ಏಷ್ಯಾಕಪ್ ಕದ್ದೊಯ್ದ ಮೊಹ್ಸಿನ್ ನಖ್ವಿಗೆ ಪಾಕ್ ಸರ್ಕಾರದಿಂದ ಗೋಲ್ಡ್ ಮೆಡಲ್! ಎಂತಾ ಕಾಲ ಬಂತಪ್ಪಾ?

Published : Oct 05, 2025, 04:42 PM IST
Mohsin Naqvi

ಸಾರಾಂಶ

ಏಷ್ಯಾಕಪ್ ಟ್ರೋಫಿ ವಿವಾದದ ಹಿನ್ನೆಲೆಯಲ್ಲಿ, ಭಾರತದ ವಿರುದ್ಧ ನಿಲುವು ತಳೆದಿದ್ದಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನವು 'ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಗೋಲ್ಡ್ ಮೆಡಲ್' ನೀಡಿ ಗೌರವಿಸಲು ನಿರ್ಧರಿಸಿದೆ.  

ಕರಾಚಿ: ಏಷ್ಯಾಕಪ್ ಟ್ರೋಫಿ ವಿವಾದದ ನಡುವೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನ ಗೌರವ ಸಲ್ಲಿಸಿದೆ. ಭಾರತದ ವಿರುದ್ಧ ತಾತ್ವಿಕ ಮತ್ತು ಧೈರ್ಯದ ನಿಲುವು ತೆಗೆದುಕೊಂಡ ನಖ್ವಿಗೆ 'ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಗೋಲ್ಡ್ ಮೆಡಲ್' ನೀಡಲು ನಿರ್ಧರಿಸಲಾಗಿದೆ. ಪಿಸಿಬಿ ಅಧ್ಯಕ್ಷ ಮತ್ತು ಗೃಹ ಸಚಿವರೂ ಆಗಿರುವ ನಖ್ವಿಯ ನಿಲುವುಗಳು ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ದೇಶದ ಹೆಮ್ಮೆಯನ್ನು ಹೆಚ್ಚಿಸಿವೆ ಎಂದು ಪಾಕಿಸ್ತಾನ ಭಾವಿಸಿದೆ. ಭಾರತ ಟ್ರೋಫಿ ಗೆದ್ದರೂ ಸರಿಯಾಗಿ ನೀಡದೇ ಕದ್ದೊಯ್ದ ನಖ್ವಿಗೆ ಪಾಕ್‌ ಸನ್ಮಾನಿಸಲು ಹೊರಟಿರುವುದು ಹಾಸ್ಯಾಸ್ಪದ ಎನಿಸಿಕೊಂಡಿದೆ.

ನಖ್ವಿಗೆ ಗೋಲ್ಡ್ ಮೆಡಲ್ ನೀಡಲು ಶಿಫಾರಸು

ಸಿಂಧ್ ಮತ್ತು ಕರಾಚಿ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ, ಅಡ್ವೊಕೇಟ್ ಗುಲಾಮ್ ಅಬ್ಬಾಸ್ ಜಮಾಲ್ ಅವರು ನಖ್ವಿಗೆ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಗೋಲ್ಡ್ ಮೆಡಲ್ ನೀಡಬೇಕೆಂದು ಶಿಫಾರಸು ಮಾಡಿದ್ದರು. ಕರಾಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಚಿನ್ನದ ಪದಕವನ್ನು ಪ್ರದಾನ ಮಾಡಲಾಗುವುದು ಎಂದು ವರದಿಯಾಗಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದ ಭಾರತ, ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು.

ಇದರಿಂದಾಗಿ ನಖ್ವಿ ಟ್ರೋಫಿ ಮತ್ತು ಪದಕಗಳೊಂದಿಗೆ ಕ್ರೀಡಾಂಗಣವನ್ನು ತೊರೆದಿದ್ದರು. ನಖ್ವಿ ವಿರುದ್ಧ ಐಸಿಸಿಗೆ ದೂರು ನೀಡಲು ಬಿಸಿಸಿಐ ನಿರ್ಧರಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಪಾಕಿಸ್ತಾನದ ಗೃಹ ಸಚಿವ ನಖ್ವಿ ವಿವಾದಕ್ಕೆ ಕಾರಣವಾಗಿದ್ದರು. ನಖ್ವಿ ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ.

ಭಾರತ ಎದುರು ಹಟಮಾರಿ ಧೋರಣೆ ಮುಂದುವರೆಸಿರುವ ನಖ್ವಿ

ಈ ಹಿಂದೆ ಏಷ್ಯಾಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದನ್ನು ಪ್ರತಿಭಟಿಸಿ, ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಬಹಿಷ್ಕಾರದ ಬೆದರಿಕೆ ಹಾಕಿತ್ತು. ಭಾರತಕ್ಕೆ ಅನುಕೂಲಕರ ನಿಲುವು ತಳೆದಿದ್ದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಬದಲಾಯಿಸದಿದ್ದರೆ ಯುಎಇ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು. ಕೊನೆಗೆ ಸಂಧಾನ ಮಾತುಕತೆಯ ನಂತರ, ಒಂದು ಗಂಟೆ ತಡವಾಗಿ ಪಾಕಿಸ್ತಾನವು ಯುಎಇ ವಿರುದ್ಧದ ಪಂದ್ಯವನ್ನು ಆಡಲು ಒಪ್ಪಿಕೊಂಡಿತು.

ಇದಾದ ಬಳಿಕ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಆಗ ಬದ್ದ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ ಒಂಬತ್ತನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕ್ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಇನ್ನು ಏಷ್ಯಾಕಪ್ ಫೈನಲ್‌ಗೂ ಮೊದಲೇ ಭಾರತ ತಂಡವು ತಾವು ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಇನ್ನು ಇದಾದ ಬಳಿಕ ಭಾರತ ಚಾಂಪಿಯನ್ ಆದರೂ, ತಾವೇ ಭಾರತಕ್ಕೆ ಟ್ರೋಫಿ ನೀಡಬೇಕು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ನಖ್ವಿ ಪಟ್ಟು ಹಿಡಿದಿದ್ದರು. ಆದರೆ ಭಾರತೀಯ ಆಟಗಾರರು ಟ್ರೋಫಿ ಸ್ವೀಕರಿಸದೇ ಪ್ರಶಸ್ತಿ ಪ್ರಧಾನ ಸಮಾರಂಭದಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದ ನಖ್ವಿ, ಎಸಿಸಿ ಅಧ್ಯಕ್ಷನಾಗಿ ನಾನು ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಂದು ಸಿದ್ದವಾಗಿದ್ದೆ, ಈಗಲೂ ರೆಡಿಯಿದ್ದೇನೆ. ಅವರಿಗೆ ನಿಜವಾಗಿಯೂ ಟ್ರೋಫಿ ಬೇಕಿದ್ರೆ ಎಸಿಸಿ ಕಚೇರಿಗೆ ಬಂದು ನನ್ನಿಂದ ಪಡೆದುಕೊಳ್ಳಲಿ, ಒಂದಂತೂ ಸ್ಪಷ್ಟ ನಾನೇನು ತಪ್ಪು ಮಾಡಿಲ್ಲ, ನಾನು ಭಾರತದ ಕ್ಷಮೆಯನ್ನು ಕೇಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ