ಸತತ ಸೋಲುಗಳಿಂದ ಕಂಗಾಲಾಗಿದ್ದ ಇಂಗ್ಲೆಂಡ್ ತಂಡ ಕೊನೆಗೂ ಗೆಲುವಿನ ಸಮಾಧಾನ ಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 160 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದೆ.
ಪುಣೆ (ನ.8): ತಂಡದ ಆಟಗಾರರ ಸಾಂಘಿಕ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಗೂ ಗೆಲುವಿನ ಸಮಾಧಾನ ಕಂಡಿದೆ. ವಿಶೇಷವೆಂದರೆ, ಇಂಗ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ಒಂದು ತಿಂಗಳ ಬಳಿಕ ಗೆಲುವಿನ ಸಮಾಧಾನ ಕಂಡಿದೆ. ಅಕ್ಟೋಬರ್ 10 ರಂದು ಬಾಂಗ್ಲಾದೇಶ ವಿರುದ್ಧ 137 ರನ್ ಗೆಲುವು ಕಂಡಿದ್ದ ಇಂಗ್ಲೆಂಡ್ ತಂಡ ಆ ಬಳಿಕ ಆಡಿದ ಐದೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬುಧವಾರ ಪುಣೆಯಲ್ಲಿ ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಸೋಲಿಸುವ ಮೂಲಕ ಅಂದಾಜು ಒಂದು ತಿಂಗಳ ಬಳಿಕ ಗೆಲುವಿನ ಖುಷಿ ಆಚರಿಸಿದೆ. ಅದಲ್ಲದೆ, ಈ ಫಲಿತಾಂಶವು ಇಂಗ್ಲೆಂಡ್ 2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ಹಾದಿಯಲ್ಲಿದೆ ಎಂದು ಖಚಿತಪಡಿಸಿತು.ನೆದರ್ಲೆಂಡ್ಸ್ ತಂಡದ ಗೆಲುವಿಗೆ 340 ರನ್‌ಗಳ ಬೃಹತ್ ಗುರಿಯನ್ನು ನಿಗದಿ ಮಾಡಿದ್ದ ಇಂಗ್ಲೆಂಡ್ ತಂಡ ಕೇವಲ 179 ರನ್‌ಗೆ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ದೊಡ್ಡ ಮಟ್ಟದ ಗೆಲುವನ್ನು ಸಂಪಾದನೆ ಮಾಡಿತು. ಇದಕ್ಕೆ ಬೆನ್ ಸ್ಟೋಕ್ಸ್ ಅವರ ವಿಶ್ವಕಪ್‌ನ ಚೊಚ್ಚಲ ಶತಕವೂ ಕಾರಣವಾಯಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲಿ ಡೇವಿಡ್ ಮಲಾನ್ 87 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಬಲ ತುಂಬಿದ್ದರು. ಬಳಿಕ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಕರ್ಷಕ 108 ರನ್ ಸಿಡಿಸಿದ್ದಲ್ಲದೆ, ಬಾಲಂಗೋಚಿ ಆಟಗಾರರ ನೆರವಿನಿಂದ ದೊಡ್ಡ ಮೊತ್ತ ಕಲೆಹಾಕಿದ್ದರು. ಬೆನ್ ಸ್ಟೋಕ್ಸ್ ತಮ್ಮ 84 ಎಸೆತಗಳ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಹಾಗೂ ಅಷ್ಟೇ ಪ್ರಮಾಣದ ಬೌಂಡರಿಗಳನ್ನು ಬಾರಿಸಿದ್ದರು. ಗೆಲುವಿಗೆ ಅಸಾಧ್ಯ ಎನ್ನುವಂಥ ಗುರಿ ಪಡೆದುಕೊಂಡಿದ್ದ ನೆದರ್ಲೆಂಡ್ಸ್ ತಂಡ ಪಂದ್ಯದ ಯಾವುದೇ ಹಂತದಲ್ಲೂ ಹೋರಾಟ ತೋರುವ ಶಕ್ತಿ ತೋರಿಸಲಿಲ್ಲ. ಡೇವಿಡ್ ವಿಲ್ಲಿ ಹಾಗೂ ಕ್ರಿಸ್ ವೋಕ್ಸ್ ಪ್ರಮುಖ ಹಂತಗಳಲ್ಲಿ ವಿಕೆಟ್ ಉರುಳಿಸಿ ಇಂಗ್ಲೆಂಡ್‌ಗೆ ಮೇಲುಗೈ ನೀಡಿದರು. ಕೊನೆಯಲ್ಲಿ ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಹಾಗೂ ಮೊಯೀನ್ ಅಲಿ ತಮ್ಮ ಸಾಮರ್ಥ್ಯ ತೋರಿಸಿದ್ದರಿಂದ ನೆದರ್ಲೆಂಡ್ಸ್ ತಂಡ 37.2 ಓವರ್‌ಗಳಲ್ಲಿಯೇ ಆಲೌಟ್ ಆಯಿತು.
ಕ್ರಿಸ್ ವೋಕ್ಸ್ ಹೊಸ ಚೆಂಡಿನಲ್ಲಿ ಮೊದಲ ಎಸೆತದಿಂದಲೇ ಪರಿಣಾಮಕಾರಿಯಾಗಿದ್ದರು. ಸಾಕಷ್ಟು ಬಾರಿ ವಿಕೆಟ್ ಉರುಳಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ಇದರ ಪರಿಣಾಮವಾಗಿ ಆಲ್ರೌಂಡ್ ಆಟಗಾರ ಮ್ಯಾಕ್ಸ್ ಓದೌದ್ ವಿಕೆಟ್ ಉರುಳಿಸಿದರೆ, ಡೇವಿಡ್ ವಿಲ್ಲಿ ಕಾಲಿನ್ ಅಕೆರ್‌ಮನ್‌ರನ್ನು ಪೆವಿಲಿಯನ್‌ಗಟ್ಟಿದರು. ಈ ಹಂತದಲ್ಲಿ ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್, ವೆಸ್ಲಿ ಬ್ಯಾರೆಸಿಯನ್ನು ಸೇರಿಕೊಂಡರು. ಮೊದಲ ಪವರ್ ಪ್ಲೇ ಮುಗಿಯುವವರೆಗೂ ತಂಡಕ್ಕೆ ಯಾವುದೇ ಹಾನಿ ಆಗದಂತೆ ನೋಡಿಕೊಂಡರು. ಆ ಬಳಿಕ ಕೆಲವು ಆತ್ಮವಿಶ್ವಾಸದ ಶಾಟ್‌ಗಳನ್ನು ಬಾರಿಸಿದರು. ಮೂರನೇ ವಿಕೆಟ್‌ಗೆ 54 ರನ್ ಸೇರಿಸಿದ್ದ ವೇಳೆ ಎಂಗಲ್‌ಬ್ರೆಕ್ಟ್‌ನೊಂದಿಗಿನ ಸಂವಹನ ಕೊರತೆಯಿಂದಾಗಿ ಬ್ಯಾರೆಸಿ ರನ್‌ಔಟ್ ಆದರು.
ರನ್‌ರೇಟ್ ಏರುತ್ತಿದ್ದ ಕಾರಣದಿಂದ ಬಿರುಸಿನ ಆಟಕ್ಕೆ ಮುಂದಾದ ಎಂಗೆಲ್‌ಬ್ರೆಕ್ಟ್ (33) ತಮ್ಮ ವಿಕೆಟ್ ಕಳೆದುಕೊಂಡರು. ಈ ಹಂತದಲ್ಲಿ ಪಂದ್ಯದಲ್ಲಿ ವಾಪಾಸ್ ಬರಲು ಬ್ಯಾಟ್ಸ್‌ಮನ್ ಒಬ್ಬರಿಂದ ಮ್ಯಾಕ್ಸ್‌ವೆಲ್ ರೀತಿಯ ಇನ್ನಿಂಗ್ಸ್ ಬರಬೇಕಾಗಿತ್ತು. ಆದರೆ, ಇಂಗ್ಲೆಂಡ್ ಬೌಲರ್‌ಗಳ ಮುಂದೆ ಅದು ಸಾಧ್ಯವಾಗಲಿಲ್ಲ. 25 ಓವರ್‌ಗಳ ನಂತರ, ತೇಜ ನಿಡಮನೂರು (41*) ಆಗಮನವು ನೆದರ್ಲೆಂಡ್ಸ್ ಸ್ಕೋರಿಂಗ್ ರೇಟ್ ಏರಿಸಲು ನೆರವಾಯಿತು.. ಕ್ರೀಸ್‌ಗೆ ಬಂದ ಕೂಡಲೇ ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್ ಆರನೇ ವಿಕೆಟ್‌ಗೆ 50 ಎಸೆತಗಳಲ್ಲಿ 59 ರನ್ ಸೇರಿಸಿದರು.
ಮೈಕ್‌ನಲ್ಲೇ ಗಾಳಿ ಬಿಟ್ಟ ಡೇವಿಡ್ ವಾರ್ನರ್ : ಮೈಕ್ ಟೆಸ್ಟಿಂಗಾ ಎಂದ ನೆಟ್ಟಿಗರು!
ಆದರೆ, ನಾಯಕ ಸ್ಕಾಟ್ ಎಡ್ವರ್ಡ್ಸ್ (38) ಮತ್ತು ಲೋಗನ್ ವ್ಯಾನ್ ಬೀಕ್ ಅವರನ್ನು ಕಳೆದುಕೊಂಡ ನೆದರ್ಲೆಂಡ್ಸ್ ತಂಡದ ಚೇಸಿಂಗ್ ಚೇಸ್ ಹಳಿತಪ್ಪಿತು. ನೆದರ್ಲೆಂಡ್ಸ್ ತನ್ನ ಅಂತಿಮ ಐದು ವಿಕೆಟ್‌ಗಳನ್ನು ಕೇವಲ 16 ರನ್‌ಗಳಿಗೆ ಕಳೆದುಕೊಂಡಿತು, ಅಂದರೆ ಅವರು 179 ರನ್‌ಗಳಿಗೆ ಆಲೌಟ್ ಆಯಿತು.
ವಿಶ್ವಕಪ್‌ನಲ್ಲಿ ಎಂದೂ ಕಂಡರಿಯದ ಆಟವಾಡಿದ RCB ಪ್ಲೇಯರ್, ಸೋಲಿನಂಚಿನಲ್ಲಿದ್ದ ಆಸೀಸ್ ಗೆಲ್ಲಿಸಿದ ಮ್ಯಾಕ್ಸ್‌ವೆಲ್!