ವಾಂಖೇಡೆಯಲ್ಲಿ ರನ್ ಸುರಿಮಳೆ; ಕೊಹ್ಲಿ-ಅಯ್ಯರ್ ಶತಕ ನಂಟು, ಕಿವೀಸ್ ಗೆಲ್ಲಲು ಗುರಿ 398

By Naveen Kodase  |  First Published Nov 15, 2023, 5:56 PM IST

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮರು ಯೋಚನೆ ಮಾಡದೇ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಿಂದಲೇ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್, ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.


ಮುಂಬೈ(ನ.15): ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿಂದ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 397 ರನ್ ಬಾರಿಸಿದ್ದು, ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಗುರಿ ನೀಡಿದೆ. 

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮರು ಯೋಚನೆ ಮಾಡದೇ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಿಂದಲೇ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್, ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 8.2 ಓವರ್‌ಗಳಲ್ಲಿ 71 ರನ್‌ಗಳ ಜತೆಯಾಟವಾಡಿತು. ಎಂದಿನಂತೆ ಸ್ಪೋಟಕ ಆರಂಭ ಒದಗಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಕೇವಲ 29 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಸಿಡಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು.

Tap to resize

Latest Videos

ಕೊಹ್ಲಿ-ಗಿಲ್ ಜುಗಲ್ಬಂದಿ: ರೋಹಿತ್ ವಿಕೆಟ್ ಪತನದ ಬಳಿಕ ಗಿಲ್ ಜತೆಯಾದ ವಿರಾಟ್ ಕೊಹ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅದರಲ್ಲೂ ಒಂದು ತುದಿಯಲ್ಲಿ ಶುಭ್‌ಮನ್ ಗಿಲ್ ಸ್ಪೋಟಕ ಆಟವಾಡಿದರೆ, ಮತ್ತೊಂದು ತುದಿಯಲ್ಲಿ ಕೊಹ್ಲಿ ಉತ್ತಮ ಸಾಥ್ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 86 ಎಸೆತಗಳನ್ನು ಎದುರಿಸಿ 93 ರನ್‌ಗಳ ಜತೆಯಾಟವಾಡಿತು. ಕೇವಲ 65 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾಗಿ ರಿಟೈರ್ಡ್‌ ಹರ್ಟ್ ಪಡೆದು ಮೈದಾನ ತೊರೆದರು.

50ನೇ ಏಕದಿನ ಶತಕ ಚಚ್ಚಿದ ವಿರಾಟ್ ಕೊಹ್ಲಿ: ಈ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಮತ್ತೊಂದು ಆಕರ್ಷಕ ಶತಕ ಸಿಡಿಸುವ ಮೂಲಕ ಸೆಮಿಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೂ ವಿರಾಟ್ ಕೊಹ್ಲಿ ಪಾತ್ರರಾದರು. ಈ ಮೊದಲು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಏಕದಿನ ಶತಕ ಸಿಡಿಸಿದ್ದರು. ಆದರೆ ಇದೀಗ ಸಚಿನ್ ದಾಖಲೆ ಬ್ರೇಕ್ ಆಗಿದೆ. ಅಂತಿಮವಾಗಿ ವಿರಾಟ್ ಕೊಹ್ಲಿ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 117 ರನ್ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. 

ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಕೊಹ್ಲಿ:

ಭರ್ಜರಿ ಲಯದಲ್ಲಿರುವ ವಿರಾಟ್ ಕೊಹ್ಲಿ, ಇದೀಗ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ 2003ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 673 ರನ್ ಬಾರಿಸಿದ್ದರು. ಇದೀಗ ವಿರಾಟ್ ಕೊಹ್ಲಿ 711 ರನ್ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟರು.

ಸತತ ಎರಡನೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಇನ್ನು ವಿರಾಟ್ ಕೊಹ್ಲಿ ಜತೆ ಮೂರನೇ ವಿಕೆಟ್‌ಗೆ ಶತಕದ ಜತೆಯಾಟ ನಿಭಾಯಿಸಿದ ಲೋಕಲ್ ಹೀರೋ ಶ್ರೇಯಸ್ ಅಯ್ಯರ್, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಬೆಂಗಳೂರಿನಲ್ಲಿ ನೆದರ್‌ಲೆಂಡ್ಸ್ ಎದುರು ಅಜೇಯ ಶತಕ ಸಿಡಿಸಿದ್ದ ಅಯ್ಯರ್, ಇದೀಗ ಮತ್ತೊಂದು ಸ್ಪೋಟಕ ಶತಕ ಸಿಡಿಸಿ ಮಿಂಚಿದರು. ಶ್ರೇಯಸ್ ಅಯ್ಯರ್ ಕೇವಲ 70 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 105 ರನ್ ಬಾರಿಸಿ ಟ್ರೆಂಟ್ ಬೌಲ್ಟ್‌ಗೆ ಬಲಿಯಾದರು
 

click me!