
ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ನಿರ್ಣಾಯಕ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಏಷ್ಯಾಕಪ್‌ನಲ್ಲಿ ಪುರುಷರ ತಂಡ ಹಸ್ತಲಾಘವಕ್ಕೆ ನಿರಾಕರಿಸಿದಂತೆ, ಮಹಿಳಾ ತಂಡವೂ ಪಾಕ್ ಆಟಗಾರ್ತಿಯರೊಂದಿಗೆ ಹ್ಯಾಂಡ್‌ಶೇಕ್ ಮಾಡುವುದಿಲ್ಲ ಎಂದು ಬಿಸಿಸಿಐ ಮೊದಲೇ ಸ್ಪಷ್ಟಪಡಿಸಿದ್ದರಿಂದ, ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕ್ ಕ್ಯಾಪ್ಟನ್ ಫಾತಿಮಾ ಸನಾ ಟಾಸ್ ನಂತರ ಹ್ಯಾಂಡ್‌ಶೇಕ್ ಮಾಡಲಿಲ್ಲ.
ಆದರೆ, ನಿಜವಾಗಿ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದಿದ್ದು ಭಾರತ. ಮ್ಯಾಚ್ ರೆಫ್ರಿ ಶಾಂತ್ರಿ ಫ್ರಿಟ್ಜ್ ಮತ್ತು ನಿರೂಪಕಿ ಮೆಲ್ ಜೋನ್ಸ್ ಮಾಡಿದ ದೊಡ್ಡ ತಪ್ಪಿನಿಂದ ಪಾಕಿಸ್ತಾನಕ್ಕೆ ಟಾಸ್ ನೀಡಲಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಟಾಸ್‌ಗಾಗಿ ನಾಣ್ಯವನ್ನು ಚಿಮ್ಮಿದಾಗ, ಫಾತಿಮಾ ಸನಾ 'ಟೇಲ್ಸ್' ಎಂದು ಕರೆದಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಅಭಿಮಾನಿಗಳು ಪತ್ತೆಹಚ್ಚಿದ್ದಾರೆ. ಆದರೆ, ನಿರೂಪಕಿ ಮೆಲ್ ಜೋನ್ಸ್, ಫಾತಿಮಾ 'ಹೆಡ್ಸ್' ಎಂದು ಕರೆದಿದ್ದಾರೆ ಎಂದು ಮೈಕ್‌ನಲ್ಲಿ ಹೇಳಿದರು. ನಾಣ್ಯ 'ಹೆಡ್ಸ್' ಬಿದ್ದಿದೆ ಎಂದು ಮ್ಯಾಚ್ ರೆಫ್ರಿ ಖಚಿತಪಡಿಸಿದಾಗ, ಫಾತಿಮಾ ಸನಾ ಟಾಸ್ ಗೆದ್ದಿದ್ದಾರೆ ಎಂದು ನಿರೂಪಕಿ ಘೋಷಿಸಿ, ಮಾತನಾಡಲು ಆಹ್ವಾನಿಸಿದರು. ಸನಾ 'ಟೇಲ್ಸ್' ಎಂದು ಕರೆದಿದ್ದು ಹತ್ತಿರದಿಂದಲೇ ಕೇಳಿಸಿಕೊಂಡಿದ್ದ ಮ್ಯಾಚ್ ರೆಫ್ರಿ ಕೂಡ ನಿರೂಪಕಿಯನ್ನು ತಿದ್ದಲಿಲ್ಲ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಪಾಕ್ ಎದುರು ಭಾರತಕ್ಕೆ ಟಾಸ್ ವೇಳೆ ಮಹಾಮೋಸವಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ತಾನು ನಿಜವಾಗಿ 'ಟೇಲ್ಸ್' ಎಂದು ಕರೆದಿದ್ದು, ಆದರೆ ಬಿದ್ದಿದ್ದು 'ಹೆಡ್ಸ್' ಆದ್ದರಿಂದ ಭಾರತ ಟಾಸ್ ಗೆದ್ದಿದೆ ಎಂದು ಸರಿಪಡಿಸಲು ಪಾಕಿಸ್ತಾನ ನಾಯಕ ಸನಾ ಮುಂದಾಗಲಿಲ್ಲ. ನಿರೂಪಕಿ ಮತ್ತು ಮ್ಯಾಚ್ ರೆಫ್ರಿಯ ತಪ್ಪನ್ನು ಸರಿಪಡಿಸದೆ, ಫಾತಿಮಾ ಸನಾ ಜಾಣತನದಿಂದ ಮೌನವಾಗಿದ್ದರು. ಟಾಸ್ ಗೆದ್ದ ಖುಷಿಯಲ್ಲಿ ಪಾಕ್ ಕ್ಯಾಪ್ಟನ್ ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಭಾರತದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಕೂಡ ಸನಾ 'ಟೇಲ್ಸ್' ಎಂದು ಕರೆದು 'ಹೆಡ್ಸ್' ಬಿದ್ದಿದ್ದನ್ನು ಗಮನಕ್ಕೆ ತರಲಿಲ್ಲ.
ಟಾಸ್‌ಗಾಗಿ ನಾಣ್ಯವನ್ನು ಚಿಮ್ಮಿದಾಗ ಸನಾ 'ಟೇಲ್ಸ್' ಎಂದು ಹೇಳಿದ್ದು ಮತ್ತು ನಿರೂಪಕಿ 'ಹೆಡ್ಸ್' ಎಂದು ಗಟ್ಟಿಯಾಗಿ ಹೇಳಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಇಂತಹ ದೊಡ್ಡ ಪ್ರಮಾದ ನಡೆದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮ್ಯಾಚ್ ರೆಫ್ರಿ ಮತ್ತು ನಿರೂಪಕಿಯ ತಪ್ಪಿನ ವಿರುದ್ಧ ಭಾರತ ಐಸಿಸಿಗೆ ಅಧಿಕೃತವಾಗಿ ದೂರು ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತ ಮಹಿಳಾ ಕ್ರಿಕೆಟ್ ತಂಡವು ಎಚ್ಚರಿಕೆಯ ಆರಂಭ ಪಡೆದಿದೆ. ಮೊದಲ ವಿಕೆಟ್‌ಗೆ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧನಾ ಜೋಡಿ 48 ರನ್‌ಗಳ ಜತೆಯಾಟವಾಡಿತು. ಮಂಧನಾ ಮತ್ತೊಮ್ಮೆ ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. ಮಂಧನಾ 23 ರನ್ ಬಾರಿಸಿ ಪಾತಿಮಾ ಸನಾಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 31 ರನ್ ಸಿಡಿಸಿದರು.
ಇನ್ನು ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಹರ್ಲಿನ್ ಡಿಯೊಲ್ 65 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 46 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಕೇವಲ 19 ರನ್‌ಗಳಿಗೆ ಸೀಮಿತವಾಯಿತು. ಇನ್ನು ಜಮಿಮಾ ರೋಡ್ರಿಗಸ್ 32 ರನ್ ಗಳಿಸಿ ನಶ್ರಾ ಸಂಧುಗೆ ವಿಕೆಟ್ ಒಪ್ಪಿಸಿದರು. ಸದ್ಯ ಭಾರತ ಮಹಿಳಾ ತಂಡವು 37 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 164 ರನ್ ಬಾರಿಸಿದ್ದು, ಸವಾಲಿನ ಮೊತ್ತ ಕಲೆಹಾಕುವತ್ತ ಮುನ್ನುಗ್ಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.