
ಬೆಂಗಳೂರು(ಮಾ.18): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ 8 ವಿಕೆಟ್ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸ್ಮೃತಿ ಮಂಧನಾ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಮೊದಲ ಪವರ್ ಪ್ಲೇನ 6 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವಿಕೆಟ್ ನಷ್ಟವಿಲ್ಲದೇ 64 ಬಾರಿಸಿತ್ತು. ಆದರೆ ಪವರ್-ಪ್ಲೇ ಬಳಿಕ ಮ್ಯಾಜಿಕ್ ಮಾಡಿದ ಆರ್‌ಸಿಬಿ ತಂಡ ಡೆಲ್ಲಿಯನ್ನು ಕೇವಲ 113 ರನ್‌ಗೆ ನಿಯಂತ್ರಿಸಿತು. ಆದರೆ ಸೋಫಿ ಮೋಲಿನ್ಯುಕ್ಸ್ ಒಂದೇ ಓವರ್‌ನಲ್ಲಿ ಪ್ರಮಖ ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಲವಾದ ಪೆಟ್ಟು ನೀಡಿದರು. ಇದಾದ ಬಳಿಕ ಕೊನೆಯಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ 4 ವಿಕೆಟ್ ಕಬಳಿಸಿ ಡೆಲ್ಲಿ ಪಡೆಯನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
WPL ಕಪ್ ಗೆದ್ದು ಮುತ್ತಿನಂತ ಕನ್ನಡ ಮಾತಾಡಿದ ಸ್ಮೃತಿ ಮಂಧನಾ..! ವಿಡಿಯೋ ವೈರಲ್
ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿ ಸಾಕಷ್ಟು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಸೋಫಿ ಡಿವೈನ್, ನಾಯಕಿ ಸ್ಮೃತಿ ಮಂಧನಾ ಜವಾಬ್ದಾರಿಯುತ ಆಟವಾಡಿದರು. ಇನ್ನು ಇದಾದ ಬಳಿಕ ಎಲೈಸಿ ಪೆರ್ರಿ ಹಾಗೂ ರಿಚಾ ಘೋಷ್ ಯಾವುದೇ ಅಪಾಯವಿಲ್ಲದೇ ಇನ್ನೂ ಮೂರು ಎಸೆತಗಳನ್ನು ಬಾಕಿ ಇರುವಂತೆಯೇ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.
ಐಪಿಎಲ್‌ನಲ್ಲಿ ಆರ್‌ಸಿಬಿ ಪುರುಷರ ತಂಡವು ಕಳೆದ 16 ವರ್ಷಗಳಿಂದಲೂ ಆಡುತ್ತಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಮಹಿಳಾ ಆರ್‌ಸಿಬಿ ತಂಡವು ತಮ್ಮ ಎರಡನೇ ಪ್ರಯತ್ನದಲ್ಲೇ ಕಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ಮಹಿಳಾ ತಂಡದ ಗೆಲುವನ್ನು ಟ್ವೀಟ್ ಮೂಲಕ ಸಂಭ್ರಮಿಸಿದ್ದಾರೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ತಂಡದಲ್ಲಿ ಇರಲು ರೋಹಿತ್ ಶರ್ಮಾ ಪಟ್ಟು?
ಅದರಲ್ಲೂ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ, ಸದ್ಯ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಯುಜುವೇಂದ್ರ ಚಹಲ್ ಕನ್ನಡದಲ್ಲೇ ಆರ್‌ಸಿಬಿ ಚಾಂಪಿಯನ್ ಆಗಿದ್ದನ್ನೂ ಪ್ರಖ್ಯಾತ ಹಾಡಿನ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡದ ಶ್ರೀ ಮಂಜುನಾಥ ಸಿನಿಮಾದ ಆನಂದ.. ಪರಮಾನಂದ ಹಾಡನ್ನು ಸ್ಮರಿಸಿಕೊಂಡಿದ್ದಾರೆ. ಮಹಿಳಾ ಆರ್‌ಸಿಬಿ ಪಡೆಯ ಫೋಟೋ ಜತೆಗೆ ಚಹಲ್, "ಆನಂದ.. ರಮಾನಂದ.... ಪರಮಾನಂದ...." 🎶 ನಮ್ಮ RCB ತಂಡಕ್ಕೆ ಅಭಿನಂದನೆಗಳು! ❤🔥" ಎಂದು ಶುಭ ಕೋರಿದ್ದಾರೆ.
ಈಗ ಆರ್‌ಸಿಬಿ ತಂಡದಲ್ಲಿ ಇಲ್ಲದಿದ್ದರೂ ಚಹಲ್ ನಮ್ಮ ಆರ್‌ಸಿಬಿ ತಂಡ ಎನ್ನುವ ಮೂಲಕ ಮಾಜಿ ತಂಡದ ಮೇಲಿನ ಅಭಿಮಾನವನ್ನು ಮತ್ತೊಮ್ಮೆ ಅನಾವರಣ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟ ನಾಯಕಿ ಸ್ಮೃತಿ ಮಂಧನಾ ಕೂಡಾ ಇದೀಗ ಕನ್ನಡದಲ್ಲೇ 'ಈ ಸಲ ಕಪ್ ನಮ್ದು' ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.
ಇನ್ನು ಇದಷ್ಟೆ ಅಲ್ಲದೇ ಕನ್ನಡಿಗ ಹಾಗೂ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮಯಾಂಕ್ ಅಗರ್‌ವಾಲ್ ಕೂಡಾ ಈ ಸಲ ಕಪ್ ನಮ್ದೇ ಎಂದು ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.