ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವಿಶ್ವಕಪ್‌ ಇದ್ದಂತೆ: ಉಮೇಶ್ ಯಾದವ್

By Suvarna NewsFirst Published May 21, 2021, 4:22 PM IST
Highlights

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಜ್ಜಾಗುತ್ತಿದೆ ಟೀಂ ಇಂಡಿಯಾ

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ

* ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌, ವಿಶ್ವಕಪ್‌ ಫೈನಲ್‌ ಇದ್ದಂತೆ ಎಂದ ವೇಗಿ ಉಮೇಶ್ ಯಾದವ್

ಮುಂಬೈ(ಮೇ.21): ಇತ್ತೀಚೆಗಿನ ಕೆಲವು ವರ್ಷಗಳಿಂದ ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ವಿಶ್ವದ ಶ್ರೇಷ್ಠ ವೇಗದ ಬೌಲಿಂಗ್‌ ಪಡೆ ಎಂದು ಗುರುತಿಸಿಕೊಂಡಿದೆ.

ಸದ್ಯ ನ್ಯೂಜಿಲೆಂಡ್ ವಿರುದ್ದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಆಂಗ್ಲರ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸ ಮಾಡಲು ಸಜ್ಜಾಗುತ್ತಿದೆ. ಇದೀಗ ಟೀಂ ಇಂಡಿಯಾ ಅನುಭವಿ ವೇಗದ ಬೌಲರ್‌ ಉಮೇಶ್ ಯಾದವ್, ಐಸಿಸಿ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಗೆಲ್ಲುವುದು ವಿಶ್ವಕಪ್‌ ಗೆಲುವಿಗೆ ಸಮ ಎಂದು ಬಣ್ಣಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಕುರಿತಂತೆ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ನಾಗ್ಪುರ ವೇಗಿ, ಲಾಕ್‌ಡೌನ್‌ ವೇಳೆ ನಾವೆಲ್ಲ ಮಾನಸಿಕವಾಗಿ ಪಾಸಿಟಿವ್ ಆಗಿದ್ದೆವು. ನಮ್ಮ ಗುರಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆಲ್ಲುವುದಾಗಿದೆ. ಲಾಕ್‌ಡೌನ್ ವೇಳೆ ನಾವೆಲ್ಲ ಒಬ್ಬೊಬ್ಬರಾಗಿಯೇ ಅಭ್ಯಾಸ ನಡೆಸುತ್ತಿದ್ದೆವು. ಈಗ ನಾವೆಲ್ಲಾ ಒಟ್ಟಿಗೆ ಸೇರಿದ ಮೇಲೆ ಇನ್ನಷ್ಟು ಹುರುಪು ಬಂದಂತೆ ಆಗಿದೆ ಎಂದು ಉಮೇಶ್ ಯಾದವ್ ಹೇಳಿದ್ದಾರೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌: 4,000 ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಿಸಲು ಅವಕಾಶ

ಇಶಾಂತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಹೇಳಿದಂತೆ ಟೆಸ್ಟ್‌ ಪಂದ್ಯಗಳನ್ನು ಆಡುವವರ ಪಾಲಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಎನ್ನುವುದು ಟೆಸ್ಟ್ ವಿಶ್ವಕಪ್ ಇದ್ದಂತೆ. ಮುಂಬರುವ ದಿನಗಳಲ್ಲಿ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಟೆಸ್ಟ್‌ ಪಂದ್ಯಗಳನ್ನಾಡುವ ಆಟಗಾರರ ಪಾಲಿಗೆ ಇದೇ ವಿಶ್ವಕಪ್. ನಾನೂ ಕೂಡಾ ಅವರಂತೆಯೇ ಯೋಚಿಸುತ್ತಿದ್ದೇನೆ. ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಬೇಕಿದ್ದರೆ ಸಾಕಷ್ಟು ಒಳ್ಳೆಯ ತಂಡಗಳನ್ನು ಸೋಲಿಸಬೇಕಿರುತ್ತದೆ. ಅದು ಸುಲಭವಲ್ಲ ಎಂದು ಉಮೇಶ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಪರ 48 ಟೆಸ್ಟ್‌ ಪಂದ್ಯಗಳನ್ನಾಡಿ 148 ವಿಕೆಟ್ ಕಬಳಿಸಿರುವ ಉಮೇಶ್ ಯಾದವ್, ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್‌ ಪಡೆ ಪ್ರಸ್ತುತ ವಿಶ್ವದ ಶ್ರೇಷ್ಠ ಬೌಲಿಂಗ್ ಪಡೆ ಎಂದು ಯಾವುದೇ ಅಳುಕಿಲ್ಲದೇ ಹೇಳಬಹುದಾಗಿದೆ. ನಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮತ್ತಷ್ಟು ಮಾರಕದಾಳಿ ನಡೆಸಲು ಸಿದ್ದತೆ ನಡೆಸುತ್ತಿರುವುದಾಗಿ ಉಮೇಶ್ ಯಾದವ್‌ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದೆ. ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದೆ.  
 

click me!