
ಮುಂಬೈ(ಮಾ.04): ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 7.30ಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಆರಂಭವಾಗಬೇಕಿದ್ದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಪಂದ್ಯವು ಕೊಂಚ ತಡವಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯವು ಅರ್ಧ ಗಂಟೆ ತಡವಾಗಿ ಅಂದರೆ ಇಂದು ಸಂಜೆ 8 ಗಂಟೆಯಿಂದ ಆರಂಭವಾಗಲಿದೆ.
ಹೌದು, ಉದ್ಘಾಟನಾ ಪಂದ್ಯವು ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭವು ಇಂದು ಸಂಜೆ 6.25ಕ್ಕೆ ಆರಂಭವಾಗಲಿದೆ ಎಂದು ಟೂರ್ನಿಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಸಮಯವನ್ನು ಪರಿಷ್ಕರಿಸಲಾಗಿದೆ ಎನ್ನುವು ಮಾಹಿತಿಯನ್ನು ನೀಡಿಲ್ಲ.
ಇನ್ನು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಟಾಸ್ ಇಂದು ಸಂಜೆ ಭಾರತೀಯ ಕಾಲಮಾನ 7.30ಕ್ಕೆ ನಡೆಯಲಿದೆ.
ಟೂರ್ನಿ ಆಯೋಜಕರು ಹೊರಡಿಸಿರುವ ಪ್ರಕಟಣೆಯಲ್ಲಿ, ಸ್ಟೇಡಿಯಂನ ಬಾಗಿಲುಗಳು ಸಂಜೆ 4 ಗಂಟೆಯಿಂದಲೇ ಓಪನ್ ಆಗಿರಲಿದ್ದು, ಪ್ರೇಕ್ಷಕರು 6.25ರಿಂದ ಆರಂಭವಾಗಲಿರುವ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಉದ್ಘಟನಾ ಪಂದ್ಯಕ್ಕೂ ಮೊದಲು ಅದ್ಧೂರಿ ಒಪನಿಂಗ್ ಸೆರೆಮನಿ ಆಯೋಜಿಸಲಾಗಿದೆ. ಬಾಲಿವುಡ್ ನಟಿ ಕೃತಿ ಸನನ್, ಕಿಯಾರ ಅಡ್ವಾನಿ ಹೆಜ್ಜೆ ಹಾಕಲಿದ್ದಾರೆ. ಇದರ ಜೊತೆಗೆ ಕೆನಡಾದ ಖ್ಯಾತ ಸಿಂಗ್ AP ದಿಲೋನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
WPL 2023: ಇಂದಿನಿಂದ ಮಹಿಳಾ ಐಪಿಎಲ್, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಗುಜರಾತ್ ಜೈಂಟ್ಸ್ ಫೈಟ್
ಮೈದಾನದಲ್ಲಿ WPL ಟೂರ್ನಿ ಕಣ್ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಗೆ ಅಭಿಮಾನಿಗಳನ್ನು ಸೆಳೆಯಲು ಬಿಸಿಸಿಐ ಅತೀ ಕಡಿಮೆ ಮೊತ್ತದ ಟಿಕೆಟ್ ಘೋಷಿಸಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಎಲ್ಲಾ 20 ಪಂದ್ಯದ ಟಿಕೆಟ್ 100 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಿಕೆಟ್ ಆನ್‌ಲೈನ್ ಬುಕಿಂಗ್ ಆರಂಭಗೊಂಡಿದೆ.
ಯಾವೆಲ್ಲಾ ತಂಡಗಳು ಪಾಲ್ಗೊಳ್ಳಲಿವೆ? ಯಾರು ಯಾವ ತಂಡದ ನಾಯಕಿಯರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್ - ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್ - ಮೆಗ್ ಲ್ಯಾನಿಂಗ್
ಯುಪಿ ವಾರಿಯರ್ಸ್- ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್ - ಬೆಥ್ ಮೂನಿ
ಟೂರ್ನಿ ಮಾದರಿ ಹೇಗೆ?
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದ್ದು, ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.