ಮಹಿಳಾ ಕ್ರಿಕೆಟ್‌ನ ಹೊಸ ಸ್ಟಾರ್ ಕನ್ನಡತಿ ಶ್ರೇಯಾಂಕ ಪಾಟೀಲ್‌..!

Published : Mar 11, 2023, 08:10 AM IST
ಮಹಿಳಾ ಕ್ರಿಕೆಟ್‌ನ ಹೊಸ ಸ್ಟಾರ್ ಕನ್ನಡತಿ ಶ್ರೇಯಾಂಕ ಪಾಟೀಲ್‌..!

ಸಾರಾಂಶ

* ಆರ್‌ಸಿಬಿ ಪರ ಮಿಂಚಿನ ಪ್ರದರ್ಶನ ತೋರುತ್ತಿರುವ ಶ್ರೇಯಾಂಕ ಪಾಟೀಲ್ * ಭವಿಷ್ಯದ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್ * ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಶ್ರೇಯಾಂಕ ಪಾಟೀಲ್

-ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ಮಾ.11): ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ನಿರೀಕ್ಷಿತ ಆರಂಭ ಪಡೆಯದಿದ್ದರೂ, ತಂಡದಲ್ಲಿರುವ ಕರ್ನಾಟಕದ 20 ವರ್ಷದ ಆಲ್ರೌಂಡರ್‌ ಶ್ರೇಯಾಂಕ ಪಾಟೀಲ್‌ ಸದ್ದು ಮಾಡುತ್ತಿದ್ದಾರೆ. ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ‘ಭವಿಷ್ಯದ ಸ್ಟಾರ್‌’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೇಯಾಂಕ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಆರ್‌ಸಿಬಿ ತಂಡದ ಅನಾವರಣ ಕಾರ್ಯಕ್ರಮದ ವೇಳೆ ಶ್ರೇಯಾಂಕ ತಮ್ಮ ಕ್ರಿಕೆಟ್‌ ಪಯಣದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಮನಬಿಚ್ಚಿ ಮಾತನಾಡಿದರು.

ಸ್ಥಳೀಯ ಕ್ರಿಕೆಟಿಗರಿಗೆ ತಂಡದಲ್ಲಿ ಜಾಗ ನೀಡುವುದಿಲ್ಲ ಎನ್ನುವ ಅಪವಾದ ಆರ್‌ಸಿಬಿ ಮೇಲಿದೆ. ಆದರೆ ಶ್ರೇಯಾಂಕರಂತಹ ಪ್ರತಿಭಾನ್ವಿತ ಆಟಗಾರ್ತಿಯನ್ನು ಆರ್‌ಸಿಬಿ ಕ್ರಿಕೆಟ್‌ ಜಗತ್ತಿಗೆ ಪರಿಚಯಿಸುತ್ತಿದೆ. ದೇಸಿ ಟೂರ್ನಿಗಳಲ್ಲಿ ಮಿಂಚಿದ್ದ ಶ್ರೇಯಾಂಕ, ಡಬ್ಲ್ಯುಪಿಎಲ್‌ನಲ್ಲಿ ಸಿಕ್ಕಿರುವ ಸೀಮಿತ ಅವಕಾಶದಲ್ಲಿ ತಮ್ಮಲ್ಲಿರುವ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರಿನ ನಾಗರಬಾವಿಯ ರಾಜೇಶ್‌ ಪಾಟೀಲ್‌ ಎಂಬುವವರ ಪುತ್ರಿ. ರಾಜೇಶ್‌ ಹಿಂದೊಮ್ಮೆ ರಾಜ್ಯ ರಣಜಿ ತಂಡದ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರಂತೆ. ಕ್ರಿಕೆಟ್‌ ಅಕಾಡೆಮಿವೊಂದನ್ನು ಸಹ ನಡೆಸುತ್ತಿದ್ದಾರೆ. ಹೀಗಾಗಿ ಕ್ರಿಕೆಟ್‌ ಬಗ್ಗೆ ಪ್ರೀತಿ ಶ್ರೇಯಾಂಕಗೆ ರಕ್ತದಲ್ಲೇ ಇದೆ. ಆಟದ ಬಗ್ಗೆ ಪ್ರೀತಿ, ಅಭಿಮಾನ ಇಷ್ಟೇ ಇದ್ದರೆ ಸಾಕಾಗುವುದಿಲ್ಲವಲ್ಲ. ಹಂತ ಹಂತವಾಗಿ ಮೇಲೇರಲು ತಪ್ಪಸ್ಸೇ ಮಾಡಬೇಕಾಗುತ್ತದೆ.

8-9ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಆರಂಭಿಸಿದ ಶ್ರೇಯಾಂಕ, ಶುರುವಿನಲ್ಲಿ ಖುಷಿಗಷ್ಟೇ ಆಡುತ್ತಿದ್ದರಂತೆ. ‘ತಂದೆಯ ಅಕಾ​ಡೆ​ಮಿ​ಗೆ ವಾರಾಂತ್ಯ​ದಲ್ಲಿ ತರ​ಬೇ​ತಿಗೆ ಹೋಗುತ್ತಿದ್ದೆ. ಈ ವೇಳೆ ನಿಮ್ಮ ಮಗಳು ಮುಂದೊಂದು ದಿನ ಉತ್ತಮ ಕ್ರಿಕೆ​ಟರ್‌ ಆಗ​ಲೂ​ಬ​ಹುದು. ಕ್ರಿಕೆಟ್‌ ಕಲಿ​ಸು​ ಎಂದು ನಮ್ಮ ತಂದೆಯ ಸ್ನೇಹಿತ ಪುಟ್ಟ​ಸ್ವಾಮಿ ಎನ್ನುವವರು ಸಲಹೆ ನೀಡಿದರು. ಇದೇ ನನ್ನ ಕ್ರಿಕೆಟ್‌ ಜೀವನದ ಮೊದಲ ಟರ್ನಿಂಗ್‌ ಪಾಯಿಂಟ್‌’ ಎಂದು ಶ್ರೇಯಾಂಕ ನೆನಪಿನಾಳಕ್ಕಿಳಿದರು.

WPL 2023 ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಆರ್‌ಸಿಸಿಬಿ ಮಹಿಳೆರಿಗೆ ಸತತ 4ನೇ ಸೋಲು!

ಶ್ರೇಯಾಂಕ 2025ರ ವೇಳೆಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಗುರಿ ಹೊಂದಿದ್ದಾರೆ. ಡಬ್ಲ್ಯುಪಿಎಲ್‌ನಲ್ಲಿನ ಅವರ ಪ್ರದರ್ಶನದಿಂದ ನಿರೀಕ್ಷೆಗೂ ಮೊದಲೇ ಅವರಿಗೆ ಭಾರತ ತಂಡದ ಬಾಗಿಲು ತೆರೆದರೆ ಅಚ್ಚರಿಯಿಲ್ಲ.

ಪ್ರಾಕ್ಟೀ​ಸ್‌​ಗಾಗಿ ತಂದೆ ಮನೆ​ಯಿಂದ ದೂರ!

ಶ್ರೇಯಾಂಕ ಅಭ್ಯಾಸಕ್ಕಾಗಿ ಅನಗತ್ಯ ಓಡಾಟ ತಪ್ಪಿಸಲು ತಮ್ಮ ಮನೆ ಬಿಟ್ಟು ಯಲಹಂಕದಲ್ಲಿರುವ ಕೋಚಿಂಗ್‌ ಅಕಾಡೆಮಿ ಬಳಿ ಕಳೆದ 2 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶ್ರೇಯಾಂಕಗೆ ಕೋಚ್‌ ಅರ್ಜುನ್‌ ದೇವ್‌ ಕೇವಲ ಕೋಚ್‌ ಮಾತ್ರವಲ್ಲ, ತಂದೆಯ ಸಮಾನರು ಕೂಡ. ‘ಕೋಚ್‌ ಅರ್ಜುನ್‌ ದೇವ್‌ ನನ್ನ ಪಾಲಿಗೆ ಸರ್ವಸ್ವ. ಅವ​ರಿಗೆ ನನ್ನ ತಂದೆಯ ಸ್ಥಾನ ಕೊಟ್ಟಿ​ದ್ದೇನೆ. ಅವರು ನನ್ನೆಲ್ಲಾ ಬೇಕು, ಬೇಡ​ಗ​ಳನ್ನು ಅವರೇ ಪೂರೈ​ಸು​ತ್ತಿದ್ದಾರೆ. ಕೋಚಿಂಗ್‌, ಫಿಟ್ನೆಸ್‌, ಡಯ​ಟ್‌ ಸೇರಿದಂತೆ ಎಲ್ಲವನ್ನೂ ನಿಭಾ​ಯಿ​ಸು​ತ್ತಿ​ದ್ದಾರೆ. ಅವ​ರನ್ನು ಸರ್‌ ಬದ​ಲು ‘ಪಾ’ ಎಂದೇ ಕರೆ​ಯು​ತ್ತೇ​ನೆ’ ಎಂದು ಶ್ರೇಯಾಂಕ ಭಾವುಕರಾಗಿ ನುಡಿದರು.

ದೊಡ್ಡ ಮೆಟ್ಟಿಲುಗಳನ್ನು ಏರುತ್ತಿರುವ ಶ್ರೇಯಾಂಕ!

ಶ್ರೇಯಾಂಕ ಸತತವಾಗಿ ತಮ್ಮ ವಯಸ್ಸಿಗೂ ಮೀರಿದ ಗುರಿಗಳನ್ನು ಸಾಧಿಸುತ್ತಾ ಸಾಗಿದ್ದಾರೆ. ನಾನು ಅಪ್ಪಟ ವಿರಾಟ್‌ ಕೊಹ್ಲಿ ಫ್ಯಾನ್‌ ಎನ್ನುವ ಅವರು, ಕೊಹ್ಲಿಯಂತೆಯೇ ದೊಡ್ಡ ದೊಡ್ಡ ಗುರಿ ಸಾಧಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. 12ನೇ ವಯ​ಸ್ಸಿಗೇ ಕರ್ನಾ​ಟಕ ಅಂಡ​ರ್‌-16 ತಂಡದಲ್ಲಿ ಸ್ಥಾನ ಪಡೆದ ಅವರು, 13ನೇ ವಯ​ಸ್ಸಿಗೆ ಅಂಡ​ರ್‌-19, 15ನೇ ವಯ​ಸ್ಸಿಗೆ ಅಂಡ​ರ್‌-23 ತಂಡ​ವನ್ನು ಪ್ರತಿ​ನಿ​ಧಿ​ಸಿ​ದರು. 3 ವರ್ಷ​ಗಳ ಹಿಂದೆ ರಾಜ್ಯ ಹಿರಿ​ಯರ ತಂಡಕ್ಕೂ ಆಯ್ಕೆ​ಯಾ​ಗಿ ಅಲ್ಲಿಯೂ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ. ಇತ್ತೀ​ಚೆ​ಗಷ್ಟೇ ಕೊನೆ​ಗೊಂಡ ರಾಷ್ಟ್ರೀಯ ಮಹಿಳಾ ಏಕ​ದಿನ ಟೂರ್ನಿ​ಯಲ್ಲಿ 20 ವಿಕೆಟ್‌ ಕಿತ್ತು, ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಭಾರತ ‘ಎ’ ತಂಡವನ್ನೂ ಶ್ರೇಯಾಂಕ ಪ್ರತಿ​ನಿ​ಧಿ​ಸಿ​ದ್ದಾ​ರೆ.

ಲಕ್ಕಿ ನಂಬ​ರ್‌ನಲ್ಲೇ ಆರ್‌​ಸಿ​ಬಿ​ಗೆ ಬಿಕ​ರಿ!

2002ರ ಜುಲೈ 31ರಂದು ಹುಟ್ಟಿದ ಶ್ರೇಯಾಂಕಗೆ 317 ಲಕ್ಕಿ ನಂಬರ್‌. ಹರಾ​ಜು ಪಟ್ಟಿ​ಯಲ್ಲೂ ಅವ​ರಿಗೆ ಇದೇ ನಂಬರ್‌ ಸಿಕ್ಕಿತ್ತು. ಆದರೆ ಯಾವು​ದಾ​ದರೂ ತಂಡಕ್ಕೆ ಹರಾ​ಜಾ​ಗುವ ಒಂದಿಷ್ಟು ಭರ​ವ​ಸೆಯೂ ಇಲ್ಲ​ದಿ​ದ್ದಾಗ ಆರ್‌​ಸಿ​ಬಿಯೇ ಅವ​ರನ್ನು 10 ಲಕ್ಷ ರು. ಖರೀ​ದಿ​ಸಿತು. ಇದರ ಶಾಕ್‌​ನಿಂದ ಹೊರ​ಬರ​ಲಾಗದೆ ಇಡೀ ದಿನ ಊಟ, ನೀರು ಮುಟ್ಟಿಲ್ಲ ಎನ್ನು​ತ್ತಾರೆ ಶ್ರೇಯಾಂಕ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿ ಅಂಗಳದಲ್ಲಿ ಕರುನಾಡಿನ ನಂದಿನಿ ಎಂಟ್ರಿ? ಕೆಎಂಎಫ್‌ನ ಹೊಸ ಲೆಕ್ಕಾಚಾರ ಏನು?
ಅಮೂಲ್‌ಗೆ ಗೇಟ್‌ಪಾಸ್‌, ಆರ್‌ಸಿಬಿಗೆ ಬಲಗಾಲಿಟ್ಟು ಬರುವ ಹಾದಿಯಲ್ಲಿ ಕೆಎಂಎಫ್‌ ನಂದಿನಿ!