WPL Final 2024 ಬೆಂಗಳೂರು ವನಿತೆಯರ ಹೋರಾಟಕ್ಕೆ ಫಲ, ಆರ್‌ಸಿಬಿಗೆ ಬಂತು ಚೊಚ್ಚಲ ಟ್ರೋಫಿ!

By Suvarna News  |  First Published Mar 17, 2024, 10:39 PM IST

ಮಹಿಳಾ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆದ್ದುಕೊಂಡಿದೆ. ಡೆಲ್ಲಿ ಮಣಿಸಿದ ಆರ್‌ಸಿಬಿ ಅಭೂತಪೂರ್ವ ಗೆಲುವಿನೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಇದು ಆರಂಭವಷ್ಟೆ, ಇನ್ನೆರಡೇ ತಿಂಗಳಲ್ಲಿ ಮತ್ತೊಂದು ಕಿರೀಟ ಬರಲಿದೆ ಎಂದು ಅಭಿಮಾನಿಗಳು ಅಭಿಯಾನ ಶುರುಮಾಡಿದ್ದಾರೆ.


ದೆಹಲಿ(ಮಾ.17) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಟ್ರೋಫಿ ಗೆದ್ದುಕೊಂಡಿದೆ. ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿ ಪ್ರಶಸ್ತಿ ಗೆದ್ದುಕೊಂಡಿದೆ.  ಡೆಲ್ಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿದ ಆರ್‌ಸಿಬಿ ವನಿತೆಯರು 19.3 ಓವರ್‌ಗಳಲ್ಲಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. 2024ನೇ ಸಾಲಿನ ಐಪಿಎಲ್ ಆರ್‌ಸಿಬಿಗೆ ಪಾಲಿಗೆ ಕಠಿಣ ಪ್ರಯತ್ನದ ಜೊತೆಗೆ ಟ್ರೋಫಿ ಕಿರೀಟವನ್ನು ತಂದುಕೊಟ್ಟಿದೆ. ವನಿತೆಯರಿಂದ ಆರಂಭಗೊಂಡಿರುವ ಈ ಟ್ರೋಫಿ ಆಟ, ಇದೀಗ ಫಾಪ್ ಡುಪ್ಲೆಸಿಸ್ ನೇತೃತ್ವದ ಪುರುಷ ಆರ್‌ಸಿಬಿ ತಂಡಕ್ಕೂ ವಿಸ್ತರಣೆಯಾಗಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್, ಸೋಫಿಯಾ ಮೊಲಿನೆಕ್ಸ್ ಅದ್ಭುತ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ 113 ರನ್‌ಗೆ ಆಲೌಟ್ ಆಗಿತ್ತು. ಹೀಗಾಗಿ ಬೆಂಗಳುರು ನಾರಿಯರು ಸುಲಭ ಟಾರ್ಗೆಟ್ ಪಡೆದುಕೊಂಡಿತು. ಆದರೆ ಫೈನಲ್ ಪಂದ್ಯ, ದಿಟ್ಟ ಹೋರಾಟ ಮೂಲಕ ಫೈನಲ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಚೇಸಿಂಗ್ ಸುಲಭವಾಗಿರಲಿಲ್ಲ. 

Tap to resize

Latest Videos

ನಾಯಕಿ ಸ್ಮತಿ ಮಂಧನಾ ಹಾಗೂ ಸೋಫಿ ಡಿವೈನ್ ಹೋರಾಟದಿಂದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು. ಆರಂಭದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟ ಆರ್‌ಸಿಬಿ ಬಳಿಕ ಅಬ್ಬರಿಸಲು ಆರಂಭಿಸಿತು. ಅಷ್ಟರಲ್ಲೇ ಸೊಫಿ ವಿಕೆಟ್ ಪತನಗೊಂಡಿತು. 49 ರನ್‌ಗಳಿಗೆ ಆರ್‌ಸಿಬಿ ಮೊದಲ ವಿಕೆಟ್ ಕಳೆದುಕೊಂಡಿತು. ಸೋಫಿ 32 ರನ್ ಸಿಡಿಸಿ ನಿರ್ಗಮಿಸಿದರು.

ಸ್ಮೃತಿ ಮಂಧನಾ ಸ್ಪೋಟಕ ಬ್ಯಾಟಿಂಗ್‌ಗಿಂತ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಮಂಧನಾ 31 ರನ್ ಸಿಡಿಸಿ ಔಟಾದರು. ಮಂಧನಾ ವಿಕೆಟ್ ಪತನ ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಪೆರಿ ಕ್ರೀಸ್‌ನಲ್ಲಿರುವುದು ಸಮಾಧಾನ ತಂದಿತ್ತು.  ರಿಚಾ ಘೋಷ್ ಜೊತೆ ಸೇರಿದ ಪೆರಿ ನಿಧಾನವಾಗಿ ಇನ್ನಿಂಗ್ಸ್ ಮುಂದುವರಿಸಿದರು.

ಒಂದೊಂದು ಎಸೆತವೂ ಮುಖ್ಯವಾಯಿತು. ಡಾಟ್ ಬಾಲ್ ಅಭಿಮಾನಿಗಳ ಮುಖಂದಲ್ಲಿ ಕರಿನೆರಳು ಮೂಡಿಸಿತ್ತು. ಆದರೆ ಪೆರಿ ಬೌಂಡರಿಯಿಂದ ಪುಟಿದೆದ್ದ ಆರ್‌ಸಿಬಿ ಗೆಲುವಿಗೆ ಅಂತಿಮ 6 ಎಸೆತದಲ್ಲಿ 5 ರನ್ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ಒಂದು ರನ್ ಸಿಡಿಸುವಲ್ಲಿ ರಿಚಾ ಘೋಷ್ ಯಶಸ್ವಿಯಾದರು. ಎರಡನೇ ಎಸೆತದಲ್ಲೂ ಒಂದು ರನ್ ಪಡೆದುಕೊಂಡಿತು. ರಿಚಾ ಘೋಷ್ ಬೌಂಡರಿ ನರವಿನಿಂದ ಆರ್‌ಸಿಬಿ 19.3 ಓವರ್‌ಗಳಲ್ಲಿ ಗುರಿ ತಲುಪಿತು. 8 ವಿಕೆಚ್ ಗೆಲುವು ದಾಖಲಿಸಿದ ಆರ್‌ಸಿಬಿ ಟ್ರೋಫಿ ಗೆದ್ದುಕೊಂಡಿತು. ಪೆರಿ ಅಜೇಯ 35 ರನ್ ಸಿಡಿಸಿದರೆ, ರಿಚಾ ಅಜೇಯ 17 ರನ್ ಸಿಡಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಫಾಲಿ ವರ್ಮಾ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ 64 ರನ್ ಜೊತೆಯಾಟ ನೀಡಿತು. ಆದರೆ 44 ರನ್ ಸಿಡಿಸಿದ ಶೆಫಾಲಿ ವರ್ಮಾ ವಿಕೆಟ್ ಪತನದೊಂದಿಗೆ ಡೆಲ್ಲಿ ಕುಸಿತ ಕಂಡಿತು. ಆರ್‌ಸಿಬಿ ಅದ್ಭುತ ಬೌಲಿಂಗ್ ದಾಳಿಗೆ ಡೆಲ್ಲಿ ಬಳಿ ಉತ್ತರವೇ ಇರಲಿಲ್ಲ. ಲ್ಯಾನಿಂಗ್ 23 ರನ್ ಸಿಡಿಸಿ ಔಟಾದರು. ಆರಂಭಿಕ ಬ್ಯಾಟರ್ ವಿಕೆಟ್ ಪತನಗೊಂಡ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಪೆವಿಲಿಯನ್ ಪರೇಡ್ ನಡೆಸಿತು. 18.3 ಓವರ್‌ಗಳಲ್ಲಿ 113 ರನ್‌ಗೆ ಆಲೌಟ್ ಆಯಿತು.

click me!