನೆ ಎನ್ನುವ ತೃಪ್ತಿಯಿರಲಿದೆ. ಇನ್ನೂ ಸ್ವಲ್ಪ ಕ್ರಿಕೆಟ್ ನನ್ನಲ್ಲಿ ಉಳಿದಿದೆ" ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
WTC Final: ಟೆಸ್ಟ್ ಫೈನಲ್‌ಗೆ ಬ್ಯಾಟರ್ ಸ್ನೇಹಿ ಪಿಚ್?
"ಕಳೆದ 10 ವರ್ಷಗಳಿಂದ ಮೂರು ಮಾದರಿಯ ಕ್ರಿಕೆಟ್ ಆಡುತ್ತಿದ್ದೇನೆ, ಈ ಪಯಣದಲ್ಲಿ ಸಾಕಷ್ಟು ನೋವನ್ನು ಎದುರಿಸಿದ್ದೇನೆ, ಆದರೆ ಇದೇ ವೇಳೆ ಈ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ನಾನು ತಂಡಕ್ಕೆ ಶಕ್ತಿ ತುಂಬುವ ಪ್ರಯತ್ನವನ್ನು ಮುಂದುವರೆಸಲಿದ್ದೇನೆ. ನನ್ನ ವೇಗ ಕಮ್ಮಿಯಾಗುತ್ತಿದೆ ಎನಿಸಿದರೆ, ಅಥವಾ ಮತ್ತೆ ಯಾರೋ ಎಡಗೈ ವೇಗಿ ನನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದರೆ, ಖಂಡಿತವಾಗಿಯೂ ಸೂಕ್ತ ಸಮಯ ನೋಡಿ ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಹೇಜಲ್‌ವುಡ್ ಅನುಪಸ್ಥಿತಿಯನ್ನು ಕಾಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೂಡಾ ಇದೀಗ ಮಿಚೆಲ್ ಸ್ಟಾರ್ಕ್ ಹೆಗಲೇರಿದೆ.