ದೇಶಕ್ಕೆ ನನ್ನ ಕೊಡುಗೆ ಏನೆಂಬುದು ಇಡೀ ಜಗತ್ತಿಗೆ ಗೊತ್ತು; ಟೀಕಾಕಾರರ ಬಾಯಿ ಮುಚ್ಚಿಸಿದ ಮಾಲಿಂಗ

By Suvarna NewsFirst Published Nov 24, 2020, 4:33 PM IST
Highlights

ಲಂಕಾ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದರ ಬಗ್ಗೆ ಅನುಭವಿ ವೇಗಿ ಲಸಿತ್ ಮಾಲಿಂಗ ಸಮರ್ಥನೆ ಮಾಡಿಕೊಂಡಿದ್ದಾರೆ, ಮಾತ್ರವಲ್ಲದೇ ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಲಂಬೊ(ನ.24): ಲಂಕಾ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದಕ್ಕೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಟಿ20 ನಾಯಕ ಲಸಿತ್ ಮಾಲಿಂಗ, ದೇಶಕ್ಕೆ ನನ್ನ ಕೊಡುಗೆ ಏನೆಂಬುದು ಇಡೀ ಜಗತ್ತಿಗೆ ಗೊತ್ತಿದೆ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ ಆಡಲು ವಿಮಾನ ಹತ್ತುವ ಲಸಿತ್ ಮಾಲಿಂಗ ತಮ್ಮ ದೇಶದಲ್ಲೇ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‌ನಲ್ಲೇಕೆ ಆಡುತ್ತಿಲ್ಲ ಎಂದು ಕೆಲವು ಅಭಿಮಾನಿಗಳು ಟೀಕಿಸಿದ್ದರು. ಲಂಕಾ ಪ್ರೀಮಿಯರ್ ಲೀಗ್ ಇದೇ ನವೆಂಬರ್ 26ರಿಂದ ಆರಂಭವಾಗಲಿದೆ. ಇದೀಗ ಟೀಕಾಕಾರರ ಪ್ರಶ್ನೆಗಳಿಗೆ ವೇಗಿ ಮಾಲಿಂಗ ಖಡಕ್ ಉತ್ತರ ನೀಡಿದ್ದಾರೆ.

ಲಂಕಾ ಪ್ರೀಮಿಯರ್ ಲೀಗ್ ಎಲ್ಲಾ ರೀತಿಯ ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ. ಕೇವಲ ಮನೆಯ ಜಿಮ್‌ನಲ್ಲಿ ಬೆವರು ಹರಿಸಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಅದಕ್ಕೆ ತಕ್ಕಷ್ಟು ಸಿದ್ದತೆಗಳು ಬೇಕಾಗುತ್ತವೆ. ನಾನೊಂದು ಸರಿಯಾದ ಯಾರ್ಕರ್ ಹಾಕಬೇಕು ಎಂದರೆ ನೆಟ್ಸ್‌ನಲ್ಲಿ ಒಂದು ಸಾವಿರ ಸಲ ಯಾರ್ಕರ್ ಹಾಕುವುದನ್ನು ಅಭ್ಯಾಸ ಮಾಡಿರುತ್ತೇನೆ. ಯಾರ್ಕರ್ ಅಚಾನಕ್ಕಾಗಿ ಹಾಕುವುದಲ್ಲ ಎಂದು ಯಾರ್ಕರ್‌ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಹೇಳಿದ್ದಾರೆ.

LPL 2020: ಕ್ಯಾಂಡಿ ಟಸ್ಕರ್ಸ್‌ ತಂಡ ಕೂಡಿಕೊಂಡ ಆರ್‌ಸಿಬಿ ವೇಗಿ
  
ನಾನು ಒಂದು ವೇಳೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಯಾರ್ಕರ್ ಹಾಕಲು ವಿಫಲವಾದರೆ ಆಗ ಜನ ಐಪಿಎಲ್‌ನಲ್ಲಾದರೆ ಯಾರ್ಕರ್ ಹಾಕ್ತೀರಾ, LPLನಲ್ಲಿ ಯಾಕೆ ಯಾರ್ಕರ್ ಹಾಕುತ್ತಿಲ್ಲ ಎನ್ನುತ್ತಾರೆ. ನಾವೆಷ್ಟೇ ಸಾಧಿಸಿದರೂ ಒಮ್ಮೊಮ್ಮೆ ಟೀಕೆಗಳನ್ನು ಸ್ವೀಕರಿಸಲೇ ಬೇಕಾಗುತ್ತದೆ. ನನ್ನ ದೇಶಕ್ಕೆ ನಾನೇನು ಕೊಟ್ಟಿದ್ದೇನೆ ಎನ್ನುವುದು ಇಡೀ ಜಗತ್ತಿಗೆ ಗೊತ್ತು. ಸಾಕಷ್ಟು ಜನರು ಈಗಲೂ ನನ್ನ ಮೇಲೆ ಅದೇ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಅಷ್ಟೇ ಸಾಕು. ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಲಿಂಗ ಹೇಳಿದ್ದಾರೆ.

ಕೌಟುಂಬಿಕ ಕಾರಣಗಳಿಂದ ಮುಂಬೈ ಇಂಡಿಯನ್ಸ್‌ ವೇಗಿ ಲಸಿತ್ ಮಾಲಿಂಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಮಾಲಿಂಗ ಅನುಪಸ್ಥಿತಿಯ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ಮಣಿಸಿ 5ನೇ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇನ್ನು ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಾಲೆ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದ ಮಾಲಿಂಗ, ವಯುಕ್ತಿಕ ಕಾರಣದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು.
 

click me!