ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ನ.24): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವೇಗಿ ಇಶಾಂತ್ ಶರ್ಮಾ ಹೊರಬಿದ್ದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಈ ಇಬ್ಬರು ಆಟಗಾರರು ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆ.
ಮೂರನೇ ಟೆಸ್ಟ್ ಪಂದ್ಯ ಜನವರಿ 07ರಂದು ಆರಂಭವಾಗಲಿದ್ದು, ಇದಕ್ಕೂ ಮುನ್ನ ಈ ಇಬ್ಬರು ಆಟಗಾರರು ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿ ಬಳಿಕ ಆಸ್ಟ್ರೇಲಿಯಾದಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಗಾಯಕ್ಕೆ ತುತ್ತಾಗಿದ್ದು, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ಬೆಂಗಳೂರಿನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
undefined
ಕಡೇ ಪಕ್ಷ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆದರೂ ಡಿಸೆಂಬರ್ 08ರ ವೇಳೆಗೆ ಆಸ್ಟ್ರೇಲಿಯಾಗೆ ವಿಮಾನವೇರಿದರೂ ಡಿಸೆಂಬರ್ 22ರ ವರೆಗೆ ಕ್ವಾರಂಟೈನ್‌ನಲ್ಲೇ ಇರಬೇಕಾಗುತ್ತದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಗಿಸಿ ಟೀಂ ಇಂಡಿಯಾದ 32 ಆಟಗಾರರು ನೇರವಾಗಿ ಆಸೀಸ್ ವಿರುದ್ಧ ಸರಣಿಯಾಡಲು ಸಿಡ್ನಿಗೆ ಬಂದಿಳಿದ್ದರು. ಯುಎಇನಲ್ಲಿ ಬಯೋಬಬಲ್‌ನಲ್ಲಿದ್ದರಿಂದ ಸಿಡ್ನಿಗೆ ಬಂದು ಕ್ವಾರಂಟೈನ್‌ನಲ್ಲಿರುವಾಗಲೇ ಮೈದಾನಕ್ಕಿಳಿದು ಆಟಗಾರರು ಅಭ್ಯಾಸ ಆರಂಭಿಸಿದ್ದರು.ಆದರೆ ಈ ಅವಕಾಶ ರೋಹಿತ್ ಹಾಗೂ ಇಶಾಂತ್ ಶರ್ಮಾಗೆ ಸಿಗುವುದಿಲ್ಲ. ಯಾಕೆಂದರೆ ಈ ಇಬ್ಬರು ಆಟಗಾರರು ಬೆಂಗಳೂರಿನಲ್ಲಿದ್ದು, ಯಾವುದೇ ಬಯೋ ಸೆಕ್ಯೂರ್ ಬಬಲ್ ವ್ಯವಸ್ಥಗೆ ಒಳಗಾಗಿಲ್ಲ. ಹೀಗಾಗಿ ಬಹುತೇಕ ಈ ಇಬ್ಬರು ಆಟಗಾರರು ಮೊದಲೆರಡು ಪಂದ್ಯಗಳಿಂದ ವಂಚಿತರಾಗಲಿದ್ದಾರೆ.
ಕೊಹ್ಲಿ ಆಸೀಸ್‌ನಲ್ಲಿ ಅಬ್ಬರಿಸದಿದ್ರೆ, ಟೀಂ ಇಂಡಿಯಾಗೆ ಹೀನಾಯ ಸೋಲು ಖಚಿತ; ಕ್ಲಾರ್ಕ್
ಇಶಾಂತ್ ಶರ್ಮಾ ಟಿ20 ಮಾದರಿಯ ಕ್ರಿಕೆಟ್‌ಗೆ ಸಂಪೂರ್ಣ ಫಿಟ್ ಆಗಿದ್ದಾರೆ. ಆದರೆ ಟೆಸ್ಟ್ ಪಂದ್ಯದಲ್ಲಿ ತಂಡದ ಪ್ರಮುಖ ಬೌಲರ್ ಆಗಿರುವ ಇಶಾಂತ್ ಶರ್ಮಾ ದಿನವೊಂದಕ್ಕೆ ಕನಿಷ್ಠವೆಂದರೂ 20 ಓವರ್ ಬೌಲಿಂಗ್ ಮಾಡಬೇಕಾಗುತ್ತದೆ. ಹೀಗಾಗಿ ಇಶಾಂತ್ ಶರ್ಮಾಗೆ ಇನ್ನೂ 4 ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ಮಾಹಿತಿ ನೀಡಿವೆ ಎಂದು ವರದಿಯಾಗಿದೆ.